Friday, 13th December 2024

ಸದನಕ್ಕಿಂತ ಉಪಕದನದ ಕಡೆ ಗಮನ

ಬಹುತೇಕ ನಾಯಕರು ಚುನಾವಣೆಯಲ್ಲಿ ತಲ್ಲೀನ

ಬಜೆಟ್ ಕಲಾಪ ಖಾಲಿ ಖಾಲಿ

ವಿಶೇಷ ವರದಿ: ವೆಂಕಟೇಶ್‍ ಆರ್‌.ದಾಸ್‍

ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಜತೆಗೆ ರಾಜ್ಯದಲ್ಲೂ ಒಂದು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ
ಚುನಾವಣೆ ನಡೆಯುತ್ತಿರುವುದರಿಂದ ಬಜೆಟ್ ಕಲಾಪ ಖಾಲಿ ಖಾಲಿಯಾಗಿದೆ.

ರಾಜಕೀಯ ಪಕ್ಷಗಳಿಗೆ ಕಲಾಪಕ್ಕಿಂತ ಚುನಾವಣೆಯೇ ಮಹತ್ವದಾಗಿದ್ದು, ಬಹುತೇಕ ಶಾಸಕರು ಕಲಾಪಗಳಿಗೆ ಗೈರಾಗುತ್ತಿದ್ದು, ಬಜೆಟ್ ಮೇಲಿನ ಚರ್ಚೆ ನೀರಸವಾಗುತ್ತಿದೆ. ಮಾರ್ಚ್ 4 ರಿಂದ ಆರಂಭವಾದ ಬಜೆಟ್ ಅಧಿವೇಶನದಲ್ಲಿ ಮೊದಲ ವಾರ ಬಹುತೇಕ ಶಾಸಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆದರೆ, ಮಾರ್ಚ್ 8 ರಂದು ಬಜೆಟ್ ಮಂಡನೆಯಾದ ನಂತರದಿಂದ ಬಜೆಟ್ ಮೇಲೆ ನಡೆಯುತ್ತಿರುವ ಚರ್ಚೆಯಲ್ಲಿ ಶೇ.50ಕ್ಕಿಂತ ಕಡಿಮೆ ಶಾಸಕರು ಭಾಗವಹಿಸುತ್ತಿದ್ದಾರೆ.

ಅನೇಕ ಸಚಿವರಿಗೆ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡು ಹಾಗೂ ಪುದುಚೇರಿ ಚುನಾವಣೆಯ ಉಸ್ತುವಾರಿ ನೀಡಲಾಗಿದೆ. ಹೀಗಾಗಿ ಕೆಲವು ಸಚಿವರು ಈವರೆಗೆ ಅಧಿವೇಶನದಲ್ಲಿ ಪಾಲ್ಗೊಂಡಿಲ್ಲ. ಇನ್ನು ಕೆಲವರು ಆರಂಭದ ಒಂದೆರಡು ದಿನಗಳಲ್ಲಿ ಭಾಗವಹಿಸಿ, ನಂತರ ಕಣ್ಮರೆಯಾಗಿದ್ದಾರೆ. ಹೀಗಾಗಿಯೇ, ಶಾಸಕರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲು ಸಚಿವರು ಇಲ್ಲದಿರುವುದು ಮತ್ತು ಸಚಿವರ ಲಿಖಿತ ಉತ್ತರಗಳನ್ನು ಅವರ ಅನುಪಸ್ಥಿತಿಯಲ್ಲಿ ಬೇರೆ ಸಚಿವರು ನೀಡುತ್ತಿದ್ದಾರೆ.

ಸರಕಾರದ ಮತ್ತು ಸಚಿವರ ಇಂತಹ ನಡೆಗೆ ವಿಧಾನಸಭೆ ಸ್ಪೀಕರ್ ಹಾಗೂ ವಿಧಾನ ಪರಿಷತ್‌ನ ಸಭಾಪತಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರು ಕಡ್ಡಾಯವಾಗಿ ಕಲಾಪದಲ್ಲಿ ಭಾಗವಹಿಸುವಂತೆ ತಾಕೀತು ಮಾಡಿದ್ದಾರೆ. ಆದರೆ, ಪಕ್ಷದ ಅಣತಿ ಯಂತೆ ಕೆಲ ಸಚಿವರು ಅನಿವಾರ್ಯವಾಗಿ ಚುನಾವಣಾ ಅಖಾಡದಲ್ಲಿ ತಲ್ಲೀನರಾಗಿದ್ದಾರೆ.

ಸಚಿವ ಅರವಿಂದ ಲಿಂಬಾವಳಿ ಅವರು ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೊಡಗಿದ್ದರೆ, ಡಿಸಿಎಂ ಅಶ್ವತ್ಥ ನಾರಾಯಣ
ಕೇರಳ ಚುನಾವಣೆಯಲ್ಲಿ ತೊಡಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಶಾಸಕ ಮುನಿರತ್ನ, ವಿಧಾನ ಸಭೆ ಮುಖ್ಯ ಸಚೇತಕ ಸುನೀಲ್ ಕುಮಾರ್ ಸೇರಿ ಅನೇಕ ಶಾಸಕರು ತಮಿಳುನಾಡು ಚುನಾವಣೆಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ದಿನೇಶ್ ಗುಂಡೂರಾವ್ ತಮಿಳುನಾಡಿನ ಉಸ್ತುವಾರಿಯಾಗಿದ್ದಾರೆ.

ಉಪಚುನಾವಣೆ ಕಾವು: ಮಸ್ಕಿ ಕ್ಷೇತ್ರದ ಉಸ್ತುವಾರಿಯಾಗಿರುವ ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಅನೇಕ ಶಾಸಕರು ಈಗಾಗಲೇ ಉತ್ತರ ಕರ್ನಾಟಕದ ಚುನಾವಣೆ ಕಡೆಗೆ ಗಮನ ಹರಿಸಿದ್ದಾರೆ. ಕಾಂಗ್ರೆಸ್ ಕೂಡ ಈಗಾಗಲೇ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದ್ದು, ಚುನಾವಣೆ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಸದನ ಮತ್ತಷ್ಟು ಖಾಲಿ ಹೊಡೆಯಲಿದೆ.

ಕಲಾಪ ಮೊಟುಕು ಸಾಧ್ಯತೆ
ಸರಕಾರದ ತೀರ್ಮಾನದಂತೆ ಮಾರ್ಚ್ 31ರವರೆಗೆ ಬಜೆಟ್ ಅಧಿವೇಶನದ ಕಲಾಪಗಳು ನಡೆಯಬೇಕಿದೆ. ಆದರೆ, ಈಗಾಗಲೇ
ಪಂಚರಾಜ್ಯಗಳ ಚುನಾವಣೆ ಮತ್ತು ಉಪಚುನಾವಣೆಗಳಲ್ಲಿ ತೊಡಗಿಸಿಕೊಳ್ಳಬೇಕಾದ್ದರಿಂದ ಕಲಾಪವನ್ನು ಒಂದು ವಾರ
ಮೊಟುಕುಗಳಿಸಲು ತೀರ್ಮಾನಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಸೋಮವಾರದಿಂದ ಆರಂಭವಾಗುವ ಕಲಾಪ
ಶುಕ್ರವಾರವೇ ಕೊನೆಗೊಳ್ಳಲಿದ್ದು, ಮಾ.31ರ ಬದಲಿಗೆ 26ಕ್ಕೆ ಕೊನೆಗೊಳ್ಳುವ ಎಲ್ಲ ಸಾಧ್ಯತೆಗಳಿವೆ.

*ಡಿಸಿಎಂ ಅಶ್ವತ್ಥ ನಾರಾಯಣ ಕೇರಳ, ಸಚಿವ ಅರವಿಂದ ಲಿಂಬಾವಳಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಸಿ.
*ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಶಾಸಕ ಮುನಿರತ್ನ, ವಿಧಾನಸಭೆ ಮುಖ್ಯ ಸಚೇತಕ ಸುನೀಲ್ ಕುಮಾರ್ ಅವರಿಂದ ತಮಿಳುನಾಡಿನಲ್ಲಿ ಪ್ರಚಾರ

*ಕಾಂಗ್ರೆಸ್‌ನ ದಿನೇಶ್ ಗುಂಡೂರಾವ್ ತಮಿಳುನಾಡಿನ ಉಸ್ತುವಾರಿ
*ಡಿಸಿಎಂ ಲಕ್ಷ್ಮಣ ಸವದಿ ಮಸ್ಕಿ ಕ್ಷೇತ್ರದ ಉಸ್ತುವಾರಿ