Thursday, 12th December 2024

ಕೆಎಎಸ್ ಅಧಿಕಾರಿ ಡಾ.ಬಿ.ಸುಧಾ ಅವರಿಗೆ ಎಸಿಬಿ ಶಾಕ್

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ‌ ಕೆಎಎಸ್ ಅಧಿಕಾರಿ ಡಾ.ಬಿ.ಸುಧಾ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳ ಶನಿವಾರ ಆರು ಸ್ಥಳಗಳ ಮೇಲೆ‌ ದಾಳಿ ನಡೆಸಿದೆ.

ಸುಧಾ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ‌ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಯಲ್ಲಿದ್ದರು. ಪ್ರಸ್ತುತ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಪ್ರಧಾನ‌ ಕಚೇರಿಯಲ್ಲಿ ಆಡಳಿತಾಧಿಕಾರಿ ಹುದ್ದೆಯಲ್ಲಿದ್ದಾರೆ.

ಕೊಡಿಗೆಹಳ್ಳಿಯಲ್ಲಿರುವ ಸುಧಾ ಅವರ ಮನೆ, ಯಲಹಂಕದಲ್ಲಿರುವ ಫ್ಲ್ಯಾಟ್, ಬ್ಯಾಟರಾಯನಪುರದಲ್ಲಿರುವ ಪರಿಚಿತರ ಮನೆ, ಮೈಸೂರಿನ ಶ್ರೀರಾಂಪುರದಲ್ಲಿರುವ ಪರಿಚಿತರ ಮನೆ, ಉಡುಪಿಯ ಹೆಬ್ರಿ ರಸ್ತೆಯಲ್ಲಿರುವ ತೆಂಕ‌ ಮಿಜಾರಿನಲ್ಲಿರುವ ಪರಿಚಿತರ ಮನೆ ಹಾಗೂ ಬೆಂಗಳೂರಿನ ಶಾಂತಿನಗರದಲ್ಲಿರುವ ಆರೋಪಿ ಅಧಿಕಾರಿಯ ಕಚೇರಿಯ ಮೇಲೆ‌ ಶನಿವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಎಸಿಬಿ ಬೆಂಗಳೂರು ನಗರ ಎಸ್ ಪಿ ಕುಲದೀಪ್ ಕುಮಾರ್ ಆರ್. ಜೈನ್ ದಾಳಿಯ ನೇತೃತ್ವ ವಹಿಸಿದ್ದಾರೆ. ಕೆಎಎಸ್ ಅಧಿಕಾರಿ ಸುಧಾ‌ ಅವರ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಟೊಯೋಟಾ ಫಾರ್ಚೂನರ್ ಕಾರು ಪತ್ತೆಯಾಗಿವೆ.