Thursday, 21st November 2024

Karnataka Cabinet: ಕಸ್ತೂರಿ ರಂಗನ್ ವರದಿ ತಿರಸ್ಕಾರಕ್ಕೆ ಸಚಿವ ಸಂಪುಟ ಸಭೆ ನಿರ್ಣಯ

Cabinet Meeting

ಬೆಂಗಳೂರು: ಪಶ್ಚಿಮಘಟ್ಟಗಳ (Western Ghats) ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಡಾ. ಕಸ್ತೂರಿ ರಂಗನ್ ವರದಿ (Ksturirangan Report) ಜಾರಿಯನ್ನು ರಾಜ್ಯ ಸಚಿವ ಸಂಪುಟ (Karnataka cabinet) ಸಂಪೂರ್ಣವಾಗಿ ತಿರಸ್ಕರಿಸಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಲಾಗಿದೆ.

ಕೇಂದ್ರ ಸರ್ಕಾರವು ಪಶ್ಚಿಮಘಟ್ಟಗಳ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು 2024ರ ಜು.31ರಂದು 6ನೇ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳು ಮತ್ತು ಸಲಹೆಗಳು ಇದ್ದಲ್ಲಿ 60 ದಿನಗಳೊಳಗೆ ಸಲ್ಲಿಸಲು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಸಂಪುಟ ಸಭೆ ಈ ತೀರ್ಮಾನ ಕೈಗೊಂಡಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ಡಾ. ಕೆ. ಕಸ್ತೂರಿ ರಂಗನ್ ವರದಿಯನ್ವಯ ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ 20,668 ಚ.ಕಿ.ಮೀ ಪ್ರದೇಶವನ್ನು ಗುರುತಿಸಿದ್ದು, ವಾಸ್ತವ ಲೋಪಗಳ ತಿದ್ದುಪಡಿ ಮಾಡಿದಾಗ ಪರಿಸರ ಸೂಕ್ಷ್ಮ ಪ್ರದೇಶವು 19,252.70 ಚ.ಕೀ.ಮೀ ಆಗುತ್ತದೆ. ವಿವಿಧ ಕಾನೂನುಗಳ ಅಡಿಯಲ್ಲಿ ಸಂರಕ್ಷಿತ ಪ್ರದೇಶ, ಅಧಿಸೂಚಿತ ಅರಣ್ಯ ಅಥವಾ ಪರಿಸರ, ಸೂಕ್ಷ್ಮ ವಲಯವಾಗಿ ಅಧಿಸೂಚಿಸಿ 16,036.72 ಚ.ಕಿಮೀ ಪ್ರದೇಶವನ್ನು ಸಂರಕ್ಷಿಸಲಾಗುತ್ತಿದೆ. ಉನ್ನತ ಮಟ್ಟದ ಕಾರ್ಯನಿರತ ತಂಡವು ಕೇವಲ ದೂರಸಂವೇದಿ ದತ್ತಾಂಶದ ಆಧಾರದ ಮೇಲೆ ಪಶ್ಚಿಮ ಘಟ್ಟಗಳ ಪ್ರದೇಶವನ್ನು ನಿಗದಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದರು.

ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ ಹೊರಡಿಸಿದ ಕರಡು ಅಧಿಸೂಚನೆಯನ್ನು ತಿರಸ್ಕರಿಸುವ ತೀರ್ವನವನ್ನು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿದ್ದು ಅದಕ್ಕಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇವೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಪದೇಪದೆ ಕರಡು ಅಧಿಸೂಚನೆ ಹೊರಡಿಸುತ್ತಿರುವುದು ಮಲೆನಾಡು, ಕರಾವಳಿ ಜನರ ನಿದ್ದೆಗೇಡಿಸಿದೆ. ಕಳೆದ ಬಾರಿ ಕೇಂದ್ರ ಪರಿಸರ ಇಲಾಖೆ ಕರೆದ ಸಭೆಗೆ ಈ ಭಾಗದ ಯಾವ ಸಂಸದರು ಭಾಗವಹಿಸದೆ ಇರುವುದು ವಿಪರ್ಯಾಸ. ಮಲೆನಾಡು, ಕರಾವಳಿ ಭಾಗಗಳಲ್ಲಿ ತಂತಮ್ಮ ಲೋಕಸಭಾ ಕ್ಷೇತ್ರದ ಕಾಳಜಿ ಇಲ್ಲದ ಸಂಸದರನ್ನು ಹಲವು ವರ್ಷಗಳಿಂದ ಆಯ್ಕೆ ಮಾಡುತ್ತಿರುವ ಪರಿಣಾಮ ನಮ್ಮನ್ನೆಲ್ಲ ಸಂಕಷ್ಟಕ್ಕೆ ದೂಡುತ್ತಿದ್ದಾರೆ.

ಬೆಣ್ಣೆಹಳ್ಳ ನೀರಿನ ಸದ್ಬಳಕೆಗೆ -200 ಕೋಟಿ ರೂ. ವೆಚ್ಚ: ರಾಜ್ಯ ವಿಪತ್ತು ಉಪಶಮನ ನಿಧಿ ಅಡಿಯಲ್ಲಿ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ/ ಶಾಶ್ವತ ಪರಿಹಾರ ಹಾಗೂ ಪೋಲಾಗಿ ಹರಿದು ಹೋಗುವ ನೀರಿನ ಸದ್ಬಳಕೆ ಯೋಜನೆಯ 200 ಕೋಟಿ ರೂ. ಅಂದಾಜು ಮೊತ್ತದ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದು ಹಳ್ಳ ಎಂದರೂ ಸಹಿತ 16 ಟಿಎಂಸಿ ನೀರಿದೆ. ಕಪ್ಪು ಮಣ್ಣಿನ ಸಮತಟ್ಟಾದ ಭೂಮಿಯಲ್ಲಿ ನೀರು ಹರಿದು ಹೋಗುತ್ತದೆ. ಈ ನೀರು ನಿಲುಗಡೆ ಮಾಡಲು ಹೋದರೆ 2 ಲಕ್ಷ ಎಕರೆ ಬೆಳೆ ಹಾನಿಗೀಡಾಗುತ್ತದೆ. ಶಿಗ್ಗಾಂವಿ, ಕುಂದಗೋಳ, ನವಲಗುಂದ, ಹುಬ್ಬಳ್ಳಿ, ನಗರಗುಂದ ತಾಲೂಕು ವ್ಯಾಪ್ತಿಯಲ್ಲಿ ಈ ಹಳ್ಳ ಹರಿಯುತ್ತಿದೆ. ಈ ನೀರಿನ ಸದ್ಬಳಕೆಗೆ ಯೋಜನೆ ರೂಪಿಸಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

ಇದನ್ನೂ ಓದಿ: DK Shivakumar: ಸಿಎಂ ಬೆನ್ನಿಗೆ ಪಕ್ಷ ನಿಂತಿದೆ, ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ: ಡಿಕೆಶಿ