Sunday, 6th October 2024

Kasturirangan Report: ಒತ್ತುವರಿ ತೆರವಿಗೆ ಶೃಂಗೇರಿ ಕ್ಷೇತ್ರದ ಶಾಸಕರ ರಹಸ್ಯ ಸಹಕಾರ? ಅರಣ್ಯ ಸಚಿವರಿಂದ ಬಹಿರಂಗ!

Kasturirangan Report
-ಅರವಿಂದ ಸಿಗದಾಳ್, ಮೇಲುಕೊಪ್ಪ

ಇತ್ತೀಚೆಗೆ ಕಸ್ತೂರಿ ರಂಗನ್ ವರದಿ ಮತ್ತು ಒತ್ತುವರಿ ತೆರವು ಬಗ್ಗೆ (Kasturirangan Report) ನಡೆದ ಶಾಸಕರ, ಅಧಿಕಾರಿಗಳ ಚರ್ಚೆಯ ಸಭೆಯ ನಂತರ ಅರಣ್ಯ ಸಚಿವರು ಪತ್ರಿಕಾಗೋಷ್ಠಿ ನಡೆಸಿ ಮಾತಾಡುತ್ತ, ಶಾಸಕ ರಾಜೇಗೌಡರ ಬಗ್ಗೆ ಆಡಿದ ಮಾತು ಶೃಂಗೇರಿ ಕ್ಷೇತ್ರದಲ್ಲಿ ಭಾರಿ ಸಂಚಲನ ಉಂಟುಮಾಡುತ್ತಿದೆ.

ಅರಣ್ಯ ಸಚಿವರು ಪತ್ರಿಕಾಗೋಷ್ಠಿಯಲ್ಲಿ “ಒತ್ತುವರಿ ತೆರವಿಗೆ ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡರು ಎಲ್ಲ ಸಹಕಾರ ನೀಡಿದ್ದಾರೆ. ನಿಜವಾಗಿ ಹೇಳಬೇಕೆಂದರೆ, ರಾಜೇಗೌಡರು ಎಷ್ಟರ ಮಟ್ಟಿಗೆ ಸಹಕಾರ ಮಾಡಿದಾರೆ ಅಂತ ಹೇಳಿದರೆ… ನೂರಾರು ಎಕರೆ ಭೂಮಿಗೆ ಅವರು ಸ್ವತಃ ಖುದ್ದಾಗಿ ಎದುರು ನಿಂತು ಒತ್ತುವರಿ ತೆರವು ಮಾಡಿಸಿದ್ದಾರೆ. ಒತ್ತುವರಿ ಜಾಗದಲ್ಲಿ ಸ್ವಲ್ಪ ಅಡಿಕೆ ಬೆಳೆ ಬೆಳೆದವರಿಗೆ ಅಂಡರ್ ಟೇಕಿಂಗ್ ಕೊಡ್ಳಿಕ್ಕೆ ಹೇಳಿದಾರೆ. ಅಡಿಕೆ ತೆಕ್ಕೊಂಡಾದ ನಂತರ ಭೂಮಿ ಬಿಟ್ಕೊಡ್ತೀವಿ, ತಗೊಳಿ ಅನ್ನುವಂತಹ ರೀತಿಯಲ್ಲಿ ಬಹಳಷ್ಟು ಜನ ಹೇಳ್ತಿದಾರೆ ಎಂದು ರಾಜೇಗೌಡರು ತಿಳಿಸಿದ್ದಾರೆ” ಎಂಬ ಧಾಟಿಯಲ್ಲಿ ಸಚಿವರು ಹೇಳಿದ್ದಾರೆ.

ಶೃಂಗೇರಿ ಶಾಸಕರ ಬಗೆಗಿನ ಅರಣ್ಯ ಸಚಿವರ ಈ ಹೇಳಿಕೆ ಬಾರಿ ಚರ್ಚೆಗೆ ಗ್ರಾಸವಾಗಿದ್ದು, ರೈತರ ಆಕ್ರೋಶಕ್ಕೂ ಕಾರಣವಾಗಿದೆ. ಅರಣ್ಯ ಸಚಿವರ ಹೇಳಿಕೆಯಲ್ಲಿ ರಾಜೇಗೌಡರು ಯಾವ ಯಾವ ಒತ್ತುವರಿ ತೆರವು ಬಗ್ಗೆ ಸಹಕಾರ ನೀಡಿದ್ದಾರೆ ಎಂಬ ಮಾಹಿತಿ ತಿಳಿಸಿಲ್ಲ. ಸಣ್ಣ, ಅತಿಸಣ್ಣ ರೈತರ ಒತ್ತುವರಿ ಮತ್ತು ದೊಡ್ಡ ದೊಡ್ಡ ಒತ್ತುವರಿಗಳ ಬಗ್ಗೆ ಸ್ಪಷ್ಟತೆ ಇಲ್ಲದ ರಾಜೇಗೌಡರ ಬಗೆಗಿನ ಹೇಳಿಕೆ ರೈತರರಲ್ಲಿ ಗೊಂದಲ, ಆತಂಕ ಸೃಷ್ಟಿ ಮಾಡಿದೆ.

ಈ ಸುದ್ದಿಯನ್ನೂ ಓದಿ | Book Release: ಬೆಂಗಳೂರಿನಲ್ಲಿ ನಾಳೆ ʼಅಡ್ವೊಕೇಟ್ ಡೈರಿʼ ಕೃತಿ ಲೋಕಾರ್ಪಣೆ

ಶಾಸಕರು ಹತ್ತು, ಹದಿನೈದು, ಮೂವತ್ತು, ಐವತ್ತು, ನೂರು ಎಕರೆಗಳ ಒತ್ತುವರಿ ತೆರವು ಮಾಡುವುದಕ್ಕೆ ಸಹಕಾರ ನೀಡ್ತಾ ಇದಾರೆ ಅಂದ್ರೆ ಅದು ಸರಿ ಇದೆ. ಅರಣ್ಯ ಸಚಿವರು ಹೇಳಿದಂತೆ ಶಾಸಕರು ಖುದ್ದು ಎದುರು ನಿಂತು ದೊಡ್ಡ ದೊಡ್ಡ ಒತ್ತುವರಿದಾರರ ಒತ್ತುವರಿಗಳನ್ನು ತೆರವು ಮಾಡಿಸುತ್ತಾರೆ ಅಂತಾದರೆ ಅದು ಪ್ರಶಂಸನೀಯ. ಆದರೆ, ಸಣ್ಣ, ಅತಿ ಸಣ್ಣ, ಮಧ್ಯಮ ಹಿಡುವಳಿದಾರರ ಒತ್ತುವರಿ ತೆರವು ಕಾರ್ಯಾಚರಣೆಗೆ ಶಾಸಕರು ಸಹಾಯ ಹಸ್ತ ನೀಡಿದ್ಧಾರೆ ಅಂತಾದರೆ ಅದು ಆಘಾತಕಾರಿ ಸುದ್ದಿ ಎಂದು ಸಣ್ಣ ರೈತರು ಶಾಸಕರ ಒತ್ತುವರಿ ತೆರವು ಸಹಾಯ ಹಸ್ತದ ಬಗ್ಗೆ ಖಂಡನೆಯ ಧ್ವನಿ ಎತ್ತುತ್ತಿದ್ದಾರೆ.

ಬೆಳೆಗಾರರ ಸಂಘ ಆಕ್ಷೇಪ

ಶಾಸಕರು ಖುದ್ದು ಎದುರು ನಿಂತು ಒತ್ತುವರಿದಾರರ ಒತ್ತುವರಿಗಳನ್ನು ತೆರವು ಮಾಡಿಸುತ್ತಿದ್ದಾರೆ ಅಂತ ಅರಣ್ಯ ಸಚಿವರು ಹೇಳಿದ ಮೇಲೆ ಕ್ಷೇತ್ರದ ರೈತರಿಗೆ ಗೊತ್ತಾಗುವಂತೆ ಆಗಿದ್ದು ಮತ್ತು ಕ್ಷೇತ್ರದ ಶಾಸಕರು ಒತ್ತುವರಿಗೆ ಸಹಾಯ ಮಾಡುತ್ತಿರುವುದು, ಶಾಸಕರು ಖುದ್ದು ನಿಂತು ಒತ್ತುವರಿ ತೆರವು ಮಾಡಿಸುತ್ತಿರುವುದನ್ನು ರಹಸ್ಯವಾಗಿ ನಡೆಸುತ್ತಿರುವುದು ಆಶ್ಚರ್ಯಕರ ವಿಚಾರ. ಅರಣ್ಯ ಸಚಿವರು ಕ್ಷೇತ್ರದ ಶಾಸಕರ ಒತ್ತುವರಿ ರಹಸ್ಯ ಸಹಾಯವನ್ನು ಬಹಿರಂಗಗೊಳಿಸಿದ ಮೇಲೂ ಶಾಸಕರು ಮೌನವಾಗಿರುವುದು ಮತ್ತಷ್ಟು ಆಶ್ಚರ್ಯಕರ ವಿಚಾರವೇ ಸರಿ ಎಂದು ಬೆಳೆಗಾರರ ಸಂಘ ಖೇದ ವ್ಯಕ್ತಪಡಿಸಿದೆ.

ಶಾಸಕರು ಯಾವ? ಯಾರ? ಮತ್ತು ಎಷ್ಟು? ಒತ್ತುವರಿ ತೆರವುಗಳಿಗೆ ಸಹಾಯ ಮತ್ತು ಖುದ್ದು ನಿಂತು ತೆರವು ಕಾರ್ಯಾಚರಣೆ ಮಾಡಿಸಿದ್ದಾರೆ? ಮಾಡಿಸುತ್ತಿದ್ದಾರೆ? ಎನ್ನುವುದನ್ನು ಇನ್ನಾದರು ಪೂರ್ಣ ಪಟ್ಟಿ ಸಮೇತ ಕೊಡುವಂತಾಗಲಿ ಎಂಬುದು ರೈತ ಸಂಘಟನೆಗಳ ಒತ್ತಾಯವೂ ಆಗಿದೆ.

ಅರಣ್ಯ ಒತ್ತುವರಿ ತೆರವು ವಿಚಾರದಲ್ಲಿನ ಶಾಸಕರ ಸಹಾಯದ ವಿಚಾರ ಈಗ ಬಹಿರಂಗಗೊಂಡಿದೆ. ಅದೇ ರೀತಿ ರಹಸ್ಯವಾಗಿಯೇ ಇರಬಹುದಾದ ಕಂದಾಯ ಇಲಾಖೆಯ ಒತ್ತುವರಿ ತೆರವು ಬೆಂಬಲ/ಸಹಾಯವನ್ನು ನಾಳೆ ಕಂದಾಯ ಇಲಾಖಾ ಸಚಿವರು ಬಹಿರಂಗಪಡಿಸುವ ಮೊದಲೇ ಶಾಸಕರೇ ಕ್ಷೇತ್ರದ ಜನತೆಗೆ ತಿಳಿಸುವುದು ಒಳ್ಳೆಯದು. ಅದೇ ರೀತಿ ಇತರೆ ಇಲಾಖೆಗಳ ವಿಚಾರದಲ್ಲಿನ ಶಾಸಕರ ರೈತ ವಿರೋಧಿ, ಜನ ವಿರೋಧಿ ಸಹಾಯ, ಬೆಂಬಲಗಳ ಬಗ್ಗೆಯೂ ತಿಳಿಸುವಂತಾಗಲಿ ಎಂಬುದು ಕ್ಷೇತ್ರದ ಜನರ ಧ್ವನಿ ಆಗುತ್ತಿದೆ.

ವೇದಿಕೆಯ ಮೇಲೆ ‘ಒಂದು ಗುಂಟೆ ಒತ್ತುವರಿ ತೆರವಿಗೂ ಅವಕಾಶ ಕೊಡುವುದಿಲ್ಲ, ನಾನು ರೈತರ ಪರ ನಿಲ್ಲುತ್ತೇನೆ’ ಎಂದು ಹೇಳಿದ ಶಾಸಕರು, ರಹಸ್ಯವಾಗಿ ಒತ್ತುವರಿ ತೆರವಿಗೆ ಒತ್ತಾಸೆ ಕೊಡುತ್ತಿರುವುದು ಮತ್ತು ಅದನ್ನು ಅರಣ್ಯ ಸಚಿವರು ಬಹಿರಂಗಗೊಳಿಸಿರುವುದು, ಕ್ಷೇತ್ರದ ಜನ ಶಾಸಕರನ್ನು ತರಾಟೆಗೆ ತೆಗೆದುಕೊಳ್ಳುವಂತಾಗಿದೆ.

ಈ ಸುದ್ದಿಯನ್ನೂ ಓದಿ | Job Guide: ನಬಾರ್ಡ್‌ನಲ್ಲಿ ಉದ್ಯೋಗಾವಕಾಶ; 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ

ಒಟ್ಟಿನಲ್ಲಿ ಕಸ್ತೂರಿ ರಂಗನ್ ವರದಿ ಮತ್ತು ಒತ್ತುವರಿ ವಿಚಾರಗಳಲ್ಲಿನ ಸೂಕ್ಷ್ಮಗಳು ಸಾಮಾನ್ಯರಿಗೆ ಅರ್ಥವಾಗದೆ ಗೊಂದಲವಾಗಿಸಿ ಇಡಲಾಗಿದೆ. ಈಗ ಕಸ್ತೂರಿ ರಂಗನ್ ವರದಿ ಮತ್ತು ಒತ್ತುವರಿ ವಿಚಾರಗಳಲ್ಲಿನ ಶಾಸಕರ ನಡೆಯೂ ರಹಸ್ಯ, ಗೊಂದಲ, ಅನುಮಾನಗಳನ್ನು ಹುಟ್ಟುಹಾಕಿದೆ.