ರಾಮನಗರ: ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣದ ವೇಳೆ ಸಂಭವಿಸಿದ ದುರಂತ ಪ್ರಕರಣಕ್ಕೆ ಸಂಬಂಧಿಸಿ ನಿರ್ದೇಶಕ ಸೇರಿ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಮಂಗಳವಾರ ರಾಮನಗರ ಕೋರ್ಟ್ ಆದೇಶ ಹೊರಡಿಸಿದೆ.
ಬಂಧನಕ್ಕೊಳಗಾಗಿದ್ದ ನಿರ್ದೇಶಕ ಶಂಕರಯ್ಯ, ಸಾಹಸ ನಿರ್ದೇಶಕ ವಿನೋದ್ ಹಾಗೂ ಕ್ರೇನ್ ಆಪರೇಟರ್ ಮಹದೇವ್ ಅವರನ್ನು ಬಿಡದಿ ಪೊಲೀಸರು ರಾಮನಗರ ಸಿಟಿ ಸಿವಿಲ್ ಕೋರ್ಟ್ ಗೆ ಹಾಜರು ಪಡಿಸಿದ್ದರು. ವಿಚಾರಣೆ ಬಳಿಕ ನ್ಯಾಯಾಧೀಶೆ ಅನುಪಮಾ ಲಕ್ಷ್ಮೀ ಮೂವರು ಆರೋಪಿಗಳಿಗೆ ಆ.24ರವರೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.
ನಾಪತ್ತೆಯಾಗಿರುವ ನಿರ್ಮಾಪಕ ಗುರು ದೇಶಪಾಂಡೆ ಹಾಗೂ ಸಿನಿಮಾ ಇನ್ ಚಾರ್ಜ್ ಫರ್ನಾಂಡೀಸ್ ಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.