Thursday, 14th November 2024

Karnataka Bypoll: ರಾಜ್ಯದ ಮೂರು ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.61.81 ಮತದಾನ

Karnataka Bypoll

ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ (Karnataka Bypoll) ಹಿನ್ನೆಲೆಯಲ್ಲಿ ಬುಧವಾರ ಬಿರುಸಿನ ಮತದಾನ ನಡೆಯುತ್ತಿದ್ದು, ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ. 61.81ರಷ್ಟು ಮತದಾನ ನಡೆದಿದ್ದು, ಚನ್ನಪಟ್ಟಣ ಕ್ಷೇತ್ರದಲ್ಲಿ ಹೆಚ್ಚಿನ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಂಡು ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಮಧ್ಯಾಹ್ನ 3.ಗಂಟೆಯವರೆಗಿನ ಮತದಾನದ ಶೇಕಡವಾರು ವಿವರ:

ಚನ್ನಪಟ್ಟಣ : 67.63
ಶಿಗ್ಗಾವಿ : 59.62
ಸಂಡೂರು : 58.27
ಒಟ್ಟು: 61.81

ಚನ್ನಪಟ್ಟಣ ಉಪ ಚುನಾವಣೆ

ಮೂರು ಉಪಚುನಾವಣೆಗಳಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ ಬಿರುಸಿನ ಮತದಾನ ಆರಂಭವಾಗಿದ್ದು, ಚಕ್ಕೆರೆ ಗ್ರಾಮದಲ್ಲಿ ಸಿ.ಪಿ.ಯೋಗೇಶ್ವರ್ ತಮ್ಮ ಸಿ.ಪಿ.ರಾಜೇಶ್ ಅವರು 168 ನೇ ಮತಗಟ್ಟೆಯಲ್ಲಿ ರಾಜೇಶ್ ಮತದಾನ ಮಾಡಿದರು.

ಮತದಾನದ ಬಳಿಕ ಮಾತನಾಡಿದ ಅವರು, ದೇಶದ ಸಂವಿಧಾನ ಉಳಿಸಲು ಪ್ರತಿಯೊಬ್ಬರು ಮತದಾನ ಮಾಡಬೇಕು. ಎಲ್ಲರೂ ಸಹ ತಮ್ಮ ಹಕ್ಕನ್ನ ಚಲಾಯಿಸಬೇಕು, ನಮ್ಮ ಸಹೋದರನ ಅಭಿವೃದ್ಧಿಗೆ ಜನರು ಆಶೀರ್ವಾದ ಮಾಡ್ತಾರೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಶಿಗ್ಗಾಂವಿ

ಶಿಗ್ಗಾಂವಿ ಕ್ಷೇತ್ರದಲ್ಲೂ ಬೆಳಿಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಬಿರುಸಿನಿಂದಲೇ ಆರಂಭವಾಗಿದೆ. ಮತಗಟ್ಟೆ ಕೇಂದ್ರಗಳತ್ತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಿಗ್ಗೆಯಿಂದಲೇ ಮತದಾರಲ್ಲಿ ಉತ್ಸಾಹ ಮನೆಮಾಡಿದೆ.

ಹುಬ್ಬಳ್ಳಿಯ ಅಶೋಕ ನಗರದ ಮಾರುತಿ ದೇವಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಭರತ್, ದೇವಸ್ಥಾನದಲ್ಲಿ ಐದು ಸುತ್ತು ಪ್ರದಕ್ಷಿಣೆ ಸುತ್ತಿ ದೇವರ ಆಶೀರ್ವಾದ ಪಡೆದರು.

ಆನಂತರ ಶಿಗ್ಗಾಂವ ಕಡೆ ಮುಖ ಮಾಡಿದ ಮುಖಂಡರು, ಮಾರ್ಗ ಮಧ್ಯೆ ತಡಸದ ಗಾಯತ್ರಿ ತಪೋವನಕ್ಕೆ ಭೇಟಿ ನೀಡಿ, ಶಿಗ್ಗಾಂವದಲ್ಲಿ ಬಸವರಾಜ ಬೊಮ್ಮಾಯಿ ಮತ್ತು ಭರತ್ ಬೊಮ್ಮಾಯಿ ಮತ ಚಲಾಯಿಸಲಿದ್ದಾರೆ.

ಈ ಸುದ್ದಿಯನ್ನೂ ಓದಿ : Maharashtra Election: ಉದ್ಧವ್‌ ಠಾಕ್ರೆ ಬ್ಯಾಗ್‌ ಚೆಕ್‌ ಬೆನ್ನಲ್ಲೇ ಕೇಂದ್ರ ಸಚಿವ ಗಡ್ಕರಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತಪಾಸಣೆ – ವಿಡಿಯೋ ವೈರಲ್‌

ಸಂಡೂರು

ಸಂಡೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಸಂಡೂರಿನ ಮತಗಟ್ಟೆ ಸಂಖ್ಯೆ 67 ರಲ್ಲಿ ಮತದಾನ ಮಾಡಿದರು. ಸಂಸದ ಈ ತುಕಾರಾಂ ಪುತ್ರಿ ಚೈತನ್ಯ, ಪುತ್ರ ರಘುನಂದನ ಕೂಡ ಮತದಾನ ಮಾಡಿದರು.