Thursday, 21st November 2024

Waqf Board: ವಕ್ಫ್‌ ಮಂಡಳಿಯಿಂದ ವಿವಾಹ ನೋಂದಣಿ ಪ್ರಮಾಣಪತ್ರ ನೀಡುವಿಕೆಗೆ ಹೈಕೋರ್ಟ್‌ ತಡೆಯಾಜ್ಞೆ

Marakumbi case

ಬೆಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ (Waqf Board) ಮುಸ್ಲಿಮರ ವಿವಾಹ ನೋಂದಣಿ (Marriage Registration) ಪ್ರಮಾಣಪತ್ರ ವಿತರಣೆಗೆ ಅವಕಾಶ ಮಾಡಿಕೊಟ್ಟು ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ (Karnataka high court) ತಡೆಯಾಜ್ಞೆ ನೀಡಿದೆ.

ಬೆಂಗಳೂರಿನ ಆಲಂ ಪಾಷಾ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾ.ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ತಡೆ ನೀಡಿ ಆದೇಶಿಸಿತು. ಮುಸ್ಲಿಮರ ವಿವಾಹ ನೋಂದಣಿ ಪ್ರಮಾಣಪತ್ರ ವಿತರಣೆ ಅಧಿಕಾರವನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ನೀಡಿ ರಾಜ್ಯ ಸರ್ಕಾರ ಅಲ್ಪಸಂಖ್ಯಾತ, ವಕ್ಫ್ ಮತ್ತು ಹಜ್ ಇಲಾಖೆ 2023ರ ಸೆಪ್ಟೆಂಬರ್ 30ರಂದು ಹೊರಡಿಸಿದ್ದ ಅದೇಶಕ್ಕೆ ಜ.7ರವರೆಗೆ ತಡೆ ನೀಡಲಾಗುವುದು ಎಂದು ಮಧ್ಯಂತರ ಆದೇಶ ಹೊರಡಿಸಿತು.

ನ್ಯಾಯಾಲಯದ ಮುಂದಿನ ಆದೇಶದವರೆಗೆ ಸರ್ಕಾರ ತನ್ನ ಆದೇಶ ಅಮಾನತ್ತಿನಲ್ಲಿಡಬೇಕು. ವಕ್ಫ್ ಮಂಡಳಿ ಯಾವುದೇ ವಿವಾಹ ನೋಂದಣಿ ಪ್ರಮಾಣಪತ್ರಗಳನ್ನು ವಿತರಿಸಬಾರದು. ಯಾವುದೇ ಅಧಿಕಾರ ಇಲ್ಲದೆ ವಕ್ಫ್ ಮಂಡಳಿ ಆ ರೀತಿ ಮದುವೆ ಪ್ರಮಾಣಪತ್ರ ವಿತರಣೆ ಮಾಡುವುದನ್ನು ಒಪ್ಪಲಾಗದು ಎಂದು ಹೇಳಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು 2025ರ ಜ.7ಕ್ಕೆ ನಿಗದಿಪಡಿಸಿದೆ.

ಕಳೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ”ರಾಜ್ಯ ಸರ್ಕಾರದ ಅಲ್ಪಸಂಖ್ಯಾತ, ವಕ್ಫ್ ಮತ್ತು ಹಜ್ ಇಲಾಖೆ 2023ರ ಸೆಪ್ಟೆಂಬರ್​ 30ರಂದು ಆದೇಶ ಹೊರಡಿಸಿದ್ದು, ಅದರಂತೆ ಮುಸ್ಲಿಂ ಸಮುದಾಯದವರ ವಿವಾಹ ನೋಂದಣಿ ಪ್ರಮಾಣಪತ್ರಗಳನ್ನು ವಿತರಿಸುವ ಅಧಿಕಾರವನ್ನು ವಕ್ಫ್ ಮಂಡಳಿಗೆ ನೀಡಲಾಗಿದೆ. ಇದು ವಕ್ಫ್ ಕಾಯಿದೆ-1995ರ ನಿಯಮಗಳಿಗೆ ವಿರುದ್ಧವಾಗಿದೆ. ಹಾಗಾಗಿ, ಸರ್ಕಾರದ ಆದೇಶ ರದ್ದುಗೊಳಿಸಿ ಮೊದಲಿದ್ದ ವ್ಯವಸ್ಥೆಯನ್ನೇ ಮುಂದುವರೆಸಲು ನಿರ್ದೇಶನ ನೀಡಬೇಕು” ಎಂದು ಕೋರಿದರು.