Thursday, 12th December 2024

Job News: ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; ಬರೋಬ್ಬರಿ 5,267 ಶಿಕ್ಷಕರ ನೇಮಕಾತಿಗೆ ಆದೇಶ

Job News

ಬೆಂಗಳೂರು: ಕಲ್ಯಾಣ ಕರ್ನಾಟಕ (Kalyana Karnataka) ಭಾಗದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ 5,267 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸಿಎಂ ಸಿದ್ದರಾಮಯ್ಯ (Siddaramaiah) ಬಜೆಟ್‌ನಲ್ಲಿ ನೀಡಿದ್ದ ಭರವಸೆಯಂತೆ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ (Job News).

1ರಿಂದ 5ನೇ ತರಗತಿಗೆ ಪ್ರಾಥಮಿಕ ಶಾಲಾ ಶಿಕ್ಷಕರ 4,424 ಹುದ್ದೆಗಳು, 6ರಿಂದ 8ನೇ ತರಗತಿಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ 78 ಹುದ್ದೆಗಳು ಹಾಗೂ 380 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಸೇರಿ ಒಟ್ಟು 5,267 ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಕಲ್ಯಾ ಣ ಕರ್ನಾಟಕ ಪ್ರದೇಶದ ಶಾಲೆಗಳಿಗೆ ಮಂಜೂರಾದ
ಒಟ್ಟು ಹುದ್ದೆಗಳಲ್ಲಿ ಸದ್ಯ 6,584 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಆ ಪೈಕಿ ಮೊದಲ ಹಂತದಲ್ಲಿ ಶೇ. 80ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಮಾಡಲಾಗುತ್ತದೆ.

ನೇಮಕಾತಿಗೆ ಪೂರ್ವ ಪ್ರಕ್ರಿಯೆಗಳು ಮುಕ್ತಾಯಗೊಂಡ ನಂತರ ಮತ್ತು ನೇಮಕಾತಿ ಆದೇಶ ನೀಡುವ ಮೊದಲು ಈ ಹುದ್ದೆಗಳಿಗೆ ತಗುಲಬಹುದಾದ ಆರ್ಥಿಕ ಆಯವ್ಯಯ ಅಂದಾಜು ಸಿದ್ದಪಡಿಸಿ ಪ್ರಸ್ತಾವನೆ ಸಲ್ಲಿಸಲು ಆರ್ಥಿಕ ಇಲಾಖೆಗೆ ಸರ್ಕಾರ ಸೂಚಿಸಿದೆ.

ವಿದ್ಯಾರ್ಹತೆ ಏನು?

ಪ್ರಾಥಮಿಕ ಶಾಲಾ ಶಿಕ್ಷಕರು (1-5ನೇ ತರಗತಿವರೆಗೆ): ಡಿ.ಇಡಿ.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6-8ನೇ ತರಗತಿ): ಪದವಿ ಜತೆಗೆ ಬಿ.ಇಡಿ.
ಫಿಸಿಕಲ್ ಎಜುಕೇಷನ್ ಟೀಚರ್ (ಗ್ರೇಡ್-2): ಪದವಿ ಜತೆಗೆ ಬಿಪಿ.ಇಡಿ.

ಪ್ರಸ್ತುತ ನೇಮಕಾತಿಗೆ ಆದೇಶ ನೀಡಿದ್ದು, ಇದರ ಕುರಿತು ಮುಂದಿನ ದಿನಗಳಲ್ಲಿ ಕರಡು ಅಧಿಸೂಚನೆ ಪ್ರಕಟವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ನಡೆಯಲಿದೆ.

ʼʼ2024-25ನೇ ಶೈಕ್ಷಣಿಕ ಸಾಲಿಗೆ ಕಲ್ಯಾಣ ಕರ್ನಟಕ ಭಾಗದಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಂಜೂರಾಗಿ ಪ್ರಸ್ತುತ ಖಾಲಿ ಇರುವ ಒಟ್ಟು 6,584 ಶಿಕ್ಷಕರ ಹುದ್ದೆಗಳ ಪೈಕಿ 5,267 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅನುಮತಿ ನೀಡುವಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಸ್ತಾವನೆ ಸಲ್ಲಿಸಿದ್ದರು. ಇದೀಗ ಈ ಪ್ರಸ್ತಾವನೆಗೆ ಸರ್ಕಾರವು ಅನುಮತಿ ನೀಡಿದೆʼʼ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Job News: 50,000ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಸಲ್ಲಿಸಿ