Thursday, 21st November 2024

Karnataka Weather: ಇಂದು ಕರಾವಳಿ ಭಾಗ, ಯಾದಗಿರಿ, ರಾಯಚೂರು ಸೇರಿ ಹಲವೆಡೆ ಅಬ್ಬರಿಸಲಿದ್ದಾನೆ ವರುಣ!

Karnataka Weather

ಬೆಂಗಳೂರು: ಸೆ. 24ರಂದು ಮಂಗಳವಾರ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಧಾರವಾಡ, ಗದಗ, ಹಾವೇರಿ ಜಿಲ್ಲೆ ಸೇರಿ ವಿವಿಧೆಡೆ ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (Karnataka Weather) ಮುನ್ಸೂಚನೆ ನೀಡಿದೆ.

ಇನ್ನು ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಯ ಒಂದೆರಡು ಸ್ಥಳಗಳಲ್ಲಿ ಭಾರಿ ಮಳೆ ಸಂಭವಿಸುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನ ಉಳಿದ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಸಂಭವಿಸುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.

ಸೆ. 25ರಂದು ಕೂಡ ಉತ್ತರ ಕನ್ನಡ, ಉಡುಪಿ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಭಾರಿ ಮಳೆಯಾಗುವ (Heavy Rain) ಸಾಧ್ಯತೆಯಿದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ, ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಗುರದಿಂದ ಸಾದಾರಣ ಮಳೆಯಾಗುವ ಸಾಧ್ಯತೆ ಇದೆ.

ಅದೇ ರೀತಿ ಸೆ. 26ರಂದು ಕರಾವಳಿಯ ಹಲವು ಸ್ಥಳಗಳಲ್ಲಿ ಮತ್ತು ಒಳನಾಡಿನ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾದಾರಣ ಮಳೆ ಯಾಗುವ ಸಂಭವವಿದೆ. ಸೆ. 29ರವರೆಗೆ ಇದೇ ರೀತಿಯ ಹವಾಮಾನ ಮುಂದುವರಿಯಲಿದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:
ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶವಿರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಬಹಳ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29° C ಮತ್ತು 20° C ಆಗಿರಬಹುದು.

ಯಾದಗಿರಿಯಲ್ಲಿ ಸಿಡಿಲು ಬಡಿದು 4 ಮಂದಿ ಸಾವು

ಯಾದಗಿರಿ: ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ (Lightning strike) ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಜಿನಕೇರಾ ತಾಂಡಾದಲ್ಲಿ ಸೋಮವಾರ ನಡೆದಿದೆ. ಕಿಶನ್ ಜಾಧವ (33), ಸುನಿಬಾಯಿ ರಾಠೋಡ್ (30), ಚನ್ನಪ್ಪ ಜಾಧವ (24) ಹಾಗೂ ನೇನು ಜಾಧವ(18) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಯಾದಗಿರಿ ತಾಲೂಕಿನ ಜಿನಕೇರಾ ತಾಂಡಾದ ಜಮೀನೊಂದರಲ್ಲಿ ಈರುಳ್ಳಿ ಬೆಳೆ ನಾಟಿ ಮಾಡಲು ಮೃತರು ಸೇರಿ 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ತೆರಳಿದ್ದು, ಮಧ್ಯಾಹ್ನ ಏಕಾಏಕಿ ಮಳೆ ಸುರಿದ ಪರಿಣಾಮ ಅಲ್ಲಿಯೇ ಸಮೀಪದಲ್ಲಿದ್ದ ದುರ್ಗಮ್ಮದೇವಿ ದೇವಸ್ಥಾನದ ಶೆಡ್‌ನಲ್ಲಿ ರಕ್ಷಣೆ ಪಡೆಯುತ್ತಿದ್ದರು. ಈ ವೇಳೆ ಸಿಡಿಲು ಬಡಿದು ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಇನ್ನೊಬ್ಬರು ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಇನ್ನೂ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.