ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯದ 4ನೇ ‘ಕನ್ನಡ ಪುಸ್ತಕ ಹಬ್ಬʼ (Kannada Pustaka Habba) ಅಕ್ಟೋಬರ್ 26 ರಿಂದ ಡಿಸೆಂಬರ್ 1 ರವರೆಗೆ ಒಟ್ಟು 37 ದಿನಗಳ ಕಾಲ ನಗರದ ʼಕೇಶವಶಿಲ್ಪʼ ಸಭಾಂಗಣದಲ್ಲಿ ನಡೆಯಲಿದ್ದು, ಅ.26ರಂದು ಬೆಳಗ್ಗೆ 11 ಗಂಟೆಗೆ, ಶ್ರೀಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಪುಸ್ತಕ ಹಬ್ಬವನ್ನು ಉದ್ಘಾಟಿಸುವರು ಎಂದು ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿ ನಾ ದಿನೇಶ್ ಹೆಗ್ಡೆ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಾಡೋಜ ಡಾ. ಚಂದ್ರಶೇಖರ ಕಂಬಾರ ಮತ್ತು ನಾಡೋಜ ಡಾ. ಮಹೇಶ್ ಜೋಶಿ ಅವರು ಆಗಮಿಸುವರು. ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷ ಎಂ. ಪಿ. ಕುಮಾರ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದ ಅವರು, ಅಂದು, ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 10 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಷ್ಟ್ರೋತ್ಥಾನ ಪರಿಷತ್ತಿನವರೆಗೆ ತಾಯಿ ಭುವನೇಶ್ವರಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Indian Economy : 2025ರಲ್ಲಿ ಭಾರತದ ಆರ್ಥಿಕತೆ ಶೇ.7ರಿಂದ 7.2ರಷ್ಟು ಬೆಳವಣಿಗೆ: ಡೆಲಾಯ್ಟ್ ವರದಿ
37 ದಿನವೂ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ರವರೆಗೆ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ನಮ್ಮ ಪ್ರಕಟನೆಗಳಲ್ಲದೆ, ಬೇರೆ ಬೇರೆ ಪ್ರಕಾಶಕರ ಪ್ರಮುಖ ಸಾಹಿತಿ-ಲೇಖಕರ ಪುಸ್ತಕಗಳೂ ಶೇ.10 ರಿಂದ ಶೇ.50 ರವರೆಗಿನ ರಿಯಾಯಿತಿಯಲ್ಲಿ ದೊರೆಯಲಿವೆ ಎಂದರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
ಅ.26ರಿಂದ ಪ್ರತಿದಿನ ಸಾಯಂಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಗೀತ, ನೃತ್ಯ, ಜಾನಪದ, ಏಕವ್ಯಕ್ತಿ ತಾಳಮದ್ದಲೆ, ಯಕ್ಷಗಾನ, ಹಾಸ್ಯ, ಮ್ಯಾಜಿಕ್, ವಿವಿಧ ವಾದ್ಯಗೋಷ್ಠಿಗಳು, ಹರಿಕಥೆ, ಗಮಕ, ಬೊಂಬೆಯಾಟ, ಅಷ್ಟಾವಧಾನ, ತಾಳವಾದ್ಯ ಕಛೇರಿ ಹೀಗೆ ನಾಡಿನ ನುರಿತ ಹೆಸರಾಂತ ಕಲಾವಿದರು ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.
ನವೆಂಬರ್ 16 ಮತ್ತು 23 ರಂದು ‘ಪುಸ್ತಕ ಲೋಕಾರ್ಪಣʼ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮತ್ತು ಚರ್ಚಾಸ್ಪರ್ಧೆ, ಶಾಲಾ ವಿದ್ಯಾರ್ಥಿಗಳಿಗಾಗಿ ಪುಸ್ತಕ ಪರಿಚಯ ಮತ್ತು ಲೇಖನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಗಳ ಅಂತಿಮ ಹಂತ ನವೆಂಬರ್ 17 ರಂದು ನಡೆಯಲಿದ್ದು, ಅಂದೇ ಬಹುಮಾನ ವಿತರಣೆ ಮಾಡಲಾಗುವುದು ಎಂದರು.
ಪರಿಸರಸ್ನೇಹಿ ಹಣತೆ ತಯಾರಿಸುವ ಕಾರ್ಯಾಗಾರ
ಸಾಮಾಜಿಕ ಜಾಲತಾಣಗಳಲ್ಲಿನ ಉತ್ಸಾಹಿಗಳಿಗಾಗಿ ಕನ್ನಡ ನಾಡು-ನುಡಿ-ಸಂಸ್ಕೃತಿಗೆ ಸಂಬಂಧಿಸಿದಂತೆ ‘ವಿಡಿಯೊ ಮಾಡಿ! ಬಹುಮಾನ ಗೆಲ್ಲಿ!!’ ಎಂಬ ವಿಶಿಷ್ಟ ಸ್ಪರ್ಧೆಯನ್ನು ಈಗಾಗಲೇ ಘೋಷಿಸಲಾಗಿದೆ ಎಂದು ತಿಳಿಸಿದ ಅವರು, ಈ ಬಾರಿ ಕನ್ನಡ ಪುಸ್ತಕ ಹಬ್ಬದ ದಿನಗಳಲ್ಲೇ ದೀಪಾವಳಿ ಹಬ್ಬವೂ ಬರುವುದರಿಂದ ಅ. 27ರಂದು ಭಾನುವಾರ ಮಕ್ಕಳಿಗಾಗಿ ಪರಿಸರಸ್ನೇಹಿ ಹಣತೆ ತಯಾರಿಸುವ ಕಾರ್ಯಾಗಾರ ನಡೆಯಲಿದೆ.
ಈ ಸುದ್ದಿಯನ್ನೂ ಓದಿ | Health Tips: ಅಲರಾಂ ಶಬ್ದಕ್ಕೆ ಏಳುತ್ತೀರಾ? ಬಿಪಿ ಹೆಚ್ಚಬಹುದು, ಜೋಕೆ!
ದೀಪಾವಳಿ ಹಬ್ಬದ ದಿನಗಳಲ್ಲಿ ಮಕ್ಕಳಿಗಾಗಿ ‘ಕೃಷ್ಣನ ಕಥೆ ಹೇಳುವ ಸ್ಪರ್ಧೆʼ, ‘ಚಿತ್ರ ಬಿಡಿಸುವ ಸ್ಪರ್ಧೆʼ, ‘ಮಂಕುತಿಮ್ಮನ ಕಗ್ಗ ಹೇಳುವ ಸ್ಪರ್ಧೆʼ ಹಾಗೂ ‘ಆಶುಭಾಷಣ ಸ್ಪರ್ಧೆʼ ಗಳು ನಡೆಯಲಿವೆ. ಇವುಗಳಿಗೆ ಉಚಿತ ಪ್ರವೇಶ ಇರುತ್ತದೆ.
ದೀಪಾವಳಿ ಹಬ್ಬದ ದಿನಗಳಲ್ಲಿ ಅ. 31 ರಿಂದ ನವೆಂಬರ್ 3 ರವರೆಗೆ ನಾಲ್ಕು ದಿನ ದೇಸೀ ಗೋ ತಳಿಗಳ ದರ್ಶನಕ್ಕೆ-ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. 9 ದೇಸೀ ತಳಿಗಳ ಹಸು ಮತ್ತು ಕರುಗಳನ್ನು ನೋಡಲು, ಆಯಾ ತಳಿಗಳ ವೈಶಿಷ್ಟ್ಯವನ್ನು ತಿಳಿದುಕೊಳ್ಳಲು ಮತ್ತು ಆಸಕ್ತ ಆಸ್ತಿಕರು ಗೋಪೂಜೆ ನಡೆಸಲು ಅವಕಾಶ ಇರುತ್ತದೆ ಎಂದರು.
ರಕ್ತದಾನ ಕುರಿತು ಜಾಗೃತಿ
ಪುಸ್ತಕ ಹಬ್ಬದ 37 ದಿನಗಳೂ ಪ್ರತಿದಿನ ಸಾಯಂಕಾಲ 4 ಗಂಟೆಯಿಂದ 8 ಗಂಟೆಯವರೆಗೆ, ಉಚಿತ ಆಯುರ್ವೇದ ವೈದ್ಯಕೀಯ ಚಿಕಿತ್ಸಾಕೇಂದ್ರ ಕಾರ್ಯ ನಿರ್ವಹಿಸಲಿದೆ. ಸಾರ್ವಜನಿಕರು ಈ ಅವಧಿಯಲ್ಲಿ ನುರಿತ ವೈದ್ಯರನ್ನು ಕಂಡು, ಉಚಿತವಾಗಿ ವೈದ್ಯಕೀಯ ಸಲಹೆ-ಮಾರ್ಗದರ್ಶನ ಪಡೆಯಬಹುದು. ಅಲ್ಲದೇ ಪುಸ್ತಕ ಹಬ್ಬಕ್ಕೆ ಭೇಟಿ ನೀಡುವವರಲ್ಲಿ ರಕ್ತದಾನ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಒಂದು ಮಳಿಗೆ ಕಾರ್ಯನಿರ್ವಹಿಸಲಿದ್ದು, ಆಸಕ್ತರು ಸ್ಥಳದಲ್ಲೇ ರಕ್ತದಾನ ಮಾಡಲೂ ಅವಕಾಶ ಇರುತ್ತದೆ ಎಂದು ಹೇಳಿದರು.
ನಮ್ಮ ಮಹತ್ವದ ಯೋಜನೆಗಳಲ್ಲೊಂದಾದ ‘ಸಂವಿತ್ʼ (ಸಿಬಿಎಸ್‌ಸಿ ಶಾಲೆಗಳ ಪಾಠ್ಯಪುಸ್ತಕ ರಚನಾ ಯೋಜನೆ) ನ ಪ್ರಕಟನೆಗಳನ್ನೂ ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದು. ದೊಡ್ಡಬಳ್ಳಾಪುರಕ್ಕೆ ಸಮೀಪದಲ್ಲಿ ನಾವು ನಡೆಸುತ್ತಿರುವ ‘ಮಾಧವ ಸೃಷ್ಟಿʼ ಗೋಶಾಲೆ ಒಂದು ವಿನೂತನ ಉಪಕ್ರಮವಾಗಿದ್ದು, ಗೋಸಂವರ್ಧನೆ-ರಕ್ಷಣೆಯ ಜತೆಯಲ್ಲಿ ಅರಣ್ಯ ನಿರ್ಮಾಣ, ಸಾವಯವ ಕೃಷಿ, ಗೋ-ಉತ್ಪನ್ನಗಳ ತಯಾರಿಕೆ, ರೈತರಿಗೆ ಮಾರ್ಗದರ್ಶನ ಸೇರಿದಂತೆ ಹಲವು ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ್ಲಿಯ ಗೋಉತ್ಪನ್ನಗಳ ಮಾರಾಟಕ್ಕಾಗಿ ಪುಸ್ತಕಹಬ್ಬದಲ್ಲಿ ಒಂದು ಮಳಿಗೆಯನ್ನು ತೆರೆಯಲಾಗುವುದು. ಇಲ್ಲಿ ದೇಸೀ ಗೋತಳಿಗಳನ್ನು ಕುರಿತು ಪ್ರದರ್ಶಿನಿಯೂ ಇರಲಿದೆ ಎಂದರು.
ಈ ಸುದ್ದಿಯನ್ನೂ ಓದಿ | Basavaraja Bommai: ಶಿಗ್ಗಾವಿಯಲ್ಲಿ ಬಿಜೆಪಿಗೆ ಬಂಡಾಯವಿಲ್ಲ ಎಂದ ಬಸವರಾಜ ಬೊಮ್ಮಾಯಿ
ಹೀಗೆ ವೈವಿಧ್ಯಮಯ ಸಾಹಿತ್ಯಕ-ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ನಡೆಯಲಿರುವ ಈ ಬಾರಿಯ ಪುಸ್ತಕ ಹಬ್ಬದಲ್ಲಿ ನಮ್ಮ ಪ್ರಕಟನೆಗಳಲ್ಲದೆ, ಕನ್ನಡದ ಪ್ರಮುಖ ಪ್ರಕಾಶಕರ ಪುಸ್ತಕಗಳೂ ಪ್ರದರ್ಶನಗೊಳ್ಳಲಿದ್ದು, ಶೇ.10 ರಿಂದ ಶೇ. 50 ರವರೆಗೂ ರಿಯಾಯಿತಿ ಇರಲಿದೆ. ನಾಡಿನ ಪ್ರಸಿದ್ಧ ಬರಹಗಾರರ ಪುಸ್ತಕಗಳೆಲ್ಲವೂ ಒಂದೇ ಕಡೆ ಓದುಗರಿಗೆ ಲಭ್ಯವಾಗಲಿವೆ. ಶಾಲಾ-ಕಾಲೇಜುಗಳು, ಗ್ರಂಥಾಲಯಗಳು ಕೂಡ ಈ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಎಲ್ಲ ಕಾರ್ಯಕ್ರಮಗಳಿಗೆ ಸಾರ್ವಜನಿಕರು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಅವರು ಮನವಿ ಮಾಡಿದರು.