Thursday, 21st November 2024

Karnataka Rain: ಅ.24ರವರೆಗೆ ರಾಜ್ಯದಲ್ಲಿ ಮುಂದುವರಿಯುತ್ತೆ ಮಳೆ ಅಬ್ಬರ; ತುಂಗಭದ್ರಾ ನದಿ ಪಾತ್ರದಲ್ಲಿ ಪ್ರವಾಹ ಎಚ್ಚರಿಕೆ!

Karnataka Rain

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು, ಮೈಸೂರು, ಹಾಸನ ಸೇರಿ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಕ್ಟೋಬರ್ 24 ರವರೆಗೆ ಗುಡುಗು-ಮಿಂಚು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Karnataka Rain) ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್‌ ಘೋಷಿಸಿದೆ.

ರಾಜ್ಯದ ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ ಅಕ್ಟೋಬರ್ 23 ರವರೆಗೆ ಗುಡುಗು-ಮಿಂಚು ಮತ್ತು ಜೋರಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ, ಇನ್ನುಳಿದ ದಿನಗಳಲ್ಲಿ ಮಳೆ ಕಡಿಮೆ ಇರುವ ಸಾಧ್ಯತೆಯಿದೆ.

ಟಿಬಿ ಡ್ಯಾಂ ಜಲಾನಯನ ಪ್ರದೇಶದಲ್ಲಿ ಪ್ರವಾಹ ಎಚ್ಚರಿಕೆ

ಭದ್ರಾ ಮತ್ತು ವರದಾ ನದಿಗಳ ಹೊರಹರಿವು ಮತ್ತು ಟಿಬಿ ಡ್ಯಾಂ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ, ತುಂಗಭದ್ರಾ ಅಣೆಕಟ್ಟಿಗೆ ಒಳಹರಿವು ಹೆಚ್ಚುತ್ತಿದೆ. ಆದ್ದರಿಂದ ನದಿಗೆ ನೀರಿನ ಬಿಡುಗಡೆಯನ್ನು 90,000 ರಿಂದ 1,20,000 ಕ್ಯೂಸೆಕ್‌ಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ತುಂಗಭದ್ರಾ ಅಣೆಕಟ್ಟೆಯ ಕೆಳಬಾಗದಲ್ಲಿ ನದಿ ಪಾತ್ರದ ಜನರು ಜಾಗ್ರತೆ ವಹಿಸಲು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ನಾಳೆ ಉತ್ತರ ಕನ್ನಡ, ಉಡುಪಿ, ಧಾರವಾಡ ಸೇರಿ ವಿವಿಧೆಡೆ ಧಾರಾಕಾರ ಮಳೆ

ಅ.23ರಂದು ಉತ್ತರ ಕನ್ನಡ, ಉಡುಪಿ, ಧಾರವಾಡ, ಬೆಳಗಾವಿ, ಹಾವೇರಿ, ಮಂಡ್ಯ, ಮೈಸೂರು, ಹಾಸನ, ಕೊಡಗು, ರಾಮನಗರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ಕನ್ನಡ ಜಿಲ್ಲೆಯ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಅದೇ ರೀತಿ ಅ.24ರಂದು ಕರಾವಳಿಯ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಹಾಗೂದಕ್ಷಿಣ ಒಳನಾಡಿನ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇದೇ ರೀತಿಯ ಹವಾಮಾನ ಅ.27ರವರೆಗೆ ಮುಂದುವರಿಯಲಿದೆ.

ಅ.24ರ ಬೆಳಗ್ಗೆವರೆಗಿನ ಬೆಂಗಳೂರು, ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:
ಮುಂದಿನ 24 ಗಂಟೆಗಳು ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ. ಸಾಧಾರಣ ಮಳೆ ಅಥವಾ ಗುಡುಗು ಸಹಿತ ಭಾರಿ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ° C ಮತ್ತು 20 ° C ಆಗಿರಬಹುದು.

ಈ ಸುದ್ದಿಯನ್ನೂ ಓದಿ | Karnataka Rain: ಮುಂದಿನ 3 ದಿನ ಬೆಂಗಳೂರು ಸೇರಿ ಹಲವೆಡೆ ಅಬ್ಬರಿಸಲಿದೆ ಹಿಂಗಾರು ಮಳೆ; ಯೆಲ್ಲೋ ಅಲರ್ಟ್‌ ಘೋಷಣೆ

ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ. ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ° C ಮತ್ತು 20 ° C ಆಗಿರಬಹುದು.