ಬೆಂಗಳೂರು: ಕನಕದಾಸ ಜಯಂತಿ ಪ್ರಯುಕ್ತ ರಾಜ್ಯ ಸರ್ಕಾರದಿಂದ ನೀಡಲಾಗುವ 2024ನೇ ಸಾಲಿನ ಪ್ರತಿಷ್ಠಿತ ಕನಕಶ್ರೀ ಪ್ರಶಸ್ತಿಗೆ (Kanakashree award) ಬಳ್ಳಾರಿಯ ಶ್ರೀ ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು , ಕನಕದಾಸರ ಪುತ್ಥಳಿ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಈ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಾಹಿತಿ ನೀಡಿದ್ದಾರೆ. ನವೆಂಬರ್ 18ರಂದು ಸೋಮವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಕನಕದಾಸ ಜಯಂತಿ ಸಮಾರಂಭದಲ್ಲಿ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಯ ಪ್ರದಾನ ಮಾಡಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಕರ್ನಾಟಕ ಸರ್ಕಾರವು ಕನಕದಾಸರ ಜೀವನ, ಸಾಹಿತ್ಯ ಸಂದೇಶ ಮತ್ತು ಸಮಾಜಕ್ಕೆ ಅವರು ನೀಡಿದ ದಾರ್ಶನಿಕ ಕೊಡುಗೆ ಕುರಿತಂತೆ ಹಾಗೂ ದಾಸ ಸಾಹಿತ್ಯದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ವಿದ್ವಾಂಸರು, ಸಂಶೋಧಕರು, ಲೇಖಕರಿಗೆ `ಕನಕ ಶ್ರೀ’ ಎಂಬ ಪ್ರಶಸ್ತಿಯನ್ನು ಕೊಟ್ಟು ಗೌರವಿಸುತ್ತಿದೆ. ಪ್ರಶಸ್ತಿಯು 5 ಲಕ್ಷ ರೂ. ನಗದು, ಶ್ರೀ ಕನಕದಾಸರ ಕಂಚಿನ ಪುತ್ಥಳಿ, ಪ್ರಶಸ್ತಿ ಫಲಕ, ಹಾರ, ಶಾಲು ಹಾಗೂ ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ.
ಈ ಸುದ್ದಿಯನ್ನೂ ಓದಿ | Childcare leave: ಅನುದಾನಿತ ಶಾಲಾ ಶಿಕ್ಷಕಿಯರು, ಮಹಿಳಾ ನೌಕರರಿಗೆ ಗುಡ್ ನ್ಯೂಸ್; ಶಿಶುಪಾಲನಾ ರಜೆ ಮಂಜೂರು
ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರ ಪರಿಚಯ
ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರು ಮಹಾನ್ ಸಂಸ್ಕೃತ ಭಾಷಾ ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದಾರೆ. ಆಚಾರ್ಯರು ಮಧ್ವ ತತ್ವಜ್ಞಾನಕ್ಕೆ ಜಾಗತಿಕ ಮಟ್ಟದಲ್ಲಿ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ. ತಾಳೆಗರಿಗಳಲ್ಲಿ ಅಜ್ಞಾತವಾಗಿದ್ದ ಸಾವಿರಾರು ಸ್ತೋತ್ರ ಮತ್ತು ಮಹತ್ವದ ವಿಚಾರಗಳು ಆಚಾರ್ಯರ ಮಹತ್ವದ ಸುದೀರ್ಘ ಸಂಶೋಧನೆಗಳಿಂದ ಬೆಳಕು ಕಂಡಿವೆ. ಈಗಾಗಲೇ ಸುಮಾರು 200ರಷ್ಟು ಗ್ರಂಥಗಳ ರಚನೆ ಹಾಗೂ ಭಾಷಾಂತರಗಳನ್ನು ಆಚಾರ್ಯರು ಮಾಡಿದ್ದಾರೆ. ವ್ಯಾಕರಣ, ಮೀಮಾಂಸೆ, ತರ್ಕ, ವೇದ, ವೇದಾಂತಗಳಲ್ಲಿ ಅಪಾರ ವಿದ್ವತ್ತನ್ನು ಹೊಂದಿರುವ ಆಚಾರ್ಯರು, ಆಚಾರ್ಯ ಮಧ್ವರ ಸರ್ವಮೂಲ ಗ್ರಂಥಗಳ ಮಹತ್ವಪೂರ್ಣ ಸಂಪಾದನೆಗಾಗಿ ಡಿ.ಲಿಟ್ ಪದವಿ ಗಳಿಸಿದ್ದಾರೆ. ಬೆಂಗಳೂರಿನಲ್ಲಿ ಸರ್ಕಾರಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸಹ ಸೇವೆ ಸಲ್ಲಿಸಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಯಾರು ಮಾಡಿರುವ ಆಚಾರ್ಯರು, ತಮ್ಮ ವಿದ್ವತ್ಪೂರ್ಣ ಸಂಶೋಧನಾ ಚಟುವಟಿಕೆಗಳಲ್ಲಿನ ಆಸಕ್ತಿಗಳಿಗೆ ಹೆಚ್ಚಿನ ಸಮಯ ವಿನಿಯೋಗಿಸಲು ಸ್ವಯಂ ನಿವೃತ್ತಿ ಪಡೆದರು.
ಪ್ರಭಂಜನಾಚಾರ್ಯರ ಮಹತ್ವದ ಸಾಂಸ್ಥಿಕ ಕೊಡುಗೆಗಳಲ್ಲಿ ಶ್ರೀ ಜಯತೀರ್ಥ ಹಸ್ತಲಿಪಿ ಗ್ರಂಥಾಲಯವು ಮಹತ್ವಪೂರ್ಣವೆನಿಸಿದೆ. ಈ ಸಂಸ್ಥೆಯು ಭಾರತೀಯ ತತ್ವಜ್ಞಾನದ ಅತ್ಯಪರೂಪದ ಮತ್ತು ಅಪ್ರಕಟಿತವಾದಂತ ವಿಷಯಗಳ ಸಂಶೋಧನೆಯತ್ತ ಪ್ರಾಮುಖ್ಯತೆ ನೀಡಿದೆ. ಆಚಾರ್ಯರ ಮತ್ತೊಂದು ಮಹತ್ವದ ಸಾಂಸ್ಥಿಕ ಕೊಡುಗೆಯೆಂದರೆ ಶ್ರೀ ವ್ಯಾಸ ಮಧ್ವ ಸಂಶೋಧನಾ ಪ್ರತಿಷ್ಠಾನ ಟ್ರಸ್ಟ್. ಈ ಮಹಾನ್ ಸಂಸ್ಥೆಯು ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳ ಕುರಿತಾದ ಮಹತ್ವದ ಚಿಂತನೆಗಳತ್ತ ನಿರಂತರವಾಗಿ ಕ್ರಿಯಾಶೀಲವಾಗಿದೆ. ಈ ಸಂಸ್ಥೆ ನೂರಾರು ಮಹತ್ವದ ಕೃತಿಗಳನ್ನು ಭಾರತೀಯ ಸಮುದಾಯಕ್ಕೆ ಕೊಡುಗೆಯಾಗಿ ನೀಡುತ್ತಾ ಬಂದಿದೆ.
ಸಾಂಸ್ಕೃತಿಕ ಕ್ಷೇತ್ರದಲ್ಲಿನ ಅಪಾರ ಕೊಡುಗೆಗಾಗಿ 2005ರ ವರ್ಷದಲ್ಲಿ ಅಂದಿನ ರಾಷ್ಟ್ರಪತಿಗಳಾಗಿದ್ದ ದಿವಂಗತ ಭಾರತರತ್ನ ಡಾ.ಅಬ್ದುಲ್ ಕಲಾಂ ಅವರಿಂದ ಸ್ವಾತಂತ್ರ್ಯೋತ್ಸವ ಪ್ರಶಸ್ತಿ ಸ್ವೀಕರಿಸಿರುವ ಪ್ರಭಂಜನಾಚಾರ್ಯರಿಗೆ, 2002ರ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಪರ್ಯಾಯ ಪ್ರಶಸ್ತಿ ಅಲ್ಲದೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ಧ ಸಂಘ ಸಂಸ್ಥೆಗಳ ಪ್ರಶಸ್ತಿ ಗೌರವಗಳು ಸಂದಿವೆ. 1994ರಲ್ಲಿ ಇವರು ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಮಧ್ವ ತತ್ವಶಾಸ್ತ್ರ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಪ್ರಭಂಜನಾಚಾರ್ಯರ ಅಸಂಖ್ಯಾತ ಉಪನ್ಯಾಸ, ಸಂಶೋಧನೆ ಮತ್ತು ಕೃತಿಗಳಲ್ಲಿ ಅಪರಿಮಿತ ಮಧ್ವತತ್ವ ವಿಚಾರಗಳ ಜತೆಗೆ, ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆ ಮತ್ತು ವೇದೋಪನಿಷತ್ತುಗಳಿಗೆ ಸಂಬಂಧಿಸಿದ ವಿಚಾರಗಳ ಮಹಾಪೂರವೇ ತುಂಬಿಕೊಂಡಿವೆ.