Wednesday, 18th December 2024

Kannada Sahitya Sammelana: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ; ʼಮನೆಗೊಂದು ಕೋಳಿ, ಊರಿಗೊಂದು ಕುರಿʼ ಅಭಿಯಾನಕ್ಕೆ ಚಾಲನೆ

ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಆಯೋಜಿಸಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಥಳೀಯ ಪ್ರಸಿದ್ಧ ಆಹಾರವಾದ ಬಾಡೂಟ ಕೊಡಬೇಕು ಎಂದು ವಿವಿಧ ಪ್ರಗತಿಪರ ಸಂಘಟನೆಗಳು ಒತ್ತಾಯಿಸುತ್ತಿವೆ. ಸರ್ಕಾರ ಬಾಡೂಟ ನೀಡದಿದ್ದರೆ ಕಾರ್ಯಕ್ರಮದಲ್ಲಿ ನಾವೇ ಬಾಡೂಟ ವ್ಯವಸ್ಥೆ ಮಾಡುತ್ತೇವೆ ಎಂದು ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಇದೀಗ ಸಮ್ಮೇಳನಕ್ಕೆ ಬರುವವರಿಗೆ ಬಾಡೂಟ ಬಡಿಸಲು ‘ಮನೆಗೊಂದು ಕೋಳಿ, ಊರಿಗೊಂದು ಕುರಿ’ ಸಂಗ್ರಹ ಅಭಿಯಾನಕ್ಕೆ ಸಂಘಟನೆಯೊಂದು ಮುಂದಾಗಿದೆ.

ಸಮ್ಮೇಳನದಲ್ಲಿ ಬಾಡೂಟ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ಇತ್ತೀಚೆಗೆ ವಿವಿಧ ಸಂಘಟನೆಗಳು, ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಬಾಡೂಟ ಸೇವನೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದವು. ಇದೀಗ ಸಾಹಿತ್ಯ ಸಮ್ಮೇಳನಕ್ಕೆ ಬರುವ ಅತಿಥಿಗಳಿಗೆ ಬಾಡೂಟ ಬಡಿಸಲು ‘ಮನೆಗೊಂದು ಕೋಳಿ, ಊರಿಗೊಂದು ಕುರಿ’ ಸಂಗ್ರಹ ಅಭಿಯಾನವನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆರಂಭಿಸಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆಯನ್ನೂ ಹೊರಡಿಸಿದೆ.

ಪ್ರಕಟಣೆಯಲ್ಲಿ ಏನಿದೆ?
ಮಂಡ್ಯದಲ್ಲಿ ಡಿ. 20 ರಿಂದ 22 ರವರೆಗೆ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡಲು ಹಲವರು ಮೊಟ್ಟೆ, ಕೋಳಿ ಮತ್ತು ಹಣ ಸಹಾಯ ನೀಡಲು ಮುಂದೆ ಬಂದಿರುವುದರಿಂದ, ಅವುಗಳನ್ನು ಇಂದಿನಿಂದ ಸಂಗ್ರಹಿಸಲು ಮಂಡ್ಯ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮುಂದಾಗಿದೆ.

ಸಾಹಿತ್ಯ ಸಮ್ಮೇಳನಗಳಲ್ಲಿ ಇದುವರೆಗೆ ಪಾಲಿಸಿಕೊಂಡು ಬರುತ್ತಿರುವ ಆಹಾರ ಅಸ್ಪೃಶ್ಯತೆ ಮತ್ತು ಆಹಾರ ಅಸಮಾನತೆಯನ್ನು ಪ್ರತಿಭಟಿಸಿ ಅವುಗಳನ್ನು ಕೊನೆಗೊಳಿಸುವ ಉದ್ದೇಶವಿದೆ. ಮಂಡ್ಯ ಜಿಲ್ಲೆಯ ಹೆಮ್ಮೆಯ ಆಹಾರ, ಅತಿಥಿ ಸತ್ಕಾರದ ಪರಂಪರೆಯನ್ನು ಎತ್ತಿಹಿಡಿಯಲು ಇಂತಹ ಆಂದೋಲನಕ್ಕೆ ಮುಂದಾಗಿರುವ ಪ್ರಗತಿಪರ ಶಕ್ತಿಗಳ ಜತೆ ಕೈಜೋಡಿಸಬೇಕೆಂದು ವಿನಂತಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಹಾರಿ ಊಟದ ಜತೆಗೆ ಮಾಂಸದೂಟ ಹಾಕುವ ಮೂಲಕ ಆಹಾರ ಸಮಾನತೆಯನ್ನು ಎತ್ತಿಹಿಡಿಯುವ ಪ್ರಗತಿಪರ ಸಂಘಟನೆಗಳ ಬೇಡಿಕೆಗೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಮತ್ತು ಸ್ವಾಗತ ಸಮಿತಿ ಇಲ್ಲಿಯವರೆಗೆ ಖಚಿತ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ಮಾಂಸದೂಟ ನೀಡಲು ಬೇಕಾದ ಪರಿಕರಗಳನ್ನು ನೀಡಲು ಮುಂದೆ ಬಂದಿರುವ ದಾನಿಗಳಿಂದ ಅವುಗಳನ್ನು ಇಂದಿನಿಂದ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಸ್ವಾಗತ ಸಮಿತಿಯೇ ಮಾಂಸದೂಟ ನೀಡಲು ನಿರ್ಧರಿಸಿದಲ್ಲಿ ಪ್ರಗತಿಪರ ಸಂಘಟನೆಗಳು ಅದನ್ನು ಹೃದಯ ಪೂರ್ವಕವಾಗಿ ಸ್ವಾಗತಿಸುತ್ತವೆ ಮತ್ತು ಸಂಗ್ರಹಿಸಿದ ಪರಿಕರಗಳನ್ನು ಸ್ವಾಗತ ಸಮಿತಿಗೆ ಹಸ್ತಾಂತರಿಸಿ ಸಮ್ಮೇಳನದ ಯಶಸ್ಸಿಗೆ ದುಡಿಯುತ್ತವೆ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇವೆ ಎಂದು ಒಕ್ಕೂಟ ತಿಳಿಸಿದೆ.

ಈ ಸುದ್ದಿಯನ್ನೂ ಓದಿ | Kannada Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ; ಇಷ್ಟೆಲ್ಲಾ ಇದೆ ವಿಶೇಷ!

ಒಂದು ವೇಳೆ ಸಮ್ಮೇಳನದ ಸಂಘಟಕರು ಸಸ್ಯಹಾರದ ಜತೆ ಮಾಂಸದೂಟ ನೀಡುವ ಮೂಲಕ ಆಹಾರ ಅಸ್ಪೃಶ್ಯತೆ, ಅಸಮಾನತೆ ಮತ್ತು ಮೇಲು ಕೀಳಿನ ಪರಂಪರೆಯನ್ನು ಹೊಡೆದೋಡಿಸಲು ಮುಂದಾಗದಿದ್ದರೆ ಮಂಡ್ಯ ಜಿಲ್ಲೆಯ ಪ್ರಗತಿಪರ ಶಕ್ತಿಗಳು ಆ ಕೆಲಸವನ್ನು ಮಾಡೇ ತೀರುತ್ತವೆ ಎಂದು ವಿನಮ್ರವಾಗಿ ತಿಳಿಸಬಯಸುತ್ತೇವೆ ಹಾಗೂ “ಈ ಸಮ್ಮೇಳನವು ಆಹಾರ ಅಸಮಾನತೆ ಮತ್ತು ಆಹಾರ ಅಸ್ಪೃಶ್ಯತೆಯನ್ನು ಎತ್ತಿಹಿಡಿದ ಸಮ್ಮೇಳನ” ಎಂದು ಫಲಕ ಹಿಡಿದು ಪ್ರತಿಭಟಿಸುತ್ತೇವೆ ಎಂದು ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.