ಬೆಂಗಳೂರು: ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಅಭಿಯಾನದಡಿ (Kannada Rajyotsava) ಎಲ್ಲಾ ಸರ್ಕಾರಿ ನೌಕರರು ನವೆಂಬರ್ 1 ರೊಳಗೆ ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಕೊರಳುದಾರ (ಟ್ಯಾಗ್) ಹಾಕಿಕೊಳ್ಳುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದೆ. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಳಿಸಿ 50 ವರ್ಷಗಳು ಪೂರೈಸಿರುವ ಸುಸಂದರ್ಭದಲ್ಲಿ ʼಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಅಭಿಯಾನದಡಿ ಎಲ್ಲಾ ರಾಜ್ಯ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣಗಳನ್ನು ಒಳಗೊಂಡಿರುವ ಕೊರಳುದಾರ (ಟ್ಯಾಗ್) ಹೊಂದಿದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕೆಂದು ಸರ್ಕಾರವು ನಿರ್ಣಯಿಸಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮ, ಮಂಡಳಿ, ನಿರ್ದೇಶನಾಲಯ, ಆಯುಕ್ತಾಲಯ ಇತ್ಯಾದಿ ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ/ ಸಿಬ್ಬಂದಿ ತಮ್ಮ ಇಲಾಖೆ/ಸಂಸ್ಥೆಯ ಗುರುತಿನ ಚೀಟಿಯನ್ನು ಧರಿಸಲು ಅನುವಾಗುವಂತೆ ಹಳದಿ ಮತ್ತು ಕೆಂಪು ಬಣ್ಣದ ಕೊರಳುದಾರವನ್ನು ಒದಗಿಸಲು ತಮ್ಮ ಇಲಾಖೆ/ಸಂಸ್ಥೆಯ ಸಕ್ಷಮ ಪ್ರಾಧಿಕಾರಗಳು ಕೂಡಲೇ ನಿಯಮಗಳನುಸಾರ ಕ್ರಮವಹಿಸುವಂತೆ ತಿಳಿಸಿದ್ದಾರೆ.
ನೂತನ ಕೊರಳುದಾರದ ವಿನ್ಯಾಸವನ್ನು https://photos.app.goo.gl/YcJeNHnDNPecW8Q48 ನ ಆನ್‌ಲೈನ್ ವಿಳಾಸದಿಂದ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 1:3 ಅನುಪಾತದಲ್ಲಿ ಆಯ್ಕೆ ಪಟ್ಟಿ ಅಂತಿಮ
ವಿಶ್ವವಾಣಿ ಸುದ್ದಿಮನೆ, ಬೆಂಗಳೂರು: ಕನ್ನಡ ರಾಜ್ಯೋತ್ಸವಕ್ಕೆೆ ಮೂರು ದಿನ ಬಾಕಿಯಿರುವ ಹೊಸ್ತಿಲಲ್ಲಿಯೇ ರಾಜ್ಯ ಸರಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು (Kannada Rajyotsava Award) ಅಂತಿಮಗೊಳಿಸಿದ್ದು, ಮಂಗಳವಾರ ರಾತ್ರಿ ಅಥವಾ ಬುಧವಾರ ಬೆಳಗ್ಗೆೆ ಪ್ರಕಟವಾಗುವ ಸಾಧ್ಯತೆಯಿದೆ.
ರಾಜ್ಯೋತ್ಸವ ಪ್ರಶಸ್ತಿ ಸಂಬಂಧ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಗೆ ರಾಜ್ಯೋತ್ಸವ ಆಯ್ಕೆ ಸಮಿತಿ ಸದಸ್ಯರು 1:3 ಅನುಪಾತದಲ್ಲಿ ಸಾಧಕರ ಹೆಸರನ್ನು ಸಲ್ಲಿಸಿತ್ತು. ಬಳಿಕ ಸಿದ್ದರಾಮಯ್ಯ ಅವರು ನೀಡಿದ ಕೆಲ ಸೂಚನೆಗಳೊಂದಿಗೆ ಪಟ್ಟಿಯನ್ನು ಅಂತಿಮಗೊಳಿಸಿತ್ತು. ಇದೀಗ ಪ್ರಶಸ್ತಿ ಪುರಸ್ಕೃತರ ಪಟ್ಟಿ ಮಂಗಳವಾರ ರಾತ್ರಿ ಅಥವಾ ಬುಧವಾರ ಬೆಳಗ್ಗೆೆ ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ | Puneeth Rajkumar Death Anniversary: ʼಅಪ್ಪುʼವಿನಿಂದ ʼರಾಜಕುಮಾರʼವರೆಗೆ ಪುನೀತ್ ಅಭಿನಯದ ಮರೆಯಲಾಗದ ಚಿತ್ರಗಳಿವು
ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಜಾತಿ, ಧರ್ಮ, ಪಂಥದ ವಿಷಯದಲ್ಲಿ ಯಾವುದೇ ಗೊಂದಲಕ್ಕೆೆ ಆಸ್ಪದ ನೀಡದ ರೀತಿಯಲ್ಲಿ ಕ್ರಮವಹಿಸಲಾಗಿದೆ ಎನ್ನುವ ಮಾತುಗಳನ್ನು ಆಯ್ಕೆ ಸಮಿತಿಯ ಸದಸ್ಯರು ಹೇಳಿದ್ದಾರೆ. ಇದರೊಂದಿಗೆ ಎಲ್ಲ ಕ್ಷೇತ್ರಗಳನ್ನು ಪರಿಗಣಿಸಲಾಗಿದೆ ಎಂದಿದ್ದಾಾರೆ. ಈ ಬಾರಿ 69 ಜನರಿಗೆ ಸನ್ಮಾನಿಸಲಾಗುತ್ತಿದ್ದು, ಐದು ಲಕ್ಷ ನಗದು ಹಾಗೂ 25 ಗ್ರಾಂ ಚಿನ್ನವನ್ನು ರಾಜ್ಯೋತ್ಸವ ಪ್ರಶಸ್ತಿ ಒಳಗೊಂಡಿದೆ.