Friday, 22nd November 2024

ಮೀಸಲು ವಿಚಾರದಲ್ಲಿ ಮಂತ್ರಿಗಳ ಜಟಾಪಟಿ

ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸಲು ಸವದಿ, ಶೆಟ್ಟರ್ ವಿರೋಧ

ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಸಚಿವರಿಂದ ಸಲಹೆ ಪಡೆಯಲು
ಮುಂದಾಗಿದ್ದು, ಕಿತ್ತಾಟದಲ್ಲಿ ಅಂತ್ಯವಾಗಿದೆ.

ಸಚಿವ ಸಂಪುಟ ಸಭೆಯಲ್ಲಿ ಮೀಸಲು ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ವಾಲ್ಮೀಕಿ ಸಮುದಾಯಕ್ಕೆ ಮೀಸಲು ಮೊದಲು ನೀಡುವಂತೆ ಆಗ್ರಹಿಸಿದರು. ಬಳಿಕ ಕುರುಬ ಸಮುದಾಯಕ್ಕೆ ನೀಡಬೇಕೆಂದು ಕೆ.ಎಸ್.ಈಶ್ವರಪ್ಪ ಅವರು ಕೇಳಿದರು. ಇದರ ಬೆನ್ನಲ್ಲೇ ಅಶೋಕ್ ಅವರು ಒಕ್ಕಲಿಗರಿಗೆ ಮೀಸಲು ಎಂದರೆ, ಬಳಿಕ ಮುರುಗೇಶ್ ನಿರಾಣಿ ಅವರು ಪಂಚಮಸಾಲಿಗೆ 2ಎ ಮೀಸಲು ನೀಡಬೇಕೆಂದು ಆಗ್ರಹಿಸಿದ್ದಾರೆ.

ಆದರೆ ಪಂಚಮಸಾಲಿಗೆ ಮೀಸಲು ಎನ್ನುವ ವಿಷಯ ಪ್ರಸ್ತಾಪವಾಗುತ್ತಿದ್ದಂತೆ, ಲಕ್ಷ್ಮಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಅವರು ಪಂಚಮಸಾಲಿಗೆ ಮೀಸಲು ನೀಡಬಾರದು. ಈಗಿರುವ ಯಥಾಸ್ಥಿತಿಯನ್ನೇ ಕಾಪಾಡಬೇಕು ಎನ್ನುವ ವಿಷಯವನ್ನು ಮಂಡಿ ಸಿದ್ದಾರೆ ಎಂದು ತಿಳಿದುಬಂದಿದೆ.

ಸವದಿ ಹಾಗೂ ಶೆಟ್ಟರ್ ಅವರ ಈ ಮಾತಿಗೆ ಮುರುಗೇಶ್ ನಿರಾಣಿ ಹಾಗೂ ಸಿ.ಸಿ.ಪಾಟೀಲ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಣಜಿಗದವರಿಗೆ ಇರುವ ಸವಲತ್ತು ಪಂಚಮಸಾಲಿಗರಿಗೆ ನೀಡಲು ಏನು ಸಮಸ್ಯೆ ಎಂದು ಪ್ರಶ್ನಿಸಿದ್ದಾರೆ. ಈ ಮಾತು, ನಾಲ್ವರು ಸಚಿವರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಪರಿಸ್ಥಿತಿ ಕೈಮೀರುತ್ತಿದೆ ಎನ್ನುತ್ತಿದ್ದಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಅವರು ಮಧ್ಯ ಪ್ರವೇಶಿಸಿ ಎಲ್ಲರನ್ನು ಸಮಾಧಾನಪಡಿಸಿದ್ದಾರೆ. ಬಳಿಕ ಮುಖ್ಯಮಂತ್ರಿಗಳು ಎಲ್ಲರಿಗೂ ಸೂಕ್ತ ಮೀಸಲಿನ ಭರವಸೆ ನೀಡಿ, ವಿಷಯ ಬೇರೆಡೆಗೆ ಸೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಸರಕಾರದ ವಿರುದ್ಧ ಮುಗಿಬೀಳಲು ನಿರ್ಧಾರ: ವಾಲ್ಮೀಕಿ ಸಮುದಾಯದ ಮೀಸಲನ್ನು ಶೇ.7.5ಕ್ಕೆ ಹೆಚ್ಚಿಸಬೇಕು ಎನ್ನುವ ಬೇಡಿಕೆಯನ್ನು ತಾತ್ವಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವ ನಿರ್ಧಾರಕ್ಕೆ ಸಮುದಾಯದ ಜನ ಪ್ರತಿನಿಧಿಗಳು ಬಂದಿದ್ದು, ಈ ಹಿಂದೆ ನೀಡಿದ್ದ ಭರವಸೆಯಂತೆ ಮೀಸಲು ನೀಡಬೇಕು. ಇಲ್ಲದಿದ್ದರೆ ಸರಕಾರದ ವಿರುದ್ಧ ಮುಗಿಬೀಳಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಡಿಸಿಎಂರಿಂದ ಮನವಿ ಪತ್ರ ಸ್ವೀಕಾರ
ಈಗಾಗಲೇ ಪಂಚಮಸಾಲಿ ಹೋರಾಟದಲ್ಲಿ ಬಹಿರಂಗವಾಗಿ ಮುರುಗೇಶ್ ನಿರಾಣಿ ಹಾಗೂ ಸಿ.ಸಿ. ಪಾಟೀಲ್ ಕಾಣಿಸಿಕೊಂಡಿ ರುವುದು ಸರಕಾರಕ್ಕೆ ಇರಸುಮುರಸು ಉಂಟು ಮಾಡಿದೆ. ಆದ್ದರಿಂದ ಮುಂಬರುವ ಸಮಾವೇಶದಲ್ಲಿ ಭಾಗಿಯಾಗದಂತೆ ಯಡಿಯೂರಪ್ಪ ಅವರು ಈ ಇಬ್ಬರಿಗೆ ಸೂಚನೆ ನೀಡಿದ್ದಾರೆ. ಆದರೆ ಇದು ಸಾಧ್ಯವಿಲ್ಲ ಎನ್ನುವ ಮಾತುಗಳು ಕೇಳಿಬಂದಿದ್ದರಿಂದ ಅಂತಿಮವಾಗಿ ಹೋಗಲು ಅವಕಾಶ ನೀಡಿದ್ದಾರೆ. ಇದರೊಂದಿಗೆ ಪಂಚಮಸಾಲಿ ಸಮುದಾಯದ ಮನವಿ ಪತ್ರ ಸ್ವೀಕರಿಸಲು
ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರನ್ನು ಕಳುಹಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಸ್ವಾಮೀಜಿಗಳ ಮಾತಿಗೆ ಬದ್ಧ

ಕುಮಾರಕೃಪಾ ಗೆಸ್‌ಟ್‌‌ಹೌಸ್‌ನಲ್ಲಿ ನಡೆದ ಸಭೆಯಲ್ಲಿ, ಮುಂದಿನ ಹೋರಾಟದ ಬಗ್ಗೆ ಚರ್ಚಿಸ ಲಾಯಿತು. ಈ ವೇಳೆ ಈಗಾಗಲೇ ಪ್ರಸನ್ನಾನಂದ ಸ್ವಾಮೀಜಿಗಳು ಮೀಸಲು ಜಾರಿಗೆ ಡೆಡ್‌ಲೈನ್ ನೀಡಿದ್ದಾರೆ. ಅವರು ನೀಡಿರುವ ಅವಧಿ ಪೂರ್ಣಗೊಳ್ಳುವ ತನಕ ಕಾದು ನೋಡಿ, ಬಳಿಕ ರಾಜೀನಾಮೆ ಅಸ್ತ್ರ ಪ್ರಯೋಗಿಸಲು ಸೂಚನೆ ನೀಡಿದ್ದಾರೆ. ಸ್ವಾಮೀಜಿಗಳ ಈ ಮಾತನ್ನು ಎಲ್ಲರೂ ಪಾಲಿಸಬೇಕು. ಒಂದು ವೇಳೆ ಇದರಿಂದ ಸಚಿವ ಸ್ಥಾನ ಹೋದರೂ ಅದಕ್ಕೆ ಸಜ್ಜಾಗಿರುವ ನಿರ್ಧಾರಕ್ಕೆ ಜನಪ್ರತಿನಿಧಿಗಳು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೋಟ್ಸ್

ಕಾನೂನಿನ ಚೌಕಟ್ಟಿನಲ್ಲಿ ಸಂವಿಧಾನದ ಅನುಗುಣವಾಗಿ ಪ್ರತಿಯೊಂದು ಸಮುದಾಯಕ್ಕೂ ನ್ಯಾಯ ಒದಗಿಸುತ್ತೇನೆ. ವಾಲ್ಮೀಕಿ
ಸಮುದಾಯದವರೇ ಇರಲಿ, ಕುರುಬ ಸಮುದಾಯದವರೇ ಇರಲಿ ಅಥವಾ ಇನ್ಯಾವುದೇ ಸಮುದಾಯದವರೇ ಇರಲಿ. ಅವರಿಗೆ
ಸಂವಿಧಾನಬದ್ಧವಾಗಿ ನ್ಯಾಯ ಒದಗಿಸಿಕೊಡುವುದು ನನ್ನ ಜವಾಬ್ದಾರಿ. ಅದನ್ನು ಮಾಡುತ್ತೇನೆ.

– ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

ವಾಲ್ಮೀಕಿ ಸಮುದಾಯವು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ. ಹೀಗಾಗಿ ಮೀಸಲಾತಿ ಹೆಚ್ಚಳ
ಮಾಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಇದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಆಶಾದಾಯಕ ಬೆಳವಣಿಗೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಕಾನೂನು ತಜ್ಞರ ಜತೆ ಚರ್ಚಿಸುವ ಭರವಸೆ ಕೊಟ್ಟಿದ್ದಾರೆ.
– ರಾಜುಗೌಡ ನಾಯಕ್ ಶಾಸಕ