ಪಾವಗಡ: 69ನೇ ಕನ್ನಡ ರಾಜ್ಯೋತ್ಸವವನ್ನು (Kannada rajyotsava) ರಾಜ್ಯದೆಲ್ಲೆಡೆ ಸಂಭ್ರಮದಿಂದ ಶುಕ್ರವಾರ ಆಚರಿಸಲಾಗಿದೆ. ಈ ನಡುವೆ ತುಮಕೂರು ಜಿಲ್ಲೆಯ ಹಲವೆಡೆ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಪ್ರಕರಣಗಳು ನಡೆದಿವೆ. ಕೆಲವೆಡೆ ಕಾಟಾಚಾರಕ್ಕೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರೆ, ಮತ್ತೆ ಕೆಲವೆಡೆ ಧ್ವಜ ಸಂಹಿತೆ ಉಲ್ಲಂಘಿಸಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದು ಕಂಡುಬಂದಿದೆ. ಇದನ್ನು ಕಂಡು ಕಾಣದಂತಿರುವ ತಾಲೂಕು ಮತ್ತು ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
ಕನ್ನಡ ರಾಜ್ಯೋತ್ಸವದ ದಿನದಂದು ಸರ್ಕಾರಿ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳ ಧ್ವಜಸ್ತಂಬಗಳಲ್ಲಿ ರಾಷ್ಟ್ರೀಯ ಧ್ವಜ ಹಾರಿಸಬೇಕೆಂದು ರಾಜ್ಯ ಸರ್ಕಾರ ಸರ್ಕಾರ ಆದೇಶ ಮಾಡಿತ್ತು. ಅಲ್ಲದೇ ಖಾಸಗಿ ಸಂಘ-ಸಂಸ್ಥೆಗಳಲ್ಲೂ ಕನ್ನಡ ಧ್ವಜ ಹಾರಿಸುವುದನ್ನು ಕಡ್ಡಾಯ ಮಾಡಲಾಗಿತ್ತು. ಆದರೆ, ಹಲವೆಡೆ ನಾಡಧ್ವಜ ಹಾರಿಸುವ ವೇಳೆ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿರುವ ಆರೋಪ ಕೇಳಿಬಂದಿದೆ.
ಕನ್ನಡ ರಾಜ್ಯೋತ್ಸವದ ದಿನದಂದು ದ್ವಜಾರೋಹಣ ಮಾಡುವ ಬಗ್ಗೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿತ್ತು. ಶಾಲೆಗಳಲ್ಲಿ ಎರಡು ಧ್ವಜ ಸ್ತಂಭಗಳಿದ್ದಲ್ಲಿ ರಾಷ್ಟ್ರ ಧ್ವಜ ಮತ್ತು ನಾಡಧ್ವಜವನ್ನು ಹಾರಿಸಬೇಕು. ಇದರಲ್ಲಿ ರಾಷ್ಟ್ರ ಧ್ವಜ ಸ್ತಂಭವು ನಾಡ ಧ್ವಜ ಸ್ತಂಭಕ್ಕಿಂತ ಕೊಂಚ ಎತ್ತರವಾಗಿರಬೇಕು. ಒಂದು ವೇಳೆ ಶಾಲೆಗಳಲ್ಲಿ ಒಂದೇ ಧ್ವಜ ಸ್ತಂಭವಿದ್ದಲ್ಲಿ ರಾಷ್ಟ್ರ ಧ್ವಜವನ್ನು ಕಡ್ಡಾಯವಾಗಿ ಹಾರಿಸುವುದು, ಧ್ವಜ ಸಂಹಿತೆ ಪ್ರಕಾರ ಶಿಷ್ಟಾಚಾರವಾಗಿ ಧ್ವಜ ರೋಹಣವನ್ನು ಮಾಡಿ ಧ್ವಜ ಅವರೋಹಣವನ್ನೂ ಸಹ ಮಾಡಬೇಕು. ಮುಂದುವರಿದು ನಾಡ ದೇವತೆಯಾದ ತಾಯಿ ಭುವನೇಶ್ವರಿದೇವಿಯ ಫೋಟೋಗೆ ಪೂಜೆ ಸಲ್ಲಿಸಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಕಡ್ಡಾಯವಾಗಿ ಆಚರಣೆ ಮಾಡಲು ಸೂಚಿಸಲಾಗಿತ್ತು. ಇದೇ ರೀತಿ ಎಲ್ಲ ಇಲಾಖೆಗಳಿಗೂ ಸೂಚಿಸಲಾಗಿರುತ್ತದೆ. ಆದರೂ ಹಲವೆಡೆ ಧ್ವಜ ಸಂಹಿತೆ ಉಲ್ಲಂಘಿಸಲಾಗಿದೆ.
ಪಾವಗಡದ ಉಪನೋಂದನಾಧಿಕಾರಿ ಕಚೇರಿಯಲ್ಲಿ ಒಂದೇ ಧ್ವಜಸ್ತಂಭಕ್ಕೆ ರಾಷ್ಟ್ರ ಹಾಗೂ ಕನ್ನಡ ಧ್ವಜ ಹಾರಿಸಿ ಅಪಮಾನ ಮಾಡಲಾಗಿದೆ. ತಾಲೂಕಿನ ತಿರುಮಣಿಯ ಸೋಲಾರ್ ಘಟಕದ ಕರ್ನಾಟಕ ಸೌರಶಕ್ತಿ ಅಭಿವೃದ್ದಿ ನಿಗಮ ನಿಯಮಿತ ಕಚೇರಿಯಲ್ಲಿ ಧ್ವಜಾರೋಹಣ ಮಾಡದಿರುವುದು ಕಂಡುಬಂದಿದೆ.
ಇನ್ನು ಪಾವಗಡ ಸರ್ಕಾರಿ ಆಸ್ಪತ್ರೆ, ಬೆಸ್ಕಾಂ ಇಲಾಖೆ, ಪಟ್ಟಣದ ಪಿಡಬ್ಲ್ಯೂಡಿ ಕಚೇರಿ, ಬಾಳ ಪಟ್ಟಣದ ಅಗ್ನಿಶಾಮಕ ದಳ ಕಚೇರಿ, ಕ್ವಾಟಗುಡ್ಡ ಪದವಿ ಪೂರ್ವ ಕಾಲೇಜು, ಕೋಟಗುಡ್ಡ ಪಬ್ಲಿಕ್ ಶಾಲೆ, ಅದೇ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಸ್ಕಾಂ ಇಲಾಖೆ, ತಿರುಮಣಿ ಸಮುದಾಯ ಆರೋಗ್ಯ ಕೇಂದ್ರ, ನಾಗಲಮಡಿಕೆ ಪಶು ಆರೋಗ್ಯ ಕೇಂದ್ರ, ಪಳವಳ್ಳಿಯ ಪ್ರಾಥಮಿಕ ಪಶು ಚಿಕಿತ್ಸೆ ಕೇಂದ್ರ, ಪ್ರಾಥಮಿಕ ಕೃಷಿ ಸಹಕಾರ ಸಂಘ ನಿಯಮಿತ , ಪೊನ್ನಸಮುದ್ರದ ವಿನಾಯಕ ವಿದ್ಯಾಪೀಠ ಪ್ರೌಢಶಾಲೆ ಪೊನ್ನ ಸಮುದ್ರ, ಪೊನ್ನಸಮುದ್ರ ಪಂಚಾಯಿತಿ ಕಚೇರಿ ಸೇರಿ ಹಲವು ಕಚೇರಿಗಳಲ್ಲಿ ಧ್ವಜಾರೋಹಣ ಮಾಡದೆ, ಮಾಡಿದರೂ ಧ್ವಜ ಸಂಹಿತೆ ಉಲ್ಲಂಘಿಸಲಾಗಿದೆ. ಇನ್ನು ಕೆಲವೆಡೆ ನಾಡ ಧ್ವಜ ಮಾತ್ರ ಹಾರಿಸಿ, ರಾಷ್ಟ್ರ ಧ್ವಜವನ್ನು ಬೇರೆ ಕಡೆ ಕಟ್ಟಿರುವುದು ಕಂಡುಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
(ವರದಿ: ಇಮ್ರಾನ್ ಉಲ್ಲಾ ಪಾವಗಡ)