Thursday, 12th December 2024

ಅಕ್ಕಿಯನ್ನ ಅವರಪ್ಪನ ಮನೆಯಿಂದ ಕೊಡ್ತಾರಾ ?

ಸಿಎಂ ಬಿಎಸ್‌ವೈ ವಿರುದ್ಧ ಹರಿಹಾಯ್ದ ಮಾಜಿ ಸಿಎಂ ಸಿದ್ದರಾಮಯ್ಯ

ಸಿದ್ದು ವಿರುದ್ಧ ಮುಗಿಬಿದ್ದ ಸಚಿವರು

ಬೆಂಗಳೂರು: ರಾಜ್ಯ ಸರಕಾರ ಅನ್ನಭಾಗ್ಯದಡಿ ನೀಡುತ್ತಿದ್ದ ಅಕ್ಕಿಯನ್ನು ಎರಡು ಕೆ.ಜೆ ಕಡಿತಗೊಳಿಸಿದೆ. ಈ ಅಕ್ಕಿಯನ್ನು ಯಡಿಯೂರಪ್ಪ ಏನ್ ಅವರಪ್ಪನ ಮನೆಯಿಂದ ತರುತ್ತಿದ್ನಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರ ಹೇಳಿಕೆಗೆ ಕೆಲ ಸಚಿವರು ಕಿಡಿಕಾರಿದ್ದರು, ಸಿದ್ದರಾಮಯ್ಯ ಅವರು ತಮ್ಮ ಘನತೆಗೆ ತಕ್ಕಂತೆ ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದ ದೇವಸ್ಥಾನ ವೊಂದರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರೋನಾ ಸಂದರ್ಭದಲ್ಲಿ ಬಿಜೆಪಿ ಸರಕಾರ ಜನರ ಅನ್ನ ಕಿತ್ತುಕೊಂಡಿದೆ.

ಲಕ್ಷಾಂತರ ಜನರ ಉದ್ಯೋಗ ಕಸಿದುಕೊಂಡಿದೆ. ಇಡೀ ದೇಶವನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದ ಕೀರ್ತಿ ಬಿಜೆಪಿಗೆ ಸೇರುತ್ತದೆ ಎಂದು ಕುಟುಕಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಬಡವರಿಗೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದು ಕುಟುಂಬದ ಪ್ರತಿ ವ್ಯಕ್ತಿಗೆ 7 ಕೆಜೆ ಅಕ್ಕಿ ನೀಡುವ ಯೋಜನೆ ಜಾರಿಗೆ ತಂದಿದ್ದೆ. ಯಡಿಯೂರಪ್ಪ ಸರಕಾರ ಬಂದ ನಂತರ ಅದರಲ್ಲಿ ಎರಡು ಕೆಜೆ ಅಕ್ಕಿಯನ್ನು ಕಡಿಮೆ ಮಾಡಿದ್ದಾರೆ. ಅದನ್ನು ಅವರಪ್ಪನ ಮನೆಯಿಂದ ತಂದು ಕೊಡುತ್ತಿದ್ದರಾ, ಅಷ್ಟು ಅಕ್ಕಿ ಕೊಟ್ಟಿದ್ದರೆ ಏನಾಗುತ್ತಿತ್ತು. ಬಡವರಿಗೆ ಅನುಕೂಲವಾಗುವ ಯೋಜನೆಗಳು ಎಂದರೆ ಇವರಿಗೆ ಏಕೆ ಇಷ್ಟೊಂದು ಅಲರ್ಜಿ ಎಂದು ಗುಡುಗಿದರು.

ಈಶ್ವರಪ್ಪನಿಗೆ ಇಂತಹ ಸ್ಥಿತಿ ಬರಬಾರದಿತ್ತು: ಈಶ್ವರಪ್ಪನಿಗೆ ಬಂದಿರುವ ಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ. ಅವರ ಸ್ಥಾನದಲ್ಲಿ ನಾನೇನಾದರೂ ಇದ್ದಿದ್ದರೆ ಒಂದು ಕ್ಷಣ ಮಂತ್ರಿಯಾಗಿ ಇರುತ್ತಿರಲಿಲ್ಲ. ರಾಜೀನಾಮೆ ಕೊಟ್ಟು ಹೊರ ಬರುತ್ತಿದ್ದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಸಿಎಂ ನಡುವೆ ಜಟಾಪಟಿ ನಡೆಯುತ್ತಿದೆ. ಯಡಿಯೂರಪ್ಪ ನಡು ಬುಗು ಬುಗು ಅನ್ನುತ್ತಿದೆ. ದೇವರು ನನ್ನಲ್ಲೂ, ನಿಮ್ಮಲ್ಲೂ, ಎಲ್ಲೆಲ್ಲೂ ಇದ್ದಾನೆ.

ಅಪ್ಪ-ಮಗ ಸರ್ವಾಧಿಕಾರಿಗಳು: ಈಶ್ವರಪ್ಪ ಕೂಡ ಸೀನಿಯರ್ ರಾಜಕಾರಣಿ. ಆದ್ರೆ, ಅಪ್ಪ-ಮಗ ಸೇರಿ ಸರ್ವಾಧಿಕಾರಿಗಳಂತೆ ನಡೆದುಕೊಳ್ಳುತ್ತಿದ್ದಾರೆ. ಸ್ವಾಭಿಮಾನ ಬಹಳ ಮುಖ್ಯ. ನನ್ನ 40 ವರ್ಷ ರಾಜಕೀಯದಲ್ಲಿ ಸಲಾಂ ಹೊಡೆದು ರಾಜಕೀಯ
ಮಾಡೇ ಇಲ್ಲ, ಮುಂದೆಯೂ ಮಾಡೋದಿಲ್ಲ. ಯಡಿಯೂರಪ್ಪ ಅದೆಷ್ಟು ದಿನ ಕುರ್ಚಿಯಲ್ಲಿರ್ತಾರೋ ಗೊತ್ತಿಲ್ಲ. ಅವರ ನಡು ಬುಗು ಬುಗು ಅನ್ನುತ್ತಿದೆ.

ಹೀಗಿರುವಾಗ, ಮಾನ-ಮರ್ಯಾದೆ ಬಿಟ್ಟು ಮಂತ್ರಿಗಿರಿ ಮಾಡುವುದಕ್ಕೆ ಆಗುತ್ತಾ ಹೇಳಿ? ಎಂದು ಸಿಎಂ ವಿರುದ್ಧ ಹರಿಹಾಯ್ದರು.
ಭಕ್ತ ಪ್ರಹ್ಲಾದ್ ಪಿಕ್ಚರ್ ನೋಡಿಲ್ವಾ? ನಾನು ಹೆಚ್ಚು ದೇವಸ್ಥಾನಕ್ಕೆ ಹೋಗುವುದಿಲ್ಲ. ಯಾಕೆಂದ್ರೆ, ನನ್ನಲ್ಲಿಯೇ ದೇವರಿದ್ದಾನೆ. ರಾಜ್ಯದಲ್ಲಿ 29 ಸಾವಿರ ಹಳ್ಳಿಗಳಿವೆ. ಎಲ್ಲಾ ಹಳ್ಳಿಗಳಲ್ಲೂ ಒಬ್ಬೊಬ್ಬರು ದೇವರು ಇರುತ್ತಾನೆಯೇ. ದೇವನೊಬ್ಬ ನಾಮ ಹಲವು
ಅಲ್ವಾ?. ಭಕ್ತ ಪ್ರಹ್ಲಾದ್ ಪಿಕ್ಚರ್ ನೋಡಿಲ್ವಾ ನೀವು ಎಂದು ಚಿತ್ರದ ಡೈಲಾಗ್ ಹೇಳುವ ಮೂಲಕ ನೆರೆದಿದ್ದ ಜನರನ್ನು ಸ್ವಲ್ಪ ಹೊತ್ತು ನಗಿಸಿದರು.

ಸಿದ್ದರಾಮಯ್ಯ ಗೌರವದಿಂದ ಮಾತಾಡಲಿ: ಎಸ್.ಆರ್.ವಿಶ್ವನಾಥ್

ಸಿಎಂ ಯಡಿಯೂರಪ್ಪ ಅವರ ಬಗ್ಗೆ ಏಕವಚನದಲ್ಲಿ ಟೀಕೆ ಮಾಡಿರುವ ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ವಿರುದ್ಧ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪನವರು ನಾಡಿನ ಮುಖ್ಯಮಂತ್ರಿಯಾಗಿದ್ದು, ಒಂದು ಗೌರವಯುತ ಸ್ಥಾನದಲ್ಲಿದ್ದಾರೆ.

ಇಂತಹ ಗೌರವದ ಸ್ಥಾನದಲ್ಲಿ ಕುಳಿತ ಅವರನ್ನು ಸಿದ್ದರಾಮಯ್ಯನವರು ನಾಲಗೆ ಇದೆ ಎಂದು ಹರಿಬಿಡಲಾರಂಭಿಸಿರುವುದು ಅವರ ಗೌರವಕ್ಕೆ ಚ್ಯುತಿ ತಂದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಹೀಗೆ ಮಾತನಾಡುವುದು ನನಗೆ ರೂಢಿ ಎಂದು ಮಾತು ಮಾತಿಗೆ ಹೇಳುವ ಸಿದ್ದರಾಮಯ್ಯನವರು ಎಂತಹ ಉನ್ನತ ಹುದ್ದೆಯಲ್ಲಿರುವವರನ್ನೂ ಏಕವಚನದಲ್ಲಿ ಸಂಭೋ
ದಿಸುವುದು ತಪ್ಪು. ಇದು ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡುತ್ತದೆ ಎಂಬ ಸಾಮಾನ್ಯ ಜ್ಞಾನವನ್ನು ಮೊದಲು ಅರಿತುಕೊಳ್ಳಲಿ ಎಂದು ವಿಶ್ವನಾಥ್ ಕಿಡಿಕಾರಿದರು.

ಚುನಾವಣೆ ಸಂದರ್ಭಗಳಲ್ಲಿ ಸಿದ್ದರಾಮಯ್ಯನವರಿಗೆ ತಮ್ಮ ನಾಲಗೆ ಮೇಲೆ ಹಿಡಿತವೇ ಇಲ್ಲದಂತಾಗಿರುತ್ತದೆ. ಈಗ ರಾಜ್ಯದಲ್ಲಿ
ಉಪಚುನಾವಣೆಗಳು ನಡೆಯುತ್ತಿರುವ ವೇಳೆ ಜನರನ್ನು ಸೆಳೆದುಕೊಳ್ಳಲೆಂದು ನಮ್ಮ ನಾಯಕರ ವಿರುದ್ಧ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

***

ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆ ಬಗ್ಗೆ ಹೇಳುವಾಗ ಸಿಎಂ ಯಡಿಯೂರಪ್ಪ ವಿರುದ್ಧ ಬಳಸಿದ ಭಾಷೆ
ಖಂಡನಾರ್ಹ. ಸಿದ್ದರಾಮಯ್ಯ ಕೂಡ ಅನ್ನಭಾಗ್ಯ ಅಕ್ಕಿಯನ್ನು ಐದು ಕೆಜಿಗೆ ಇಳಿಸುವ ಪ್ರಯತ್ನ ಮಾಡಿದ್ದರು. ಆದರೆ,
ಶಾಸಕರ ವಿರೋಧದಿಂದ ಏಳು ಕೆಜಿ ಮಾಡಿದ್ದರು. ಸಿದ್ದರಾಮಯ್ಯ ಅವರಿಗೆ ಯಡಿಯೂರಪ್ಪ ಅವರ ರೈತ ಪರ ಯೋಜನೆಗಳು ಯಾವುದೂ ಕಣ್ಣಿಗೆ ಕಾಣಿಸುತ್ತಿಲ್ಲ.
– ಬೈರತಿ ಬಸವರಾಜು ನಗರಾಭಿವೃದ್ಧಿ ಸಚಿವ

ನಿಮ್ಮ ಕಾಲದಲ್ಲಿ ಕೊಡುತ್ತಿದ್ದಂತೆಯೇ ಈಗಲೂ ಕೂಡ ಪಡಿತರ ವ್ಯವಸ್ಥೆ ಮುಂದುವರಿದಿದೆ. ಆದರೆ, 2ಕೆಜಿ ಅಕ್ಕಿ ಮಾತ್ರ
ಕಡಿಮೆಯಾಗಿದೆ ಅಷ್ಟೇ. ಸರಕಾರ ನಡೆಸಲು ಯಾರೂ ಯಾರಪ್ಪನ ಮನೆಯಿಂದ ಹಣ ಕೊಡುವುದಿಲ್ಲ. ಎಲ್ಲರೂ ಸರಕಾರ ದಿಂದಲೇ ಕೊಡುತ್ತಾರೆ ಎಂಬುದು ಸಿದ್ದರಾಮಯ್ಯ ಅವರ ಗಮನದಲ್ಲಿರಲಿ.
– ಬಿ.ಸಿ.ಪಾಟೀಲ್ ಕೃಷಿ ಸಚಿವ