Thursday, 21st November 2024

Jagadish Shettar: ಹುಬ್ಬಳ್ಳಿಯಲ್ಲಿ ಬಿಜೆಪಿ- ಕಾಂಗ್ರೆಸ್‌ ಬೀಗತನ! ಶೆಟ್ಟರ್‌ ಮಗಳು- ಬಿಡಿ ಜತ್ತಿ ಮರಿಮೊಮ್ಮಗ ವಿವಾಹ ಫಿಕ್ಸ್‌

marriage jagadish shettar daughter

ಹುಬ್ಬಳ್ಳಿ: ದೇಶದ ಮಾಜಿ ಉಪ ರಾಷ್ಟ್ರಪತಿ (Vice President), ಈ ಹುದ್ದೆಗೇರಿದ್ದ ಏಕೈಕ ಕನ್ನಡಿಗ ಬಿ.ಡಿ ಜತ್ತಿ (BD Jatti) ಅವರ ಮರಿಮೊಮ್ಮಗ ಹಾಗೂ ಬಿಜೆಪಿ ಹಿರಿಯ ನಾಯಕ ಜಗದೀಶ ಶೆಟ್ಟರ್‌ (Jagadish Shettar) ಅವರ ತಮ್ಮನ ಮಗಳ (daughter) ವಿವಾಹ (Marriage) ಫಿಕ್ಸ್‌ ಆಗಿದೆ. ವಿಶೇಷವೆಂದರೆ ಜತ್ತಿ ಅವರ ಮರಿಮೊಮ್ಮಗ, ಅಂದರೆ ವರ ಕಾಂಗ್ರೆಸ್‌ ವಕ್ತಾರರಾಗಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಪಕ್ಷವನ್ನು ಮೀರಿ ಅನೇಕ ಮನೆತನಗಳು ತಮ್ಮ ಬೀಗತನವನ್ನು ಬೆಳೆಸಿವೆ. ಕರ್ನಾಟಕದಲ್ಲಿ ಇಂತಹ ಅನೇಕ ಸಂಬಂಧಗಳು ಕಂಡುಬರುತ್ತವೆ. ಅದೇ ರೀತಿ ಇಲ್ಲೂ ಆಗುತ್ತಿದೆ. ರಾಷ್ಟಪತಿ ಹುದ್ದೆಯನ್ನು ಅಲಂಕರಿಸಿದ ಏಕೈಕ ಕನ್ನಡಿಗ ಬಿ.ಡಿ ಜತ್ತಿ ಅವರ ಮರಿ ಮೊಮ್ಮಗ ಧ್ರುವ ಜತ್ತಿ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರ ತಮ್ಮನ ಮಗಳು ಅಮೋಘಾ ಪ್ರದೀಪ ಶೆಟ್ಟರ್ ವಿವಾಹ ಫಿಕ್ಸ್‌ ಆಗಿದೆ.

ಧ್ರುವ ಜತ್ತಿ ಕಾಂಗ್ರೆಸ್ ಪಕ್ಷದ ವಕ್ತಾರರಾಗಿದ್ದಾರೆ. ಅಮೋಘಾ ಜೊತೆ ಇವರ ವಿವಾಹ ಇದೇ ಡಿಸೆಂಬರ್ 5ರಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ.

ಬಿ.ಡಿ ಜತ್ತಿ ಅವರ ಕುಟುಂಬದಿಂದ 40 ವರ್ಷಗಳ ನಂತರ ರಾಜಕೀಯಕ್ಕೆ ಬಂದಿರುವ ಧ್ರುವ ಜತ್ತಿ, ʼಜತ್ತಿ ಫೌಂಡೇಶನ್ʼ ಮುಖಾಂತರ ಅನೇಕ ವಿನೂತನ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್ ಪಕ್ಷದ ಯುವ ನಾಯಕರ ಸಾಲಿನಲ್ಲಿ ಧ್ರುವ ಜತ್ತಿ ಕೂಡಾ ಒಬ್ಬರು. ಜಗದೀಶ್‌ ಶೆಟ್ಟರ್‌ ಅವರ ತಮ್ಮ ಪ್ರದೀಪ್ ಶೆಟ್ಟರ್ ಎರಡು ಸಲಾ ಬಿಜೆಪಿಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ಇವರ ಹಿರಿಯ ಮಗಳು ಅಮೋಘಾ ಶೆಟ್ಟರ್.

ಶೆಟ್ಟರ್ ಮತ್ತು ಜತ್ತಿ ಕುಟುಂಬಗಳೆರಡೂ ಲಿಂಗಾಯತ ಸಮಾಜಕ್ಕೆ ಬಹಳ ದೊಡ್ಡ ಕೊಡುಗೆಯನ್ನು ನೀಡಿವೆ. ಜಗದೀಶ ಶೆಟ್ಟರ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾದಾಗ ಧ್ರುವ ಜತ್ತಿ ಅವರನ್ನು ಹುಬ್ಬಳ್ಳಿಯಲ್ಲಿ ಭೇಟಿಯಾಗಿದ್ದರು. ನಂತರ ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ಇದಾದ ಕೆಲವೇ ತಿಂಗಳಲ್ಲಿ ಎರಡೂ ಕುಟುಂಬಗಳು ತಮ್ಮ ಬೀಗತನದ ಸಂಬಂಧವನ್ನು ಬೆಳೆಸಿಕೊಂಡಿವೆ.

ಆದರೆ ಈಗ ಜಗದೀಶ ಶೆಟ್ಟರ್‌ ಬಿಜೆಪಿ ಸಂಸದರು. ಅವರ ಅಳಿಯನಾಗಲಿರುವ ಧ್ರುವ ಜತ್ತಿ ಕಾಂಗ್ರೆಸ್‌ನ ಯುವ ವಕ್ತಾರ. ಈ ಸಂಬಂಧ ಇಬ್ಬರ ರಾಜಕೀಯದಲ್ಲಿ ಯಾವ ರೀತಿಯ ತಿರುವು ತರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಪರಿಷತ್ ಸ್ಥಾನಕ್ಕೆ ಶೆಟ್ಟರ್ ರಾಜೀನಾಮೆ