Friday, 22nd November 2024

KEA Exam: VAO, GTTC ಹುದ್ದೆ ನೇಮಕಾತಿ; ಕಡ್ಡಾಯ ಕನ್ನಡ, ಮುಖ್ಯ ಪರೀಕ್ಷೆ ಪ್ರವೇಶ ಪತ್ರ ಪ್ರಕಟ

VAO Exam 2024

ಬೆಂಗಳೂರು: ಗ್ರಾಮ ಆಡಳಿತಾಧಿಕಾರಿ ಹುದ್ದೆ ಮತ್ತು ಜಿಟಿಟಿಸಿ ಹುದ್ದೆಗಳ ನೇಮಕಾತಿ (VAO-GTTC Posts) ಸಂಬಂಧ ಅ.26 ರಂದು ಮತ್ತು 27ರಂದು ನಡೆಯುವ ಕಡ್ಡಾಯ ಕನ್ನಡ ಪರೀಕ್ಷೆ ಮತ್ತು ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ. ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ (KEA Exam) ಹಾಲ್‌ ಟಿಕೆಟ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಈ ಬಗ್ಗೆ ಕೆಇಎ ಪ್ರಕಟಣೆ ಹೊರಡಿಸಿದ್ದು, ಅ.26ರ VAO-GTTC ಕಡ್ಡಾಯ ಕನ್ನಡ ಪರೀಕ್ಷೆ ಮತ್ತು ಅ.27ರ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಮುಖ್ಯ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ‌ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಕೆಇಎ ವೆಬ್‌ಸೈಟ್‌ನಲ್ಲಿ‌ ಲಿಂಕ್ ಬಿಡಲಾಗಿದೆ. ಇನ್ನು ಅಭ್ಯಾಸ ಸಲುವಾಗಿ sample OMR sheet ಕೂಡ ನೀಡಲಾಗಿದ್ದು, ಅದನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ ಎಂದು ಸೂಚಿಸಿದೆ.

ಪ್ರವೇಶ ಪತ್ರ ಡೌನ್‌ಲೋಡ್‌ ಹೇಗೆ?

ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಿ, ನೇಮಕಾತಿ ಕೆಟಗರಿಯಲ್ಲಿ ಗ್ರಾಮ ಆಡಳಿತಾಧಿಕಾರಿ ಅಥವಾ ಜಿಟಿಟಿಸಿ ಹುದ್ದೆಗಳ ಪ್ರವೇಶ ಪತ್ರ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ, ಪರೀಕ್ಷೆ ಹಾಗೂ ಅರ್ಜಿ ಸಂಖ್ಯೆ ನಮೂದಿಸಿ ಪ್ರವೇಶ ಪತ್ರ ಡೌನ್‌ ಲೋಡ್‌ ಮಾಡಿಕೊಳ್ಳಬಹುದು.

VAO-GTTC ಪರೀಕ್ಷೆ ಪ್ರವೇಶ ಪತ್ರಕ್ಕಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಗ್ರಾಮ ಆಡಳಿತಾಧಿಕಾರಿ ಹುದ್ದೆ ಮತ್ತು ಜಿಟಿಟಿಸಿ ಸಂಸ್ಥೆಯಲ್ಲಿನ ವಿವಿಧ ವೃಂದದ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ಸೆ.29ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆದಿತ್ತು. ಅದರ ಫಲಿತಾಂಶವೂ ಬಿಡುಗಡೆಯಾಗಿದೆ. ರಾಜ್ಯ ಸರ್ಕಾರ ಗ್ರೂಪ್‌ ಬಿ ಮತ್ತು ಸಿ ಹುದ್ದೆಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಿದ್ದರಿಂದ ಮತ್ತೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿತ್ತು. ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಅ. 26ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಯಲಿದ್ದು, ಅ. 27ರಂದು ಎಲ್ಲಾ ಅಭ್ಯರ್ಥಿಗಳಿಗೂ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಮುಖ್ಯ ಪರೀಕ್ಷೆ ಪರೀಕ್ಷೆ ನಡೆಯಲಿದೆ. ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಒಟ್ಟು 150 ಅಂಕಗಳಿಗೆ ಅರ್ಹತಾ ಅಂಕ ಕನಿಷ್ಠ 50 ಗಳಿಸಬೇಕಾಗಿದೆ.

ಈ ಸುದ್ದಿಯನ್ನೂ ಓದಿ | KEA Exam: VAO, GTTC ಹುದ್ದೆ ನೇಮಕಾತಿ; ಕಡ್ಡಾಯ ಕನ್ನಡ ಪರೀಕ್ಷೆ ತಾತ್ಕಾಲಿಕ ಫಲಿತಾಂಶ ಪ್ರಕಟ

ಆಯ್ಕೆ ಹೇಗೆ?

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ಕೆಇಎ ಭರ್ತಿ ಮಾಡಲಿದೆ. ಕೆಇಎ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಈ ಪರೀಕ್ಷೆ ಆಫ್‌ಲೈನ್‌-ಒಎಂಆರ್‌ ಮಾದರಿಯಲ್ಲಿ ಇರುತ್ತದೆ. ಪರೀಕ್ಷೆಗೆ 200 ಅಂಕಗಳನ್ನು ಒಳಗೊಂಡ 2 ಪತ್ರಿಕೆ ಇರಲಿದ್ದು, ಜತೆಗೆ ಕನ್ನಡ ಭಾಷಾ ಪರೀಕ್ಷೆ ಕಡ್ಡಾಯವಾಗಿದೆ. ಇದರಲ್ಲಿ ಕನಿಷ್ಠ 50 ಅಂಕ ಗಳಿಸಬೇಕು. ಪರೀಕ್ಷೆಗಳನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಈ ಹಿಂದೆ ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಅಂಕಗಳ ಆಧಾರದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮೆರಿಟ್‌ ಆಧಾರದಲ್ಲಿ ಹುದ್ದೆಗಳಿಗೆ ಆಯ್ಕೆ ನಡೆಯುತ್ತಿತ್ತು. ಆದರೆ ಈ ಬಾರಿಯಿಂದ ಆಯ್ಕೆ ವಿಧಾನವನ್ನು ಬದಲಿಸಲಾಗಿದೆ. ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನ ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದಂಶದಷ್ಟು 1/4 ಅಂಕಗಳನ್ನು ಕಳೆಯಲಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆ ಬಳಿಕ ಅಭ್ಯರ್ಥಿಗಳ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆಯಾಗಲಿದೆ. ನಂತರ ಜಿಲ್ಲಾವಾರು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದವರನ್ನು ಕೌನ್ಸೆಲಿಂಗ್‌ ಮೂಲಕ ಸ್ಥಳ ನಿಯೋಜನೆಗೊಳಿಸಲಾಗುತ್ತದೆ. ನಿಗದಿತ ಮೀಸಲಾತಿಯಂತೆ ಹುದ್ದೆಗಳನ್ನು ಗುರುತಿಸಿ, ಆ ಪ್ರಕಾರ ಹುದ್ದೆ ಭರ್ತಿ ಮಾಡಲಾಗುತ್ತದೆ.