Sunday, 15th December 2024

DK Shivakumar : ಸೋಲೂರು ನೆಲಮಂಗಲಕ್ಕೆ ಸೇರ್ಪಡೆಯಾಗುತ್ತಿರುವುದು ನಮ್ಮ ಬದ್ಧತೆಯಿಂದ: ಡಿ.ಕೆ ಶಿವಕುಮಾರ್

DK Shivakumar

ನೆಲಮಂಗಲ: ಮಾಗಡಿ ತಾಲೂಕಿನ ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸುವುದಕ್ಕಾಗಿ ಶಾಸಕ ಎನ್. ಶ್ರೀನಿವಾಸ್ ನನ್ನ. ಸಿಎಂ ಹಾಗೂ ಕಂದಾಯ ಸಚಿವರ ಜತೆಯಾಗಿ ನಿಂತು ಹಗಲಿರುಳು ಶ್ರಮಿಸಿದ್ದಾರೆ. ಸಂಸದರು ಈಗ ಅದರ ಶ್ರೇಯಸ್ಸು ತೆಗೆದುಕೊಳ್ಳುವುದಕ್ಕೆ ಯತ್ನಿಸುತ್ತಿದ್ದಾರೆ. ಈ ಕೆಲಸದ ಕ್ರೆಡಿಟ್ ಕೇವಲ ಶಾಸಕ ಶ್ರೀನಿವಾಸ್‌ಗೆ ಸಲ್ಲುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾ‌ರ್ ಹೇಳಿದರು.

ನಗರದ ಎಂವಿಎಂ ಕಲ್ಯಾಣ ಮಂಟಪದಲ್ಲಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಲಾಗಿದ್ದ 10ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅಂತರ್ಜಲ ಹೆಚ್ಚಿಸುವ ಯೋಜನೆ, ನಮ್ಮ ಮೆಟ್ರೋ ಹಾಗೂ ಸೋಲೂರು ನೆಲಮಂಗಲಕ್ಕೆ ಸೇರಿಸಲು ಶಾಸಕರು ನಿರಂತರ ಓಡಾಟ ಮಾಡುತ್ತಿದ್ದಾರೆ. ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸಲು ಸಿಎಂ, ಕಂದಾಯ ಸಚಿವರು ಹಾಗೂ ನನ್ನ ಬಳಿ ನೂರಾರು ಬಾರಿ ಬಂದಿದ್ದಾರೆ. ಇದೀಗಗ ಸಂಸದರು ಅದರ ಹೆಸರು ಪಡೆಯಲು ಮುಂದಾಗಿದ್ದಾರೆ. ಸೋಲೂರು ನೆಲಮಂಗಲಕ್ಕೆ ಸೇರಿಸುವ ಪೂರ್ಣ ಕ್ರೆಡಿಟ್ ನೆಲಮಂಗಲ ಶಾಸಕ ಶ್ರೀನಿವಾಸ್‌ಗೆ ಸಲ್ಲುತ್ತದೆ. ನೆಲಮಂಗಲ ಅಭಿವೃದ್ಧಿಗೆ ನಾನು ಹೆಚ್ಚಿನ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಒಕ್ಕಲಿಗರಿಗೆ ಕಿವಿಮಾತು:

ನೆಲಮಂಗಲ ಬೆಳೆಯುತ್ತಿದೆ. ಒಕ್ಕಲಿಗರು ತಮ್ಮ ಒಂದು ಇಂಚು ಭೂಮಿ ಕಳೆದುಕೊಳ್ಳಬಾರದು. ನಾನು ತಿಹಾರ್ ಜೈಲಿಗೆ ಹೋಗಿದ್ದ ವೇಳೆ ನನ್ನ ಜತೆಗೆ ನಿಂತ ನಂಜವಧೂತ ಸ್ವಾಮೀಜಿಯವರನ್ನು ಎಂದಿಗೂ ಮರೆಯುವುದಿಲ್ಲ. ಅಲ್ಲಿಂದ ಬಂದಾಗ ಅಜ್ಜಯ್ಯನ ಬಳಿ ಹೋಗಿ ನಂತರ ಸ್ವಾಮೀಜಿ ಭೇಟಿ ಮಾಡಿದೆ. ಹುಲಿ ಎಲ್ಲಿದ್ದರೂ ಹುಲಿಯೇ ಎಂದು ಅಂದು ಅವರು ಹೇಳಿದ್ದರು.

ಯುವಕರು ಕೇವಲ ಉದ್ಯೋಗ ಬೇಕು ಎನ್ನುವುದಕ್ಕಿಂತ ಉದ್ಯೋಗ ಸೃಷ್ಟಿ ಮಾಡುವ ಶಕ್ತಿ ಬೆಳೆಸಿಕೊಳ್ಳಬೇಕು. ಒಕ್ಕಲಿಗ ಎಂದು ಹೇಳುಕೊಳ್ಳುವುದೇ ಭಾಗ್ಯ,. ನೆಲಮಂಗಲದ ಒಕ್ಕಲಿಗ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ನಾಗರಾಜು ಹಾಗೂ ಎಲ್ಲಾ ಪದಾಧಿಕಾರಿಗಳು ವಿಶೇಷ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜಕ್ಕೆ ಎಲ್ಲರೂ ಸೇವೆ ಮಾಡಬೇಕು ಎಂದು ಡಿಸಿಎಂ ಹೇಳಿದರು.

ಇದನ್ನೂ ಓದಿ: Pralhad Joshi: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ; ಪ್ರಲ್ಹಾದ್‌ ಜೋಶಿ ಆಗ್ರಹ

ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಂ.ಕೆ ನಾಗರಾಜು ಮಾತನಾಡಿ, ಡಿ.ಕೆ.ಶಿವಕುಮಾರ್ ಆಗಮಿಸಿ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡಿರುವುದು ಸಂತೋಷ/ ಶಾಸಕ ಎನ್.ಶ್ರೀನಿವಾಸ್ ಒಕ್ಕಲಿಗರ ಸಮುದಾಯ ಭವನಕ್ಕೆ ಜಾಗ ನೀಡಿ ಒಂದು ಕೋಟಿ ವೈಯಕ್ತಿಕವಾಗಿ ನೀಡಲು ಹೇಳಿದ್ದಾರೆ. ಈ ವರ್ಷ ಶತಮಾನಗಳ ಕನಸು ನನಸಾಗಲಿದೆ ಎಂದರು.

ಕೆಂಪೇಗೌಡ ಪ್ರತಿಮೆ:

ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಂಪೇಗೌಡರ ಬೃಹತ್ ಪ್ರತಿಮೆ ಮಾಡಲೇ ಬೇಕಾಗಿದ್ದು, ಶಾಸಕರು ಸಹಕರಿಸುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮಾಡುವ ಅತ್ಯುತ್ತಮ ಕಾರ್ಯಕ್ರಮ ಒಕ್ಕಲಿಗ ಕ್ಷೇಮಾಭಿವೃದ್ಧಿ ಟ್ರಸ್ಟ್ ಕಾರ್ಯಕ್ರಮ ಎಂದು ನಂಜಾವಧೂತ ಸ್ವಾಮೀಜಿಗಳು ತಿಳಿಸಿದರು.

ಶ್ರೀ ನಂಜವಧೂತ ಸ್ವಾಮೀಜಿ ಹಾಗೂ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಡಿ.ಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗಲೇಬೇಕು ಎಂದು ಹೇಳಿದರು. ಈಗ ಸ್ಥಾನ ಖಾಲಿ ಇಲ್ಲ. ಆದರೂ ಅವರು ಸಿಎಂ ಆಗಲೇ ಬೇಕು ಎಂದರು.

ಯುವಕನಿಗೆ ಶಾಸಕನಾಗುವ ಅವಕಾಶ ನೀಡಿದ ಡಿ.ಕೆ ಶಿವಕುಮಾರ ಮತ್ತು ಕ್ಷೇತ್ರದ ಜನತೆ ಹಾಗೂ ಮುಖಂಡರಿಗೆ ಸದಾಕಾಲ ಚಿರ ಋಣಿ. ಶಾಸಕನಾಗಲು ಒಕ್ಕಲಿಗ ಮುಖಂಡರ ಕೊಡುಗೆ ಅಪಾರ. ಶತಮಾನಗಳಿಂದ ಆಗದ ಕೆಲಸವನ್ನು ಸಮುದಾಯಕ್ಕೆ ಮಾಡುತ್ತೇನೆ. ಸಮುದಾಯ ಭವನಕ್ಕೆ 1 ಕೋಟಿ ನೀಡಲಿದ್ದು ಶೀಘ್ರದಲ್ಲಿ ಭವನದ ಕೆಲಸವೂ ಆರಂಭವಾಗಲಿದೆ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.

ಅಭಿನಂದನೆ

ತಾಲೂಕಿನ ಶೇಕಡಾ 90ಕ್ಕೂ ಹೆಚ್ಚು ಅಂಕ ಪಡೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯ 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ನೀಡಿ ಪ್ರತಿಭಾ ಪುರಸ್ಕಾರ ಮಾಡಲಾಯಿತು. 8 ಪ್ರಗತಿಪರ ರೈತರಿಗೆ ಪ್ರಶಸ್ತಿ ನೀಡಲಾಯಿತು.

ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪ್ರಕಾಶ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬೂದಿಹಾಳ್ ತಿಮ್ಮರಾಜು, ತಾಲೂಕು ಕಸಾಪ ಅಧ್ಯಕ್ಷ ಪ್ರಕಾಶ್‌ ಮೂರ್ತಿ, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವಾಸುದೇವಮೂರ್ತಿ, ಇನ್ನರ್ ವೀಲ್ ಅಧ್ಯಕ್ಷೆ ಉಮಾನಾರಾಯಣ್ ಅವರನ್ನು ಸನ್ಮಾನಿಸಲಾಯಿತು.

ಶ್ರೀ ನಂಜಾವಧೂತ ಮಹಾಸ್ವಾಮೀಜಿ, ಶ್ರೀ ಚಂದ್ರಶೇಖರನಾಥ ಮಹಾಸ್ವಾಮೀಜಿ, ಶ್ರೀರಮಣಾನಂದನಾಥ ಸ್ವಾಮೀಜಿ, ಎನ್‌ಪಿಎ ಅಧ್ಯಕ್ಷ ಎಂ.ನಾರಾಯಣಗೌಡ, ಮಾಜಿ ಅಧ್ಯಕ್ಷ ಎನ್.ಪಿ. ಹೇಮಂತಕುಮಾ‌ರ್, ಒಕ್ಕಲಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಕೆ.ನಾಗರಾಜು, ಉಪಾಧ್ಯಕ್ಷ ಡಾ.ಬಿ.ರಮೇಶ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬೂದಿಹಾಳ್ ತಿಮ್ಮರಾಜು, ಟ್ರಸ್ಟ್ ಕಾರ್ಯದರ್ಶಿ ಸತೀಶ್‌, ಖಜಾಂಚಿ ಸುಂದರೇಶ್, ಸಮಾಜದ ಮುಖಂಡರುಗಳಾದ ಸಿ.ಆರ್. ಗೌಡ, ಮಧುಸೂಧನ್, ಎಚ್.ಜಿ.ರಾಜು. ಚನ್ನಪ್ಪ, ವಜ್ರಗಟ್ಟೆ ನಾಗರಾಜು, ಮಿಲ್ಮೀ ಮೂರ್ತಿ, ಹನುಮಂತೇಗೌಡ್ರು, ಹಸಿರುವಳಿ ಕುಮಾರ್, ಪ್ರಕಾಶ್, ಹನುಮಂತರಾಜು, ಸಿಎಂ.ಗೌಡ, ಮನುಗೌಡ, ಬಿ.ಟಿ.ಮಂಜುನಾಥ್ ಗೌಡ ಹಾಗೂಟ್ರಸ್ಟ್ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು.