Saturday, 23rd November 2024

Karnataka bypoll results: ಇಂದು ರಾಜ್ಯದ 3 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ; ಸೋಲು ಗೆಲುವಿನ ಲೆಕ್ಕಾಚಾರ ಹೇಗಿದೆ?

ಬೆಂಗಳೂರು: ರಾಜ್ಯದ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ (Karnataka bypoll results) ಇಂದು (ನ.23ರಂದು) ಹೊರಬೀಳಲಿದ್ದು, ಯಾರಿಗೆ ಗೆಲುವು, ಯಾರಿಗೆ ಸೋಲಾಗಲಿದೆ ಎಂಬ ಕುತೂಹಲ ತೀವ್ರಗೊಂಡಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಚನ್ನಪಟ್ಟಣ ಕ್ಷೇತ್ರದ ಮತ ಎಣಿಕೆ ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಇನ್ನು ಸಂಡೂರು ಕ್ಷೇತ್ರದ ಮತ ಎಣಿಕೆಯು ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ. ಅದೇ ರೀತಿ ಶಿಗ್ಗಾಂವಿ ಕ್ಷೇತ್ರದ ಮತ ಎಣಿಕೆ ಹಾವೇರಿ ಜಿಲ್ಲೆಯ ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆಯಲಿದೆ.

ಮತ ಎಣಿಕೆಗೆ ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಚುನಾವಣಾ ಆಯೋಗ ಮಾಡಿಕೊಂಡಿದ್ದು, ಇವಿಎಂಗಳಲ್ಲಿ ಚಲಾವಣೆಯಾದ ಮತಗಳ ಎಣಿಕೆಗೆ ಮುನ್ನಾ ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಲಿದೆ.

ಸೋಲು-ಗೆಲುವಿನ ಲೆಕ್ಕಾಚಾರ ಹೇಗಿದೆ?
ಮತದಾನೋತ್ತರ ಸಮೀಕ್ಷೆಗಳಲ್ಲಿ ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿ ಕೂಟ ಹಾಗೂ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿಯಲಾಗಿತ್ತು. ಸಮೀಕ್ಷೆಗಳು ಏನೇ ಹೇಳಿದ್ದರೂ ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಗೆಲುವಿನ ಉತ್ಸಾಹದಲ್ಲಿದ್ದಾರೆ.

ಮೂರು ಕ್ಷೇತ್ರಗಳ ಪೈಕಿ ಹೈ ವೋಲ್ಟೇಜ್‌ ಕ್ಷೇತ್ರವಾಗಿರುವ ಚನ್ನಪಟ್ಟಣ ತೀವ್ರ ಕುತೂಹಲ ಕೆರಳಿಸಿದೆ. ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಮತ್ತು ಮಾಜಿ ಪ್ರಧಾನಿ ಎಚ್.ಡಿ‌. ದೇವೇಗೌಡರ ಮೊಮ್ಮಗ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ನಡುವಿನ ಚುನಾವಣೆ, ಎರಡೂ ಪಕ್ಷಗಳಿಗೂ ಪ್ರತಿಷ್ಠೆಯಾಗಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಆಡಿದ ಮಾತುಗಳು ಫಲಿತಾಂಶದ ಮೇಲೆ ಪರಿಣಾಮ ಬೀರಿದೆಯೋ, ಇಲ್ಲವೋ ಎಂಬುವುದು ಫಲಿತಾಂಶದ ನಂತರ ತಿಳಿಯಲಿದೆ.

ಇನ್ನು ಶಿಗ್ಗಾಂವಿಯಲ್ಲಿ ಬದಲಾಗಿದೆ ಸಂಪೂರ್ಣ ಸನ್ನಿವೇಶ: ಇನ್ನೂ ಶಿಗ್ಗಾಂವಿಯಲ್ಲಿ ಚುನಾವಣಾ ಸನ್ನಿವೇಶ ಸಂಪೂರ್ಣ ಬದಲಾಗಿದೆ. ಆರಂಭದಲ್ಲಿ ಭರತ್ ಪರವಾಗಿ ಏಕಪಕ್ಷೀಯವಾಗಿ ಕಾಣುತ್ತಿದ್ದ ಸ್ಪರ್ಧೆ ಕ್ರಮೇಣ ಟ್ವಿಸ್ಟ್ ಪಡೆಯಿತು. ಈ ಹಿಂದೆ ಕಾಂಗ್ರೆಸ್‌ನ ಮತ್ತೋರ್ವ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್​ ಖಾದ್ರಿ ಅವರಿಗೆ ಟಿಕೆಟ್‌ ನೀಡದಿದ್ದಕ್ಕೆ ಬೇಸರಗೊಂಡಿದ್ದರು. ಆದರೆ ನಂತರ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ನಡೆದಿದ್ದರಿಂದ ಪರಿಸ್ಥಿತಿ ಕಾಂಗ್ರೆಸ್‌ ಪರವಾಗಿ ತಿರುಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿ ಅವರಿಂದ ತೆರವಾಗಿದ್ದ ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಹಿಡಿತ ಸಾಧಿಸಿದೆ ಎಂದು ಹೇಳಲಾಗಿದೆ. ಬೊಮ್ಮಾಯಿ ಅವರ ಪುತ್ರ ಭರತ್​ ಬೊಮ್ಮಾಯಿ ಕಣದಲ್ಲಿದ್ದರೆ, ಕಾಂಗ್ರೆಸ್​ನಿಂದ ಯಾಸಿರ್​ ಅಹ್ಮದ್​ ಖಾನ್​ ಪಠಾಣ್​​ ಸ್ಪರ್ಧೆ ಒಡ್ಡಿದ್ದಾರೆ.

ಈ ಸುದ್ದಿಯನ್ನೂ ಓದಿ | Karnataka: ಚನ್ನಪಟ್ಟಣ, ಶಿಗ್ಗಾವಿ, ಸಂಡೂರಿನಲ್ಲಿ ಗೆಲುವು ಯಾರಿಗೆ? ಸಮೀಕ್ಷೆ ಏನು ಹೇಳುತ್ತೆ?

ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕರು ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಸಂಸದ ಇ.ತುಕಾರಾಂ ಅವರ ಪತ್ನಿ ಅನ್ನಪೂರ್ಣ ತುಕಾರಾಂ ಅವರಿಗೆ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರು ಸವಾಲು ಒಡ್ಡಿದ್ದಾರೆ. ಜಿದ್ದಾಜಿದ್ದಿನಲ್ಲಿ ಯಾರು ಜಯ ಸಾಧಿಸಲಿದ್ದಾರೆ ಎಂಬುದು ಇಂದು ತಿಳಿಯಲಿದೆ.