Friday, 22nd November 2024

ಫಲಿತಾಂಶವನ್ನು ನಮ್ಮ ಪಕ್ಷ ಸಮಚಿತ್ತ ಭಾವದಿಂದ ಸ್ವೀಕರಿಸುತ್ತದೆ, ಇದು ಭವಿಷ್ಯದ ಮಂತ್ರದಂಡ ಅಲ್ಲ: ಹೆಚ್‌.ಡಿ.ಕೆ ಟ್ವೀಟ್

ಬೆಂಗಳೂರು: ರಾಜ್ಯದ 2 ಉಪ ಚುನಾವಣೆಗಳ ಫಲಿತಾಂಶವನ್ನು ನಮ್ಮ ಪಕ್ಷ ಸಮಚಿತ್ತ ಭಾವದಿಂದ ಸ್ವೀಕರಿಸುತ್ತದೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ದುಡಿದ ಮುಖಂಡರು ಮತ್ತು ಕಾರ್ಯಕರ್ತರಿಗೆ ನಾನು ಸದಾ ಋಣಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಈ ಫಲಿತಾಂಶದ ಹಿನ್ನಡೆಯಿಂದ ಧೃತಿಗೆಡಬೇಕಾದ ಅಗತ್ಯವಿಲ್ಲ. ರಾಜಕೀಯ ಪಕ್ಷಗಳಿಗೆ ಉಪಚುನಾವಣೆ ಫಲಿತಾಂಶ ಭವಿಷ್ಯದ ಮಂತ್ರದಂಡ ಅಲ್ಲ. ಉಪಚುನಾವಣೆಗಳು ಹೇಗೆ ನಡೆದವು ಎಂಬ ಪರಾಮರ್ಶೆಗೆ ಹೋಗುವುದಿಲ್ಲ. ಜನತಾಜನಾರ್ಧನ ತೀರ್ಪಿಗೆ ತಲೆಬಾಗಿದ್ದೇನೆ.

ಹಿಂದೊಮ್ಮೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಚುನಾವಣೆಯಲ್ಲಿ ಜನತೆ ಮನ್ನಣೆ ನೀಡಿರಲಿಲ್ಲ. ಕೇವಲ 2 ಸೀಟು ಪಕ್ಷಕ್ಕೆ ಬಂದಿದ್ದ ಕಾಲವೊಂದಿತ್ತು. ಆನಂತರ ಇದೇ ಜನತೆ ಮುಖ್ಯಮಂತ್ರಿ ಮಾಡಿದರು, ಜನಾಶೀರ್ವಾದದಿಂದ ಪ್ರಧಾನಿಯಾದರು. ಉಪಚುನಾ ವಣೆ ಫಲಿತಾಂಶದಿಂದ ಕುಗ್ಗಿ ಹೋಗದೆ, ಪಕ್ಷವನ್ನು ಸಂಘಟಿಸಿ ಬಲಪಡಿಸುವತ್ತ ಗಮನಹರಿಸುತ್ತೇನೆ.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕಳೆದ 15 ತಿಂಗಳಲ್ಲಿ ಜನತೆಗೆ ಸ್ಪಂದಿಸಿದ ಕಾಳಜಿಗೆ ಉಪಚುನಾವಣೆ ಫಲಿತಾಂಶ ಗೆಲುವು ತಂದು ಕೊಟ್ಟಿರಬಹುದು ಎಂದಷ್ಟೇ ವ್ಯಾಖ್ಯಾನ ಮಾಡುತ್ತೇನೆ.