ಕರೋನಾ ಸಂಕಷ್ಟ ಕಾಲದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ: ರೇಣುಕಾಚಾರ್ಯ
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆಯ ಸುದ್ದಿ ಅಪ್ರಸ್ತುತ. ಯಾರೋ ಒಂದಿಬ್ಬರು ಶಾಸಕರು ದೆಹಲಿಗೆ ಹೋಗಿ, ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎನ್ನುವ ಸುಳ್ಳು ಹಬ್ಬಿಸುತ್ತಿದ್ದಾರೆ. ಈ ರೀತಿಯ ಕೆಲಸವನ್ನು ಬಿಟ್ಟು, ಕ್ಷೇತ್ರದ ಕೆಲಸಗಳತ್ತ ಶಾಸಕರು ಗಮನಹರಿಸಲಿ ಎಂದು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
‘ವಿಶ್ವವಾಣಿ ಕ್ಲಬ್‌ಹೌಸ್’ನಲ್ಲಿ ನಡೆದ ಸಂವಾದದಲ್ಲಿ ಕರೋನಾ ಸಮಯದಲ್ಲಿ ತಮ್ಮ ಕ್ಷೇತ್ರದಲ್ಲಿ ಮಾಡಿರುವ ಕಾರ್ಯ, ಕರೋನಾ ಸಂಕಷ್ಟದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ, ನಾಯಕತ್ವ ಬದಲಾವಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು. ಕೇಳುಗರಲ್ಲಿ ಅನೇಕರು ನಾಯಕತ್ವ ಬದಲಾವಣೆಯಲ್ಲಿ ಬಿಜೆಪಿಯಲ್ಲಾಗುತ್ತಿರುವ ಗೊಂದಲಗಳ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರೇಣುಕಾಚಾರ್ಯ ಅವರು, ಇಡೀ ದೇಶಕ್ಕೆ ಕರೋನಾ ಎನ್ನುವ ಮಹಾಮಾರಿ ಕಾಡುತ್ತಿದೆ. ಈ ಹಂತದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವುದೇ ಅಪ್ರಸ್ತುತ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕರೋನಾ ವಿರುದ್ಧ ಸರಕಾರ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. ಆದರೆ ಒಂದಿಬ್ಬರು ಈ ಎಲ್ಲವನ್ನೂ ಮರೆತು ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ದೆಹಲಿಗೆ ಹೋಗಿ ಏನೂ ಆಗದಿದ್ದರೂ, ಕೆಲ ಮಾಧ್ಯಮಗಳ ಮುಂದೆ ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ಇನ್ನು ದೆಹಲಿ ನಾಯಕರು ಸಮಯ ಕೊಡದಿದ್ದರೂ ಇವರೇ ಹೋಗಿ ವಿವಾದ ಸೃಷ್ಟಿಸುತ್ತಿದ್ದಾರೆ. ಆದರೆ ಈಗಾಗಲೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ನಾಯಕತ್ವ ಬದಲಾವಣೆಯಿಲ್ಲ ಎನ್ನುವ ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ ಈ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.
ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಹೋಗುತ್ತಿಲ್ಲ ಎನ್ನುವ ಆರೋಪವಿದೆಯಲ್ಲ? ಎಂಬ ಕೇಳುಗರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನಾನು ವೈಯಕ್ತಿಕವಾಗಿ ಮಾತನಾಡುವುದಿಲ್ಲ. ಆದರೆ ಈ ಸಂಕಷ್ಟ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮ ಕ್ಷೇತ್ರಗಳಲ್ಲಿ ದುಡಿಯಬೇಕು ಎಂದು ಮನವಿ ಮಾಡಿದರು.
ಕರೋನಾ ಹೋಗುವವರೆಗೂ ರಾಜಕೀಯವಿಲ್ಲ: ರಾಜ್ಯದಲ್ಲಿ ಈಗ ಕರೋನಾವನ್ನು ಹಿಮ್ಮೆಟ್ಟಿಸುವುದು ಸರಕಾರದ ಗುರಿಯಾಗಿದೆ. ಆದ್ದರಿಂದ ನಾನು ನನ್ನ
ಕ್ಷೇತ್ರವಾಗಿರುವ ಹೊನ್ನಾಳಿ-ನ್ಯಾಮತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರೋನಾ ಹೋಗುವ ತನಕ ನಾನು ರಾಜಕೀಯ ಮಾಡಲ್ಲ. ಬೆಂಗಳೂರಲ್ಲಿ
ಮಾತ್ರ ರಾಜಕೀಯ ಮಾಡುತ್ತೇನೆ. ಆದರೆ ಹೊನ್ನಾಳಿಯಲ್ಲಿ ನಾನು ಎಂದಿಗೂ ರಾಜಕೀಯ ಮಾಡಲ್ಲ. ಬದಲಿಗೆ ಕೇವಲ ಜನರ ಒಳಿತಿಗಾಗಿ ಮಾತ್ರ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.
ಯಡಿಯೂರಪ್ಪ ಅವರು ಯುವಕರು ನಾಚುವಂತೆ ಕೆಲಸ ಮಾಡುತ್ತಿದ್ದಾರೆ. ನಾನು ನನ್ನ ಕ್ಷೇತ್ರದ ಕೆಲಸವನ್ನು ಮಾಡುತ್ತಿದ್ದೇನೆ. ನಾನು ಸೇವಕನಾಗಿ ಕೆಲಸ ಮಾಡುತ್ತಿದ್ದೇನೆಯೇ ಹೊರತು, ಜನಪ್ರಿಯತೆ ಅಥವಾ ಪ್ರಚಾರಕ್ಕೆ ಅಲ್ಲ. ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿಯೂ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಸಿಎಂ ದೊಡ್ಡವರು: ಯಡಿಯೂರಪ್ಪ ಅವರು ಹೇಳಬೇಕಾದ ಮಾತನ್ನು ರೇಣುಕಾಚಾರ್ಯ ಅವರಿಂದ ಮಾತನಾಡಿಸುತ್ತಿದ್ದಾರೆ ಎನ್ನುವ ಮಾತಿಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರು ದೊಡ್ಡವರು. ಅವರ ಮಾತನ್ನು ನನ್ನಿಂದ ಹೇಳಿಸಬೇಕಿಲ್ಲ. ಅವರ ಪರವಾಗಿ ಹೇಳಿಕೆ ಕೊಡಿಸುವಷ್ಟು ದೊಡ್ಡವನು ನಾನಲ್ಲ ಹಾಗೂ
ನನ್ನಿಂದ ಹೇಳಿಕೆ ಕೊಡಿಸುವಷ್ಟು ಸಣ್ಣವರು ಯಡಿಯೂರಪ್ಪ ಅವರಲ್ಲ. ಹಾಗೇ ನೋಡಿದರೆ, ಯಡಿಯೂರಪ್ಪ ಅವರ ಪರವಾಗಿ ಹೇಳಿಕೆ ಕೊಟ್ಟು ಹೋಗಿ ಭೇಟಿ ಮಾಡಲು ಹೋದರೆ ಅವರು ನನ್ನ ಬಳಿ ಗಲಾಟೆ ಮಾಡುತ್ತಾರೆ. ಅವರ ಪರ ಸಹಿ ಸಂಗ್ರಹ ಮಾಡುವುದು ಬೇಡ ಎನ್ನುವ ಮಾತನ್ನು ಹೇಳಿದ್ದರು. ಅಷ್ಟೆಲ್ಲ ಏಕೆ, ಕೆಲ ಶಾಸಕರನ್ನು ಉಪಾಹಾರಕ್ಕೆ ಕರೆದಾಗಲೂ, ಅವರು ಬೇಡ ಎಂದು ಹೇಳಿ ರದ್ದುಗೊಳಿಸಿದ್ದರು ಎಂದು ಹೇಳಿದರು.
ಕೆಲವರು ವರಿಷ್ಠರ ಮಾತು ಮೀರಿ ಹೇಳಿಕೆ ನೀಡುತ್ತಿದ್ದರೂ ಶಿಸ್ತು ಕ್ರಮವಹಿಸಲಿಲ್ಲ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಬಿಜೆಪಿಯನ್ನು ಅನೇಕರು ಬೆಳೆಸಿದ್ದಾರೆ. ಸಂಸ್ಕಾರ ಹಾಗೂ ಸಂಸ್ಕೃತಿವನ್ನು ನೀಡಿದೆ. ಪಕ್ಷದ ಸೂಚನೆ ಮೀರಿದವರ ಮೇಲೆ ಮುಂದಿನ ದಿನಗಳಲ್ಲಿ ಕೇಂದ್ರದ ನಾಯಕರು ಕ್ರಮ ವಹಿಸುತ್ತಾರೆ ಎಂದು ಹೇಳಿದರು.
ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ: ಕರೋನಾ ಮೊದಲ ಅಲೆ ಕಾಣಿಸಿಕೊಂಡು ಲಾಕ್‌ಡೌನ್ ಹೇರಿದಾಗ ಅನೇಕರು ಸಂಕಷ್ಟಕ್ಕೆ ಸಿಲುಕಿದರು. ಈ ಸಮಯದಲ್ಲಿ ನಾನು, ನನ್ನ ಧರ್ಮಪತ್ನಿ ಹಾಗೂ ಪಕ್ಷದ ಕಾರ್ಯಕರ್ತರು ೨೫ ರಿಂದ ೩೦ ಸಾವಿರ ಜನರಿಗೆ ಆಹಾರ ಕಿಟ್ ವಿತರಿಸುವ ಕಾರ್ಯಕ್ಕೆ ಮುಂದಾದೆವು. ಇದರೊಂದಿಗೆ ಕರೋನಾ ಬಗ್ಗೆ ಮನೆಮನೆಗೆ ಹೋಗಿ ಜಾಗೃತಿ ಮೂಡಿಸಿ, ಮಾಸ್ಕ್ ವಿತರಿಸಲಾಯಿತು. ಇದನ್ನು ನಾನು ದೊಡ್ಡ ಕಾರ್ಯ ಎನ್ನುವುದಕ್ಕಿಂತ, ನನ್ನ ಕರ್ತವ್ಯವನ್ನು ಮಾಡಿದೆ. ಇದರೊಂದಿಗೆ ಕೆಲವರಿಗೆ ಮಾತ್ರೆ ಸಿಗುತ್ತಿರಲಿಲ್ಲ. ಆಗ ನಾನು ವಾಟ್ಸ್‌ಆಪ್ ಮೂಲಕ ಮಾತ್ರೆಗಳನ್ನು ತರಿಸಿಕೊಂಡು ನೀಡುವ ಕೆಲಸ ಮಾಡಿದೆ. ಎರಡನೇ ಅಲೆಯಲ್ಲಿ ಕೆಲವರು ಲಸಿಕೆ ಬಗ್ಗೆ ತಪ್ಪು ಸಂದೇಶ ಕಳುಹಿಸಿದರು. ಆದರೆ ನಾನು ಹಾಗೂ ನನ್ನ ಕಾರ್ಯಕರ್ತರು ಸೇರಿಕೊಂಡು ಜಾಗೃತಿ ಮೂಡಿಸುವ ಕೆಲಸ ಮಾಡಿದೆವು. ಆಕ್ಸಿಜನ್ ಸಮಸ್ಯೆಯಾದಾಗ ನಾನೇ ಹೋಗಿ ಆಕ್ಸಿಜನ್ ಸಿಲೆಂಡರ್ ತರುವ ಕೆಲಸವನ್ನು ಮಾಡಿದ್ದೇನೆ. ಆದರೆ ನನ್ನ ಕಣ್ಣ ಮುಂದೆಯೇ ಅನೇಕರು ಸತ್ತರು. ಇದು ನಿಜಕ್ಕೂ ಬೇಸರ ತರಿಸಿದ ವಿಷಯ ಎಂದರು.
ರಮೇಶ್ ಜಾರಕಿಹೊಳಿ ಅವರ ಮಾತು ಬಿರುಸು. ಆದರೆ ಮನಸು ಮೃದುವಾಗಿರುತ್ತದೆ. ಸರಕಾರ ರಚನೆಯಲ್ಲಿ ಅವರ ಪಾಲು ಇದೆ ಎನ್ನುವುದನ್ನು ಒಪ್ಪುತ್ತೇವೆ.
ಯಾವುದೋ ಷಡ್ಯಂತ್ರದಿಂದ ಅವರು ಬಲಿಪಶುವಾದರು. ಖಂಡಿತ ಅವರನ್ನು ಪಕ್ಷ ನಡುನೀರಿನಲ್ಲಿ ಕೈ ಬಿಡಲ್ಲ. ಆದ್ದರಿಂದ ಅವರು ಆತುರದ ನಿರ್ಧಾರ
ಕೈಗೊಳ್ಳುವುದು ಬೇಡ. ಇದು ನನ್ನ ಮನವಿ.
ಹೋಮ ಮಾಡಿದ್ದು ನಿಜ
ಕರೋನಾ ಸೋಂಕಿನಿಂದ ಬಳಲುತ್ತಿರುವವರಿಗೆ ಆರೋಗ್ಯ ಸಿಗಲಿ ಎಂದು ಹೋಮ ಮಾಡಿಸಿದೆ. ಕಳೆದ ಬಾರಿಯೂ ಮಾಡಿಸಿದ್ದೆ. ಈ ಬಾರಿಯೂ ಮಾಡಿಸಿದೆ. ಇದು ಸತ್ಯ. ಆದರೆ ಕೆಲ ವಿರೋಧಿಗಳು ಇದನ್ನು ವಿವಾದ ಮಾಡಲು ಪ್ರಯತ್ನಿಸಿದರು. ಆದರೆ ನನ್ನ ಕ್ಷೇತ್ರದ ಜನರು ಇದಕ್ಕೆ ಉತ್ತರ ಕೊಟ್ಟರು. ಆದರೆ ಇಲ್ಲಿಯವರೆಗೆ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು
ಕೋವಿಡ್ ಕೇರ್ ಸೆಂಟರ್ ನಲ್ಲಿಯೇ ವಾಸ್ತವ್ಯ
ಕರೋನಾ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಕ್ಷೇತ್ರದಲ್ಲಿ ಕೋವಿಡ್ ಕೇರ್ ಕೇಂದ್ರವನ್ನು ಆರಂಭಿಸಿದೆ. ಅಲ್ಲಿರುವ ಸೋಂಕಿತರೊಂದಿಗೆ ಮನೆಯ ಮಗನಾಗಿ ಬೆರೆತೆ. ಬಳಿಕ ಅರವಟ್ಟೆ ಕೋವಿಡ್ ಕೇರ್ ಕೇಂದ್ರದಲ್ಲಿ ೮೦೦ ಬೆಡ್ ಆಸ್ಪತ್ರೆಯನ್ನು ಆರಂಭಿಸಲಾಯಿತು. ನಿತ್ಯ ೧೮ ಗಂಟೆಗಳ ಕಾಲ ಅಲ್ಲಿಯೇ ಕೆಲಸ ಮಾಡು ತ್ತಿದ್ದು, ಬಳಿಕ ಧರ್ಮಪತ್ನಿಯೊಂದಿಗೆ ಅಲ್ಲಿಯೇ ಉಳಿದುಕೊಂಡಿದ್ದೇನೆ. ಗುಣಮುಖರಾಗಿ ಹೋಗುವ ಪ್ರತಿಯೊಬ್ಬರಿಗೂ ಹೂವಿನ ಮಳೆಗರೆದು ಕಳಿಸಿಕೊಡುತ್ತೇನೆ ಎಂದು ಹೇಳಿದರು.
***
ಇಂದು ಪತ್ರಿಕೆಯನ್ನು ಓದಲು ಕಾರಣ ವಿಶ್ವೇಶ್ವರ ಭಟ್. ಅವರು ನನಗೆ ಮಾದರಿ. ನಾನು ಎಂದಿಗೂ ಸೂಪರ್ ವಾರಿಯರ್ ಎಂದು ಹೇಳಿಕೊಳ್ಳುವುದಿಲ್ಲ. ಬದಲಿಗೆ
ಸೋಂಕಿತರ ಮನೆಯ ಸದಸ್ಯ, ಅಣ್ಣನಾಗಿ ಸಹಾಯ ಮಾಡುತ್ತಿದ್ದೇನೆ. ಇದು ನನ್ನ ಕರ್ತವ್ಯ.
– ರೇಣುಕಾಚಾರ್ಯ ಶಾಸಕ