Sunday, 15th December 2024

ಕರ್ನಾಟಕ ಹೈಕೋರ್ಟ್‌ ಸಿಜೆ ಆಗಿ ನ್ಯಾ.ರಿತುರಾಜ್ ಅವಸ್ಥಿ ನೇಮಕ

ಬೆಂಗಳೂರು: ಅಲಹಾಬಾದ್ ಹೈಕೋರ್ಟ್‌ನ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ರಿತುರಾಜ್ ಅವಸ್ಥಿಯವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಕಾನೂನು ಮತ್ತು ನ್ಯಾಯಿಕ ಸಚಿವಾಲಯವು ಶನಿವಾರ ಸೂಚನೆ ನೀಡಿದೆ.

ರಾಷ್ಟ್ರಪತಿಗಳು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರಾದ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಯವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ್ದಾರೆ.

ನ್ಯಾಯಮೂರ್ತಿ ರಿತುರಾಜ್ ಅವಸ್ಥಿ 1986ರಲ್ಲಿ ಲಕ್ನೋ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಗಳಿಸಿದರು. ಫೆಬ್ರವರಿ 1, 1987ರಂದು ವಕೀಲಿ ವೃತ್ತಿಗೆ ಸೇರ್ಪಡೆಗೊಂಡರು. ನ್ಯಾ.ಅವಸ್ಥಿಯವರು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಬೆಂಚ್‌ನಲ್ಲಿ ನಾಗರಿಕ, ಸೇವೆ ಮತ್ತು ಶೈಕ್ಷಣಿಕ ವಿಷಯಗಳಲ್ಲಿ ಅಭ್ಯಾಸ ಮಾಡಿದ್ದಾರೆ.

ರಿತುರಾಜ್ ಅವಸ್ಥಿ ಈ ಮೊದಲು ಲಕ್ನೋದಲ್ಲಿ ಭಾರತದ ಸಹಾಯಕ ಸಾಲಿಸಿಟರ್ ಜನರಲ್ ಆಗಿದ್ದರು. ಏಪ್ರಿಲ್ 13, 2009 ರಂದು ಅವರನ್ನು ಅಲಹಾಬಾದ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರ ಸ್ಥಾನಕ್ಕೆ ನೇಮಿಸ ಲಾಯಿತು. ಡಿಸೆಂಬರ್ 24, 2010ರಂದು ರಿತುರಾಜ್ ಅವಸ್ಥಿ ಖಾಯಂ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು.

ರಿತುರಾಜ್ ಅವಸ್ಥಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಏರುವ ಮೊದಲು, ಲಕ್ನೋದ ಅಲಹಾಬಾದ್ ಹೈಕೋರ್ಟ್‌ನ ಹಿರಿಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದರು.