Monday, 9th December 2024

ಗಿನ್ನಿಸ್‌ ದಾಖಲೆ ಸೇರಲಿದೆಯೇ ಹುಲುಸು ಹಲಸು ?

ಕಾಫಿ ನಾಡಿನಲ್ಲಿ ಬೆಳೆದ 55.05 ಕೆ.ಜಿ. ತೂಕದ ವಿಶ್ವದ ಬೃಹತ್ ಹಲಸಿನ ಹಣ್ಣು

ವಿಶೇಷ ವರದಿ: ಅನಿಲ್‌ ಹೆಚ್.ಟಿ, ಮಡಿಕೇರಿ

ಕಾಫಿ, ಕಿತ್ತಳೆ, ಕರಿಮೆಣಸಿಗೆ ಖ್ಯಾತವಾಗಿದ್ದ ಕೊಡಗು ಜಿಲ್ಲೆ ಇದೀಗ ಬೃಹತ್ ಹಲಸಿನ ಹಣ್ಣಿನ ಮೂಲಕ ವಿಶ್ವದ ಗಮನ ಸೆಳೆಯ ಲಿದೆ.

ಕೊಡಗು ಜಿಯ ಚೆಟ್ಟಳ್ಳಿ ಸಮೀಪದ ಅಭ್ಯಾಲದ ಮುರ್ಕಿನ್ ತೋಟದಲ್ಲಿ ಬೆಳೆದ 55 ಕೆ.ಜಿ. ತೂಕದ ಹಲಸಿನ ಹಣ್ಣು ಅತಿ ಹೆಚ್ಚು ತೂಕದ ಹಲಸಿನ ಹಣ್ಣು ಎಂಬ ಸಾಧನೆಯ ಮೂಲಕ ಗಿನ್ನಿಸ್ ದಾಖಲೆಯ ಪುಟದಲ್ಲಿ ಸ್ಥಾನ ಪಡೆಯಲಿದೆ. ಈಗಾಗಲೇ 42.73 ಕೆ.ಜಿ. ತೂಕ ಹಾಗೂ 57.15 ಸೆ.ಮೀ. ಉದ್ದದ ಹಲಸಿನಹಣ್ಣು ಗಿನ್ನಿಸ್ ದಾಖಲೆಯ ಪುಸ್ತಕದಲ್ಲಿ ಸ್ಥಾನ ಪಡೆದಿದೆ.

ಇದೀಗ ಕೊಡಗಿನ ಹಣ್ಣು ಆ ದಾಖಲೆಯನ್ನು ಮುರಿದಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯಾಲದ ಮುರ್ಕಿನ್ ತೋಟದ ಮಾಲೀಕ ಸಿದ್ಧಾರ್ಥ್ ಜೋಸೆ- ಮುರ್ಕಿನ್, ಸಹೋದರ
ಗೌತಮ್ ಆಂಟೊನಿ ಮುರ್ಕಿನ್ ಅವರು ತಮ್ಮ ಕಾಫಿ ತೋಟದಲ್ಲಿ ಬೆಳೆದ ಹಲಸಿನ ಹಣ್ಣನ್ನು ತೂಕ ಮಾಡಿದ್ದು, ಇದು 55.5 ಕೆ.ಜಿ. ತೂಕ ಹಾಗೂ 82 ಸೆಂ. ಮೀ. ಉದ್ದವಿದೆ. ಈ ಇಬ್ಬರೂ ಸಹೋದರರು ಹಣ್ಣಿನ ಸಂಪೂರ್ಣ ಮಾಹಿತಿಯೊಂದಿಗೆ ತನ್ನ ತಾಯಿ ವಿನಿತಾ ಮೋಹನ್ ಜೋಸೆಫ್ ಅವರ ಹೆಸರಿನಲ್ಲಿ ಗಿನ್ನಿಸ್ ದಾಖಲೆಗಾಗಿ ವೆಬ್‌ಸೈಟ್ ಮುಖಾಂತರ ಅರ್ಜಿ ಸಲ್ಲಿಸಿದ್ದಾರೆ.

ಸಿದ್ಧಾರ್ಥ್ ಅವರ ತಾತ ಎಂ.ಜೆ.ಜೋಜೆಫ್ ಅವರು ಸುಮಾರು 20-25 ವರ್ಷಗಳ ಹಿಂದೆ ಕೇರಳದ ಕ್ಯಾಲಿಕಟ್‌ನಿಂದ ಕೊಡಗಿನ ಅಭ್ಯಾಲದ ಮುರ್ಕೀನ್ ತೋಟದಲ್ಲಿ ಮೂರ‍್ನಾಲ್ಕು ಹಲಸಿನ ಗಿಡವನ್ನು ತಂದು ನೆಟ್ಟು, ಬೆಳೆಸಿದರು. ಕಳೆದ 15 ವರ್ಷಗಳಿಂದ ಈ ಹಲಸು ಫಸಲು ನೀಡುತ್ತಿದ್ದು, ಪ್ರತಿ ವರ್ಷವೂ ಒಂದು ಮರದಲ್ಲಿ ಬೃಹತ್ತಾದ ಒಂದೇ ಒಂದು ಹಲಸಿನ ಹಣ್ಣನ್ನು ಬಿಡುತ್ತಿದೆ.

ಈ ವರ್ಷ ಫಸಲಿಗೆ ಬಂದ ಬೃಹತ್ ಹಲಸಿನ ಹಣ್ಣನ್ನು ಸಿದ್ಧಾರ್ಥ್ ಅವರು ತೂಕ ಮಾಡಿದಾಗ, ಈವರೆಗೆ ಗಿನ್ನೀಸ್ ದಾಖಲೆಯ ಪಸ್ತಕದಲ್ಲಿ ದಾಖಲಾಗಿದ್ದ ಹಲಸಿನ ಹಣ್ಣಿಗಿಂತ ಸುಮಾರು 13 ಕೆ.ಜಿ ಹೆಚ್ಚಿನ ತೂಕ ಬಂದಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಯನ್ನು ತನ್ನ ಸ್ನೇಹಿತ ಅಭಿನಯ್ ತಿಮ್ಮಯ್ಯ ಸಾಕ್ಷಿಯಾಗಿ ಜೂ.14ರಂದು ಗಿನ್ನಿಸ್ ದಾಖಲೆಯ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ಗಿನ್ನೀಸ್ ದಾಖಲೆಯ ಅಧಿಕಾರಿಗಳು ಮಾಹಿತಿಯನ್ನು ಪರಿಶೀಲಿಸಲಿದ್ದು, ಪ್ರಪಂಚದ ಗಿನ್ನಿಸ್ ದಾಖಲೆಗೆ ಈ ಹಲಸು ಹಣ್ಣು ಸೇರ್ಪಡೆಗೊಳ್ಳಲಿದೆ ಎಂದು ಸಿದ್ಧಾರ್ಥ್ ಜೋಸೆಫ್ ಮುರ್ಕಿನ್ ವಿಶ್ವವಾಣಿಗೆ ತಿಳಿಸಿದ್ದಾರೆ.

***

ಪ್ರತಿ ವರ್ಷವೂ ಒಂದು ಮರದಲ್ಲಿ ಬೃಹತ್ತಾದ ಒಂದೇ ಒಂದು ಹಲಸಿನ ಹಣ್ಣನ್ನು ಬಿಡುತ್ತಿದೆ. ಈ ವರ್ಷ ಫಸಲಿಗೆ ಬಂದ
ಬೃಹತ್ ಹಲಸಿನ ಹಣ್ಣನ್ನು ಸಿದ್ಧಾರ್ಥ್ ಅವರು ತೂಕ ಮಾಡಿದಾಗ, ಈವರೆಗೆ ಗಿನ್ನಿಸ್ ದಾಖಲೆಯ ಪಸ್ತಕದಲ್ಲಿ ದಾಖಲಾಗಿದ್ದ ಹಲಸಿನ ಹಣ್ಣಿಗಿಂತ ಸುಮಾರು 13 ಕೆ.ಜಿ ಹೆಚ್ಚಿನ ತೂಕ ಬಂದಿದೆ.
-ಸಿದ್ಧಾರ್ಥ್ ಜೋಸೆಫ್ ಮುರ್ಕಿನ್, 
ತೋಟದ ಮಾಲೀಕ