Saturday, 23rd November 2024

ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಪ್ರತಿಭಟನೆಗಷ್ಟೇ ಸೀಮಿತಗೊಂಡ ”ಬಂದ್”

ಚಾಮರಾಜನಗರ: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಶನಿವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಚಾಮರಾಜನಗರ ದಲ್ಲಿ ಸಂಪೂರ್ಣ ವಿಫಲವಾಗಿ, ಪ್ರತಿಭಟನೆಗಷ್ಟೇ ಸೀಮಿತವಾಯಿತು. ಜನಜೀವನ ಸಹಜಸ್ಥಿತಿಯಲ್ಲಿದೆ.

ನಗರದ ಭುವನೇಶ್ವರಿ ವೃತ್ತದಲ್ಲಿ ಕನ್ನಡ ಸಂಘಟನೆಗಳ ಕಾರ್ಯಕರ್ತರು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆಯ ಕಾವು ಹೆಚ್ಚಿಸಲು ಪ್ರಯತ್ನಿಸಿದರು. ಆದರೆ ಕನ್ನಡಪರ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಪೊಲೀಸರು ಬಂದ್ ವಿಫಲಗೊಳಿಸಿದ್ದಾರೆ.

ಆಟೋ, ಕ್ಯಾಬ್, ಇನ್ನಿತರ ವಾಹನ ಸಂಚಾರ ಮಾಮೂಲಿನಂತಿದೆ. ಜನ ಸಂಚಾರಕ್ಕೂ ಯಾವುದೇ ರೀತಿಯ ತೊಂದರೆಯುಂಟಾ  ಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡ ಲಾಗಿದೆ.

ಕನ್ನಡ ಸಂಘಟನೆಗಳು ಹೊರತಪಡಿಸಿದರೆ ಇತರೆ ಯಾವುದೇ ಸಂಘ ಸಂಸ್ಥೆಗಳು ಬಂದ್ ಗೆ ಬೆಂಬಲ ಸೂಚಿಸಿರಲಿಲ್ಲ. ಅಲ್ಲದೆ ಬೆಳಿಗ್ಗೆಯೇ ಕನ್ನಡ ಕಾರ್ಯಕರ್ತರನ್ನು ಬಂಧಿಸಿದ್ದರಿಂದ ಬಂದ್ ಗೆ ಹಿನ್ನಡೆಯುಂಟಾಯಿತು.

ವಿಜಯಪುರ: ಕರ್ನಾಟಕ ಬಂದ್ ಸಂಪೂರ್ಣ ವಿಫಲವಾಯಿತು. ಎಂದಿನಂತೆ ವ್ಯಾಪಾರ, ವಹಿವಾಟು ನಡೆಯಿತು.

ಜನ ಸಂಚಾರವೂ ಎಂದಿನಂತೆ ಇತ್ತು. ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಮತ್ತು ಪ್ರವೀಣ್ ಶೆಟ್ಟಿ ಬಣದ ಕಾರ್ಯ ಕರ್ತರು ನಗರದ ಅಂಬೇಡ್ಕರ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ವಿಜಯಪುರದಲ್ಲಿ ಕನ್ನಡ ಸಂಘಟನೆಗಳು ಹೇಗೆ ಬಂದ್ ನಡೆಸುತ್ತಾರೆ ನೋಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ದಮಕಿ ಹಾಕಿದ್ದರು. ಅಲ್ಲದೇ, ಕರವೇ ಎಂದರೆ ಕಳ್ಳರ ರಕ್ಷಣಾ ಕೂಟ ಎಂದು ಟೀಕಿಸಿದ್ದರು. ನಗರದ ವ್ಯಾಪಾರಸ್ಥರು, ಹಿಂದೂ ಸಂಘಟನೆಗಳ ಮುಖಂಡರ ಸಭೆ ನಡೆಸಿ, ಬಂದ್ ವಿಫಲಗೊಳಿಸಲು ಕರೆ ನೀಡಿದ್ದರು.

ಶಿವಮೊಗ್ಗ: ಕರ್ನಾಟಕ ಬಂದ್‍ಗೆ ಶಿವಮೊಗ್ಗ ನಗರದಲ್ಲಿ ನೀರಿಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡು ದಿನದ ಹಿಂದೆ ನಡೆದ ಕೋಮು ಗಲಭೆ ಮತ್ತು ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಯಾವುದೇ ಸಂಘಟನೆಗಳು ಬಂದ್‍ ಮಾಡಲು ಮುಂದೆ ಬಂದಿಲ್ಲ.

ಎರಡು ದಿನಗಳ ಹಿಂದೆ ನಡೆದ ಕೋಮು ಗಲಭೆಯಿಂದಾಗಿ ನಗರದಲ್ಲಿ 144 ಸೆಕ್ಷನ್ ‍ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದೆ. ಶನಿವಾರ ಬೆಳಿಗ್ಗೆ 10ರವರೆಗೂ ನಿಷೇಧಾಜ್ಞೆ ಜಾರಿಯಲ್ಲಿತ್ತು.

ನಿಷೇಧಾಜ್ಞೆಯನ್ನು ಇನ್ನೂ ವಿಸ್ತರಣೆ ಮಾಡದಿರುವುದರಿಂದ ಜನರು ಆತಂಕ ಬದಿಗಿಟ್ಟು ಮನೆಯಿಂದ ಹೊರ ಬರುತ್ತಿದ್ದಾರೆ. ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಿಗಿಸಿಕೊಳ್ಳುತ್ತಿದ್ದಾರೆ.

ಎರಡು ದಿನದಿಂದ ಸ್ಥಗಿತವಾಗಿದ್ದ ಖಾಸಗಿ ಬಸ್ ಸಂಚಾರ ಪುನಾರಂಭವಾಗಿದ್ದು, ದೂರದ ಊರಿಗೆ ತೆರಳಲು ಜನರು ಬಸ್ ನಿಲ್ದಾಣಕ್ಕೆ ಬರುತ್ತಿದ್ದಾರೆ. ಕೆಎಸ್‍ಆರ್‌ಟಿಸಿ ಬಸ್ ಸಂಚಾರವು ಸಾಮಾನ್ಯ ಸ್ಥಿತಿಗೆ ಬಂದಿದೆ.

ದಾವಣಗೆರೆ: ದಾವಣಗೆರೆಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಯಿತು. ನಗರದ ಜಯದೇವ ಸರ್ಕಲ್‌ಗೆ ಬಂದ್ ಕರೆ ಸೀಮಿತ ವಾಯಿತು. ಜನ ಜೀವನ ಎಂದಿನಂತ ಇತ್ತು . ಬಸ್, ಆಟೋ ಸಂಚಾರ ಎಂದಿನಂತೆ ಇದ್ದವು. ಅಂಗಡಿಗಳು ತೆರೆದಿದ್ದವು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪ್ರತಿಕೃತಿ ದಹನ ಮಾಡಲಾಯಿತು. ಉರುಳು ಸೇವೆ ಮಾಡಿ ಕರವೇ ಕಾರ್ಯ ಕರ್ತರು ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಜಾತಿಯ ಜನರ ಓಲೈಕೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು. ಮಾನವ ಸರಪಳಿ ನಿರ್ಮಿಸಿ ಸ್ವಲ್ಪ ಹೊತ್ತು ರಸ್ತೆ ತಡೆ ಮಾಡಿದರು. ಮಹಿಳಾ ಕಾರ್ಯಕರ್ತೆಯರು ಯತ್ನಾಳ್ ಭಾವಚಿತ್ರಕ್ಕೆ ಸಗಣಿ ಎರಚಿ ಚಪ್ಪಲಿ ಸೇವೆ ಮಾಡಿದರು.