ತುಮಕೂರು: ಐಫೋನ್ ದುರಸ್ತಿಗೆ ದುಬಾರಿ ಶುಲ್ಕ ವಸೂಲಿ ಮಾಡಿದ ಆ್ಯಪಲ್ ಕಂಪನಿ ಹಾಗೂ ಅದರ ಮಾರಾಟ ಮಳಿಗೆಯ ಮಾಲೀಕನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಭಾರಿ ದಂಡ ವಿಧಿಸಿ ಗ್ರಾಹಕನಿಗೆ ನ್ಯಾಯ ಒದಗಿಸಿದೆ. ಫೋನ್ (iPhone repair) ಖರೀದಿಸಿದ ಮೂರು ತಿಂಗಳಲ್ಲೇ ಬ್ಯಾಟರಿ ಚಾರ್ಜಿಂಗ್ ಸಮಸ್ಯೆ ಎದುರಾಗಿದ್ದರಿಂದ ದುರಸ್ತಿ ಮಾಡಲು ಕಂಪನಿಯವರು ದುಬಾರಿ ಶುಲ್ಕ ವಿಧಿಸಿದ್ದರು. ಇದರಿಂದ ಬೇಸತ್ತ ಗ್ರಾಹಕ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿ ಪರಿಹಾರ ಪಡೆದಿದ್ದಾರೆ.
ಏನಿದು ಪ್ರಕರಣ?
ತಾಲೂಕಿನ ಹೆಬ್ಬೂರು ಹೋಬಳಿ ರಾಮೇನಹಳ್ಳಿಯ ಶಿವಾನಂದ್ ಎಂಬುವರು ಕುಣಿಗಲ್ನ ಎನ್.ಟಿ ಕಮ್ಯುನಿಕೇಷನ್ ಮೊಬೈಲ್ ಮಾರಾಟ ಮಳಿಗೆಯಲ್ಲಿ 74,900 ರುಪಾಯಿಗೆ ಆ್ಯಪಲ್ ಕಂಪನಿಯ ಐಫೋನ್ ಖರೀದಿಸಿದ್ದರು. ಖರೀದಿಸಿದ ಮೂರು ತಿಂಗಳಲ್ಲೇ ಬ್ಯಾಟರಿ ಚಾರ್ಜಿಂಗ್ ಸಮಸ್ಯೆ ಎದುರಾಯಿತು. ಮೊಬೈಲ್ ದುರಸ್ತಿ ಮಾಡಲು ಕಂಪನಿಯವರು 63 ಸಾವಿರ ಶುಲ್ಕ ವಿಧಿಸಿದ್ದರು.
ಮೊಬೈಲ್ ಖರೀದಿಸಿದ ಮೂರು ತಿಂಗಳಲ್ಲೇ ಸಮಸ್ಯೆ ಆರಂಭವಾಗಿದೆ. ಇನ್ನೂ ವಾರಂಟಿ ಸಮಯ ಇದೆ. ದುರಸ್ತಿಗೆ ದುಬಾರಿ ಶುಲ್ಕ ವಿಧಿಸಲಾಗಿದೆ. ಹಾಗಾಗಿ ಹೊಸ ಮೊಬೈಲ್ ನೀಡಬೇಕು ಎಂದು ಶಿವಾನಂದ್ ಒತ್ತಾಯಿಸಿದ್ದರು. ಇದಕ್ಕೆ ಆ್ಯಪಲ್ ಕಂಪನಿ ಹಾಗೂ ಫೋನ್ ಮಾರಾಟ ಮಾಡಿದ ಅಂಗಡಿಯವರು ಒಪ್ಪದಿದ್ದಾಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದರು.
ಈ ಸುದ್ದಿಯನ್ನೂ ಓದಿ | Reliance Jio: ಜಿಯೊ ಕ್ಲೌಡ್ ಪಿಸಿ! ಮನೆಯ ಟಿವಿ ಕೇವಲ 100 ರೂ.ಯಲ್ಲಿ ಇನ್ನು ಕಂಪ್ಯೂಟರ್!
ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಜಿ.ಟಿ.ವಿಜಯಲಕ್ಷ್ಮಿ, ಸದಸ್ಯರಾದ ನಿವೇದಿತ ಅವರು ಗ್ರಾಹಕರಿಗೆ ಪರಿಹಾರ ನೀಡಲು ಆದೇಶಿದ್ದಾರೆ. ಮೊಬೈಲ್ ಖರೀದಿಸಿದ ಗ್ರಾಹಕನಿಗೆ ದಂಡದ ರೂಪದಲ್ಲಿ 63,475 ರೂಪಾಯಿ ನೀಡಬೇಕು. ಈ ಹಣಕ್ಕೆ 2023 ನವೆಂಬರ್ 10 ರಿಂದ ಶೇ.8ರಷ್ಟು ಬಡ್ಡಿ ಹಾಗೂ ಪರಿಹಾರವಾಗಿ 8 ಸಾವಿರ ರೂಪಾಯಿ, ದೂರಿನ ವೆಚ್ಚವಾಗಿ 8 ಸಾವಿರ ರೂಪಾಯಿ ನೀಡುವಂತೆ ಆಯೋಗ ಆದೇಶಿಸಿದೆ.