Sunday, 15th December 2024

Karnataka By Election: ಶಿಗ್ಗಾಂವಿ, ಸಂಡೂರು ಉಪ ಚುನಾವಣೆಗೆ ಬಿಜೆಪಿ ಟಿಕೆಟ್‌ ಘೋಷಣೆ; ಬೊಮ್ಮಾಯಿ ಪುತ್ರ, ರೆಡ್ಡಿ ಆಪ್ತನಿಗೆ ಮಣೆ

Karnataka By Election

ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ (Karnataka By Election) ನಡೆಯುವ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್‌ ಘೋಷಣೆ ಮಾಡಿದೆ. ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್‌ ಬೊಮ್ಮಾಯಿಗೆ ಟಿಕೆಟ್‌ ಸಿಕ್ಕಿದ್ದು, ಸಂಡೂರು ಕ್ಷೇತ್ರದಲ್ಲಿ ಶಾಸಕ ಜನಾರ್ದನ ರೆಡ್ಡಿ ಅಪ್ತ ಬಂಗಾರು ಹನುಮಂತುಗೆ ಮಣೆ ಹಾಕಲಾಗಿದೆ.

ಬಸವರಾಜ ಬೊಮ್ಮಾಯಿ ಅವರು ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಅವರ ಪುತ್ರ ಭರತ್‌ ಬೊಮ್ಮಾಯಿಗೆ ಟಿಕೆಟ್‌ ನೀಡಲಾಗಿದೆ. ಬೊಮ್ಮಾಯಿ ಪುತ್ರನಿಗೆ ಟಿಕೆಟ್‌ ನೀಡಲು ಬಿಜೆಪಿಯಲ್ಲೇ ಅಪಸ್ವರ ಇತ್ತು. ಆದರೆ, ಪುತ್ರನಿಗೆ ಟಿಕೆಟ್‌ ಕೊಡಿಸುವಲ್ಲಿ ಮಾಜಿ ಸಿಎಂ ಸಫಲರಾಗಿದ್ದಾರೆ.

ಇನ್ನು ಕಾಂಗ್ರೆಸ್‌ನ ಇ.ತುಕಾರಾಂ ಅವರು ಲೋಕಸಭೆ ಚುನಾವಣೆಯಲ್ಲಿ ಗೆಲುವು ಕಂಡಿದ್ದರಿಂದ ತೆರವಾಗಿದ್ದ ಸಂಡೂರು ಕ್ಷೇತ್ರಕ್ಕೆ ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ, ರೆಡ್ಡಿ ಆಪ್ತ ಬಂಗಾರು ಹನುಮಂತು ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರಕ್ಕೆ ಹಲವು ಆಕಾಂಕ್ಷಿಗಳ ಹೆಸರುಗಳು ಕೇಳಿಬಂದಿದ್ದವು. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಸೋತಿರುವ ಶ್ರೀರಾಮುಲು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಶಿಲ್ಪಾ, ಮಾಜಿ ಸಂಸದ ಎನ್.ವೈ ದೇವೇಂದ್ರಪ್ಪ, ಕೆ.ಎಸ್‌ ದಿವಾಕರ್ ಸೇರಿದಂತೆ ಹಲವು ಹೆಸರುಗಳು ಮುಂಚೂಣಿಯಲ್ಲಿದ್ದವು. ಆದರೆ, ಅಂತಿಮವಾಗಿ ಬಂಗಾರು ಹನುಮಂತು ಅವರಿಗೆ ಪಕ್ಷ ಮಣೆ ಹಾಕಿದೆ.

ಇನ್ನು ಮೂರು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಗೆ ಟಿಕೆಟ್‌ ಘೋಷಿಸಿರುವ ಬಿಜೆಪಿ, ಚನ್ನಪಟ್ಟಣಕ್ಕೆ ಟಿಕೆಟ್‌ ಘೋಷಣೆ ಮಾಡಿಲ್ಲ. ಎಚ್‌.ಡಿ. ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

ಚನ್ನಪಟ್ಟಣ ಟಿಕೆಟ್‌ ಯಾರಿಗೆ?

ಚನ್ನಪಟ್ಟಣ ಕ್ಷೇತ್ರವು ಜೆಡಿಎಸ್‌ ಭದ್ರಕೋಟೆಯಾಗಿರುವುದರಿಂದ ನಿಖಿಲ್‌ ಕುಮಾರಸ್ವಾಮಿಯನ್ನು ಕಣಕ್ಕಿಳಿಸಲು ಜೆಡಿಎಸ್‌ ಮುಂದಾಗಿದೆ. ಆದರೆ, ಕ್ಷೇತ್ರದಿಂದ ತಮಗೆ ಟಿಕೆಟ್‌ ಸಿಗಲಿದೆ ಎಂದು ಬಿಜೆಪಿ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್‌ ಹೇಳುತ್ತಿದ್ದಾರೆ. ಒಂದು ವೇಳೆ ಮೈತ್ರಿ ಟಿಕೆಟ್‌ ಸಿಗದಿದ್ದರೆ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸುಳಿವು ನೀಡಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಟಿಕೆಟ್‌ ಯಾರಿಗೆ ಸಿಗಲಿದೆ ಎಂಬುವುದು ಕುತೂಹಲ ಮೂಡಿಸಿದೆ.

ನ.13ಕ್ಕೆ ಉಪ ಚುನಾವಣೆ

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ (Karnataka by election) ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗೆ ಮುಹೂರ್ತ ಫಿಕ್ಸ್‌ ಮಾಡಿತ್ತು. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಲ್ಲಿ ನ.13 ರಂದು ಉಪ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ರಾಜೀವ್‌ ಕುಮಾರ್‌ ಹೇಳಿದ್ದರು.

ಈ ಸುದ್ದಿಯನ್ನೂ ಓದಿ | Karnataka by election: ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮುಹೂರ್ತ ಫಿಕ್ಸ್‌; ನ.13ಕ್ಕೆ ಮತದಾನ, ನ.23ಕ್ಕೆ ಫಲಿತಾಂಶ

ಚುನಾವಣಾ ಆಯೋಗವು ಅ.18ರಂದು ಚುನಾವಣೆ ಅಧಿಸೂಚನೆ ಹೊರಡಿಸಿದೆ. ಅ.25 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಅ.28ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಅ.30 ಕಡೆಯ ದಿನವಾಗಿದೆ. ಕರ್ನಾಟಕ ಮೂರು ಕ್ಷೇತ್ರಗಳಾದ ಶಿಗ್ಗಾಂವಿ, ಚನ್ನಪಟ್ಟಣ ಮತ್ತು ಸಂಡೂರು ಕ್ಷೇತ್ರಗಳಿಗೆ ನವೆಂಬರ್‌ 13ರಂದು ಮತದಾನ ನಡೆಯಲಿದ್ದು, ನವೆಂಬರ್‌ 23ರಂದು ಫಲಿತಾಂಶ ಪ್ರಕಟವಾಗಲಿದೆ.