ಬೆಂಗಳೂರು: ಮಂಡ್ಯದಲ್ಲಿ ಡಿಸೆಂಬರ್ 20, 21 ಮತ್ತು 22ರಂದು ಆಯೋಜನೆಯಾಗಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (kannada sahitya sammelana 2024) ಅಧ್ಯಕ್ಷರಾಗಿ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಆಯ್ಕೆಯಾಗಿದ್ದಾರೆ. ಈ ಬಾರಿಯ ಸಮ್ಮೇಳನಕ್ಕೆ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬುವುದು ಭಾರಿ ಕುತೂಹಲ ಹುಟ್ಟಿಸಿತ್ತು. ಇದಕ್ಕೆ ಕನ್ನಡ ಸಾಗಿತ್ಯ ಪರಿಷತ್ ತೆರೆ ಎಳೆದಿದ್ದು, ಅಂತಿಮವಾಗಿ ಗೊ.ರು. ಚನ್ನಬಸಪ್ಪ ಅವರನ್ನು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಿದೆ.
ಬುಧವಾರ ಬೆಳಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳದ ಅಧ್ಯಕ್ಷರನ್ನು ಅಂತಿಮಗೊಳಿಸಲಾಗಿತ್ತು. ಈ ಬಗ್ಗೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೂಲಂಕಷವಾಗಿ ಎಲ್ಲಾ ನೆಲೆಗಳಿಂದಲೂ ಚರ್ಚಿಸಿ ಸರ್ವಾನುಮತದಿಂದ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಡಿಸೆಂಬರ್ 20, 21 ಮತ್ತು 22ರಂದು ಮಂಡ್ಯದ ಸ್ಯಾಂಜೋ ಆಸ್ಪತ್ರೆ ಹಿಂಭಾಗದ ಮೈದಾನದಲ್ಲಿ ನಡೆಯಲಿದೆ. ಇನ್ನು ಕಳೆದ ಬಾರಿಯ 86ನೇ ಕನ್ನಡ ಸಾಹಿತ್ಯ ಸಮ್ಮೇಳನವು ಹಾವೇರಿಯಲ್ಲಿ 2023ರ ಜನವರಿ 6-8 ವರೆಗೆ ನಡೆದಿತ್ತು. ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ, ಕವಿ ಡಾ.ದೊಡ್ಡರಂಗೇಗೌಡ ಅವರು ವಹಿಸಿದ್ದರು.
ಗೊ.ರು. ಚನ್ನಬಸಪ್ಪ ಅವರ ಪರಿಚಯ
ಜಾನಪದ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಹಿರಿಯ ಸಾಹಿತಿ ಗೊ. ರು. ಚನ್ನಬಸಪ್ಪ ಅವರು ಚಿಕ್ಕಮಗಳೂರು ಜಿಲ್ಲೆಯ ಗೊಂಡೇದಹಳ್ಳಿಯಲ್ಲಿ 1930ರ ಮೇ 18ರಂದು ರುದ್ರಪ್ಪಗೌಡ ಮತ್ತು ಅಕ್ಕಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಗ್ರಾಮೀಣ ಬದುದು ಮತ್ತು ಜಾನಪದ ಕ್ಷೇತ್ರವು ಅವರ ಆಸಕ್ತಿ ಕ್ಷೇತ್ರವಾಗಿದ್ದು, 1967ರಲ್ಲಿ ತರೀಕೆರೆಯಲ್ಲಿ ನಡೆದ ಜಾನಪದ ಸಮ್ಮೇಳನದ ಸಂದರ್ಭದಲ್ಲಿ ಹೊರತಂದ ಕೃತಿ ‘ಹೊನ್ನ ಬಿತ್ತೇವು ಹೊಲಕೆಲ್ಲ’ ಗ್ರಂಥದ ಸಂಪಾದಕರಾಗಿದ್ದಾರೆ. ಕೆ.ಆರ್. ಲಿಂಗಪ್ಪ ಅಭಿನಂದನಾ ಸಮಿತಿ ಪ್ರಕಟಿಸಿದ ‘ಗ್ರಾಮಜ್ಯೋತಿ’ ಇವೆರಡೂ ಕೃತಿಗಳೂ ಗೊ. ರು. ಚನ್ನಬಸಪ್ಪಅವರು ಸಂಪಾದಿಸಿ ವಿಶಿಷ್ಟ ಆಕರಗ್ರಂಥಗಳಾಗಿವೆ. ಜಾನಪದ ವಸ್ತುವನ್ನಾಧರಿಸಿ ಬರೆದ ’ಸಾಕ್ಷಿ ಕಲ್ಲು, ಬೆಳ್ಳಕ್ಕಿ ಹಿಂಡು ಬೆದರ‍್ಯಾವೋ’ ರಂಗಭೂಮಿಯ ಮೇಲೆ ಅಪೂರ್ವ ಯಶಸ್ಸು ಕಂಡ ನಾಟಕಗಳಾಗಿವೆ.
’ವಿಭೂತಿ, ದಾಸೋಹ, ಸೇವಾ ಸಂಪದ’ ಮೊದಲಾದ ವಿಶಿಷ್ಟ ಕೃತಿರಚನೆ ಮಾಡಿದ್ದು, ವಾರ್ತಾ ಇಲಾಖೆಯ ‘ಪಂಚಾಯತ್ ರಾಜ್ಯ’, ‘ಜನಪದ’ ಮಾಸಪತ್ರಿಕೆಗಳ ಸಹಾಯಕ ಸಂಪಾದಕರಾಗಿ ಪರಿಷತ್ ಪತ್ರಿಕೆ, ಜಾನಪದ ಜಗತ್ತು ಪತ್ರಿಕೆಗಳ ಸಂಪಾದಕರ ಜವಾಬ್ದಾರಿ ಜತೆಗೆ ಚಿತ್ರರಂಗದಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು, ವಜ್ರಮಹೋತ್ಸವ, ಕರ್ನಾಟಕ ಜಾನಪದ ಕಲೆ, ಕನ್ನಡ ಪತ್ರಿಕೋದ್ಯಮ, ಸುತ್ತೂರ ಸಿರಿ, ಮೊದಲಾದ 40ಕ್ಕೂ ಹೆಚ್ಚು ಸಾಕ್ಷ್ಯ ಚಿತ್ರ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾಡಿನಾದ್ಯಂತ ಪ್ರವಾಸ ಮಾಡಿ, ಸಾಹಿತ್ಯಾಭಿಮಾನಿಗಳಿಂದ ಏಳೆಂಟು ಲಕ್ಷರೂ ಸಂಗ್ರಹಣೆ ಮಾಡಿದ್ದಾರೆ. ಪರಿಷತ್ತಿನ ಸಿಬ್ಬಂದಿಯನ್ನು ಅನುದಾನದ ವ್ಯಾಪ್ತಿಗೆ ತಂದ ಕೀರ್ತಿ ಸಾಂಸ್ಕೃತಿಕ ಕಾರ್ಯಕ್ರಮ ಗೀತ-ಸಂಗೀತ, ಕಾವ್ಯ-ಕಾವೇರಿ ಪ್ರಾರಂಭಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಇವರ ಸಾಧನೆಗೆ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ ಮತ್ತಿತರ ಪ್ರಶಸ್ತಿಗಳು ಸಂದಿವೆ.
ಈ ಸುದ್ದಿಯನ್ನೂ ಓದಿ | Fact Check : ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 62 ವರ್ಷಕ್ಕೆ ಹೆಚ್ಚಳ; ಇದು ನಿಜವೇ? ಇಲ್ಲಿದೆ ಮಾಹಿತಿ