ವಿಧಾನಸಭೆ: ಬೆಳಗ್ಗೆದ್ರೆ ರೈತರು ನಮ್ ಹೊಲಕ್ಕೆ ಬಂದು ರಾಗಿ ಬೆಳೆ ಹೆಂಗಾಗದೆ ನೋಡೋಕೆ ಬರ್ತೀರಾ? ಅಂತ ವಾಟ್ಸಾಪ್ ಮೆಸೇಜ್ ಕಳಿಸ್ತಾರೆ.
ಇನ್ನೊಬ್ರು ಮನೆಗೆ ನೀರು ನುಗ್ಗಿದೆ ನೋಡೋಕ್ ಬನ್ನಿ ಅಂತ ಮೆಸೇಜ್ ಮಾಡ್ತಾರೆ. ಮತ್ತೊಬ್ರು, ಎಲ್ಲಿದೀರಾ ಶಾಸಕರೇ ಎಂದು ವಾಟ್ಸಾಪ್ ಮೆಸೇಜ್ ಹಾಕ್ತಾರೆ. ಒಟ್ನಲ್ಲಿ ಈ ಸರಕಾರದಿಂದ ಶಾಸಕರ ಘನತೆ, ಗೌರವ ಹಾಳಾ ಗ್ತಿದೆ, ನಾವೆಲ್ಲಿ ಹೋಗ್ಬೇಕು… ನಿಯಮ 69ರಡಿ ಮಳೆ ಹಾನಿ ಪರಿಹಾರ ಕುರಿತ ಚರ್ಚೆಯ ವೇಳೆ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಹೀಗೆಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ನೀವು ಎಂಎಲ್ಯೆ ಮಾನ ಮರ್ಯಾದೇನ ಮೂರು ಕಾಸಿಗೆ ಹರಾಜು ಹಾಕಿದ್ರಿ. ಯಾರತ್ರ ಎಷ್ಟೂಂತ ಬೈಸ್ಕೊ ಳ್ಳೋಣ. ಎಂಎಲ್ಯೆ ಆತ್ಮಗೌರವ ಕಳ್ಕೊಂಡು ಹೆಂಗೆ ಬದುಕೋದು. ನೀವು ಹಿಂಗೇ ಆಡ್ತಾ ಇದ್ರೆ, ಈ ಬಿಜೆಪಿ ಸರಕಾರ ಹಿಂಗಾಗೋಗಿದೆ ನೋಡಿ ಅಂತ ನಾವೇ ಜನಕ್ಕೆ ಹೇಳಿ ನಿಮ್ ಸರಕಾರದ ಮಾನ ಮರ್ಯಾದೆ ತೆಗೀ ಬೇಕಾಗುತ್ತೆ ಎಂದು ಕಿಡಿ ಕಾರಿದರು.
ನಾವು ರಾಜ್ಯದ ಎಲ್ಲಾ ತೆರಿಗೇನ ಕೇಂದ್ರಕ್ಕೆ ಕಳ್ಸಿ, ನಮ್ಗೆ ಹಣ ಕೊಡೀಂತ ಕೇಳೋ ಪರಿಸ್ಥಿತಿ ಬಂದಿದೆ. ಈಗ ಹೆಂಗಾಗಿದೆ ಎಂದ್ರೆ ಎಲ್ಲಾ ಅವ್ರದ್ದೇ ಮಾತು. ಈ ದೇಶ ಕೇವಲ ಹಿಂದಿ ರಾಜ್ಯಗಳ ದರ್ಬಾರ್ ಆಗಬಾರದು. ದಕ್ಷಿಣದ ರಾಜ್ಯಗಳ ಬಗ್ಗೆಯೂ ಕೇಂದ್ರ ಸರಕಾರ ಗೌರವ ಕೊಡಬೇಕು. ಆದ್ದರಿಂದ ಯಾವುದೇ ಪಕ್ಷದ ಸರಕಾರ ಇರಲಿ, ಕೇಂದ್ರದ ಮೇಲೆ ಒತ್ತಡ ತಂದು ರಾಜ್ಯಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ರೈತರಿಗೆ ಬೇಗ ಪರಿಹಾರ ಕೊಡಬೇಕು ಎಂದರು.
ರೈತರ ಖಾತೆಗಳಿಗೆ ವರ್ಷಕ್ಕೆ ಇಂತಿಷ್ಟು ಎಂದು ಹಣ ಹಾಕುವ ಬದಲು ರೈತರಿಗೆ ವಿಮೆ ಕಡ್ಡಾಯಗೊಳಿಸಬೇಕು ಇಲ್ಲವೇ ಸರಕಾರವೇ ರೈತರ ವಿಮಾ ಕಂತನ್ನು ಪಾವತಿ ಮಾಡುವ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಶಿವಲಿಂಗೇಗೌಡ ಆಗ್ರಹಿಸಿದರು.