Saturday, 14th December 2024

Kiccha Sudeep: ನಾಳೆ ಕಿಚ್ಚೋತ್ಸವ; ಅದ್ಧೂರಿಯಾಗಿ ಸುದೀಪ್ ಹುಟ್ಟು ಹಬ್ಬ ಆಚರಣೆಗೆ ಸಿದ್ಧತೆ

Kiccha Sudeep

ಬೆಂಗಳೂರು: ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ (Kiccha Sudeep) ಸೆಪ್ಟೆಂಬರ್ 2 ರಂದು 51ನೇ ವಸಂತಕ್ಕೆ ಕಾಲಿಡಲಿದ್ದಾರೆ. 50ನೇ ವರ್ಷದ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದ ಕಿಚ್ಚ, ಈ ಬಾರಿಯ ಹುಟ್ಟು ಹಬ್ಬದ ಆಚರಣೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಜಯನಗರದ ಖಾಸಗಿ ಹೊಟೇಲ್​​ನಲ್ಲಿ​ ಸುದ್ದಿಗೋಷ್ಠಿ ನಡೆಸಿದ ಸುದೀಪ್‌ ಅವರು, ಕಳೆದ ವರ್ಷ 30,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು. ಆದರೆ, ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಈ ಬಾರಿ ಜಯನಗರದ ಎಂಇಎಸ್ ಗ್ರೌಂಡ್​​​ನಲ್ಲಿ ಸಿಗೋಣ ಎಂದು ತಿಳಿಸಿದರು.

‘ವರ್ಷಗಳುರುಳಿದಂತೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ. ಅದು ಬಹಳ ಖುಷಿಯ ವಿಷಯ. ಕಳೆದ ವರ್ಷದ ಸೆಲೆಬ್ರೇಶನ್​​ನಲ್ಲಿ ಸ್ವಲ್ಪ ಗೊಂದಲವಾಯ್ತು, ತೊಂದರೆಗಳಾಗಿದ್ದವು. ಪೊಲೀಸರು ಮತ್ತು ಅಕ್ಕಪಕ್ಕ‌ದ ಮನೆಯವರು ವಿನಂತಿ ಮಾಡಿದ್ದರು. ನನ್ನಿಂದ ಯಾರಿಗೂ ತೊಂದರೆ ಆಗುವುದು ನನಗಿಷ್ಟವಿಲ್ಲ. ಈ ಬಾರಿ ಜಯನಗರದ ಎಂಇಎಸ್ ಗ್ರೌಂಡ್​​​ನಲ್ಲಿ ಸಿಗೋಣ. ಅಲ್ಲಿಯೂ ಸಮಯಾವಕಾಶವಿದೆ. ಬೆಳಗ್ಗೆ 11.30ರವರೆಗೂ ಅಲ್ಲೇ ಇರಲಿದ್ದೇನೆ’ ಎಂದು ಹೇಳಿದರು.

ಕಳೆದ ವರ್ಷ 30,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು. ಆದರೆ, ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಪರಿಸ್ಥಿತಿ ನಿಭಾಯಿಸೋದು ನನ್ನ ಗೆಳೆಯರು ಮತ್ತು ಪೊಲೀಸರಿಗೆ ಕೊಂಚ ಕಷ್ಟವಾಯಿತು. ಹಾಗಾಗಿ ಈ ಬಾರಿ ಎಂಇಎಸ್ ಮೈದಾನದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುತ್ತೇನೆ. ಸಿನಿರಂಗದಲ್ಲಿನ ನನ್ನ ಪಯಣದ 30 ವರ್ಷಕ್ಕೆ ಇನ್ನೊಂದು ವರ್ಷ ಬಾಕಿ ಇದೆ. ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡಬೇಕೆನ್ನೋದು ನನ್ನ ಆಸೆ. ಆದ್ರೆ ಕಾರಣಾಂತರಗಳಿಂದ ವಿಳಂಬಗಳನ್ನು ಎದುರಿಸಬೇಕಾಗುತ್ತಿದೆ. ನನ್ನನ್ನು ನಟನಿಗಿಂತ ಹೆಚ್ಚಾಗಿ ಕ್ರಿಕೆಟರ್​ನಂತೆ ನೋಡ್ತಿದ್ದಾರೆ. ಜವಾಬ್ದಾರಿಗಳು ಹೆಚ್ಚಿವೆ. ಮ್ಯಾಕ್ಸ್ ಶೀಘ್ರ ಬಿಡುಗಡೆಯಾಗಬೇಕೆಂಬುದು ನನಗೂ ಆಸೆ ಎಂದು ತಿಳಿಸಿದರು.

ಸಿನಿಮಾ ಬ್ಯುಸಿನೆಸ್ ಕೂಡ ಬದಲಾಗಿದೆ

ಕೊಂಚ ತಡವಾಗಿದೆ ನಿಜ. ಆದರೆ ಸಿನಿಮಾ ಬಹುತೇಕ ಪೂರ್ಣಗೊಂಡಿದೆ. ಸೆಪ್ಟೆಂಬರ್​ನಲ್ಲೇ ಮಾಹಿತಿ ಸಿಗುವ ಸಾಧ್ಯತೆಯಿದೆ. ಮಾರ್ಕೆಟಿಂಗ್ ಇರುತ್ತದೆ. ಹೆಚ್ಚಿನ ಸಂಖ್ಯೆಯ ಜನರು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಡಿಮೆಯಾಗುತ್ತಿದೆ. ಡಿಜಿಟಲ್ ಹಾಗೂ ಟಿವಿ ರೈಟ್ಸ್ ಅಂದಾಗ ವ್ಯಾಪಾರದ ದೃಷ್ಟಿಯಿಂದ ಸಿನಿಮಾ ಬ್ಯುಸಿನೆಸ್ ಕೂಡ ಬದಲಾಗಿದೆ ಎಂದು ತಿಳಿಸಿದರು.

ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮವನ್ನು ಸುದೀಪ್ ಅವರು ನಡೆಸೋದು ಅನುಮಾನ ಎಂದು ಹೇಳಲಾಗಿತ್ತಿದೆ. ಈ ಸೀಸನ್​ಗೆ ಬೇರೆ ಆ್ಯಂಕರ್​ಗಾಗಿ ಹುಡುಕಾಟ ನಡೆಯುತ್ತಿದೆ ಎನ್ನುವ ಸುದ್ದಿ ಇದೆ. ಆದರೆ ಈ ಪ್ರಶ್ನೆಗೆ ನಟನಿಂದ ಸ್ಪಷ್ಟ ಉತ್ತರ ಸಿಗಲಿಲ್ಲ. ಬಿಗ್ ಬಾಸ್ ಬಗ್ಗೆ ನನಗೆ ಕ್ಲ್ಯಾರಿಟಿ ಇಲ್ಲ. ಪ್ರೋಟೋಕಾಲ್ ಇರುತ್ತದೆ. ಅವರದ್ದೇ ಆದ ಒಂದು ಪ್ಲ್ಯಾನಿಂಗ್ ಇರುತ್ತದೆ ಎಂದು ತಿಳಿಸಿದರು.

ಆಮೇಲೆ ನೋಡೋಣ

ಇನ್ನು ಡಾಕ್ಟರೇಟ್ ತೆಗೆದುಕೊಳ್ಳುವಂಥ ಕೆಲಸ ನಾನೇನೂ ಮಾಡಿಲ್ಲ. ಸಿನಿಮಾ ಮಾಡಿದ್ದೇನಷ್ಟೇ. ಸಾಧನೆ ಮಾಡಿದ್ದೇನೆಂದನಿಸಿದಾಗ ನಾನೇ ಪತ್ರ ಬರೆದು ಕೇಳಿಕೊಳ್ಳುತ್ತೇನೆ. ನಾನು ಮಾಡಬೇಕಿರುವುದು ಇನ್ನೂ ಬಹಳಷ್ಟಿದೆ. ಆಮೇಲೆ ನೋಡೋಣ ಎಂದು ಸುದೀಪ್ ತಿಳಿಸಿದರು.

ಹೊಸ ಸಿನಿಮಾ ನಟರಿಗಾಗಿ ತಮ್ಮ ಮ್ಯಾಕ್ಸ್ ಸಿನಿಮಾ ಬಿಡುಗಡೆ ಮುಂದೂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ಬಗ್ಗೆ ಮಾತನಾಡಿದ ಸುದೀಪ್, ಕಾಂಪ್ರಮೈಸ್​​ ಅನ್ನೋದು ನನ್ನ ಜೀವನದಲ್ಲೇ ಇಲ್ಲ. ಬೆಂಬಲ, ಮಾನವೀಯತೆ ಇದೆ. ನಾನು ನನ್ನ ಮನೆಯಲ್ಲೇ ಕಾಂಪ್ರಮೈಸ್​​ ಆಗಲ್ಲ. ಅದು ಕಾಂಪ್ರಮೈಸ್​​ ಅಲ್ಲ, ಸಪೋರ್ಟ್ ಅಷ್ಟೇ. ಸೋಷಿಯಲ್​ ಮೀಡಿಯಾಗಳಲ್ಲಿ ಇಂಥ ಮಾತುಗಳು ಇರುತ್ತವೆ. ಎಂಟರ್​ಟೈನ್ಮೆಂಟ್​​ ಇರಲಿ ಬಿಡಿ. ಓಟಿಟಿಯಲ್ಲಿ ಬರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿಲ್ಲ ಎಂದರೆ ಓಟಿಟಿಗೂ ಹೋಗಲು ಆಗಲ್ಲ. ಥಿಯೇಟರ್ ಅನುಭವವನ್ನು ಯಾರೂ ಮಿಸ್ ಮಾಡಿಕೊಳ್ಳೋಕೆ ರೆಡಿ ಇಲ್ಲ. ಇದೆಲ್ಲವೂ ಮಾರ್ಕೆಟಿಂಗ್ ಬಿಡಿ ಎಂದರು.

ಮ್ಯಾಕ್ಸ್ ಆದ್ಮೇಲೆ ಕೆಲ ಸಿನಿಮಾಗಳು ಲೈನ್​ನಲ್ಲಿವೆ. ಆದ್ರೆ ಯಾವ ಸಿನಿಮಾ ಶುರು ಮಾಡ್ತೇನೆಂಬುದು ಗೊತ್ತಿಲ್ಲ. ನಂಬರ್ಸ್ ಹಾಕ್ಕೊಂಡು ಹೋಗೋದು ಬೇಡ. ಸದ್ಯಕ್ಕೆ ಅದು ಕರೆಕ್ಟ್ ಆಗಲ್ಲ. ಸ್ಕೇಲ್, ವರ್ಕ್ ಎಲ್ಲವೂ ಡಿಸೈಡ್ ಮಾಡಲಿದೆ. ಬಿಲ್ಲ ರಂಗ ಭಾಷ ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಅದಕ್ಕೆ ಸೂಕ್ತ ತಯಾರಿ ಆಗಬೇಕಿದೆ ಎಂದು ತಿಳಿಸಿದರು.

ಮಾತನಾಡಿ ನೋವು ಕೊಡುವುದು ಬೇಡ

ನಟ ದರ್ಶನ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಅವರಿಗೆ ಅಭಿಮಾನಿಗಳಿದ್ದಾರೆ. ಕುಟುಂಬವಿದೆ. ನಾವು ಮಾತನಾಡಿ ನೋವು ಕೊಡೋದು ಬೇಡ. ರಾಜಕೀಯವಾಗಿ ಮಾತನಾಡುತ್ತಿದ್ದೇನೆ ಎಂದುಕೊಳ್ಳಬೇಡಿ. ಕಾನೂನನ್ನು ನಂಬಬೇಕಿದೆ. ನಾವು ಮಾಧ್ಯಮಗಳನ್ನು ನೋಡಿ ವಿಷಯ ತಿಳಿದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.