Wednesday, 18th December 2024

Kidney Health: ಕಿಡ್ನಿ ಆರೋಗ್ಯದ ಕುರಿತು ಈ ಸಂಗತಿ ತಿಳಿದುಕೊಳ್ಳುವುದು ಅತಿ ಮುಖ್ಯ

Kidney Health

ಇತ್ತೀಚಿನ ವರ್ಷಗಳಲ್ಲಿ ಜಾಗತಿಕವಾಗಿ ಮೂತ್ರಪಿಂಡ (Kidney Health) ಸಂಬಂಧಿ ಕಾಯಿಲೆಯನ್ನು ಹೊಂದಿರುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. 1990-2017: ಸಿಸ್ಟಮ್ಯಾಟಿಕ್ ಆನಲಿಸಿಸ್ ಫಾರ್ ದಿ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ 2017 ರ ಪ್ರಕಾರ, ಎಲ್ಲಾ ವಯಸ್ಸಿನವರಲ್ಲಿಯೂ ಕಿಡ್ನಿ ಸಮಸ್ಯೆಗಳು ಕಂಡುಬರುತ್ತಿದ್ದು, ಮರಣ ಪ್ರಮಾಣ ಶೇ.29.3 ರಿಂದ 49.3ರಷ್ಟು ಹೆಚ್ಚಾಗಿದೆ. ಮಿಲಿಯನ್ ಡೆತ್ ಸ್ಟಡಿ ಅಂದಾಜಿನ ಪ್ರಕಾರ ಭಾರತದಲ್ಲಿ ಮೂತ್ರಪಿಂಡ ವೈಫಲ್ಯದಿಂದ ಸಾವಿಗೀಡಾದವರ ಪ್ರಮಾಣ ಶೇ. 38 ರಷ್ಟು ಹೆಚ್ಚಳ ಕಂಡಿದೆ. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಸಾಮಾನ್ಯವಾಗಿ ಮೂತ್ರಪಿಂಡ ಕಸಿಯನ್ನು ವೈದ್ಯರು ಸೂಚಿಸುತ್ತಾರೆ. ಕೆಲವೊಮ್ಮೆ ಅಂಗಾಂಗ ದಾನ ಮಾಡುವವರ ಕೊರತೆಯಿದ್ದಾಗ ರೋಗಿಯ ಜೀವ ಉಳಿಸುವ ನಿಟ್ಟಿನಲ್ಲಿ ಡಯಾಲಿಸಿಸ್ ಚಿಕಿತ್ಸೆಯನ್ನು ವೈದ್ಯರು ನೀಡುತ್ತಾರೆ. ಡಯಾಲಿಸಿಸ್ ಒಂದು ಉತ್ತಮ ಚಿಕಿತ್ಸಾ ವಿಧಾನವಾಗಿದ್ದು, ಸಾಮಾನ್ಯ ಜನರಿಗೆ ಇದರ ಕಾರ್ಯವಿಧಾನಗಳ ಬಗೆಗೆ ಹಲವಾರು ತಪ್ಪು ಕಲ್ಪನೆಗಳಿವೆ. ಈ ಹಿನ್ನೆಲೆಯಲ್ಲಿ ಆ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡೋಣ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಖ್ಯಾತ ಮೂತ್ರಪಿಂಡ ತಜ್ಞರಾದ ಡಾ. ಶ್ರೀನಿಧಿ ಚಂದ್ರಶೇಖರ್.

ತಪ್ಪುಕಲ್ಪನೆ 1: ಮೂತ್ರಪಿಂಡ ಸಂಬಂಧಿತ ಕಾಯಿಲೆಯು ತೀರಾ ಅಸಾಮಾನ್ಯವಾದದ್ದು ಮತ್ತು ಹಿರಿಯ ನಾಗರಿಕರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ.

ನಿಜಾಂಶ: ಮೂತ್ರಪಿಂಡ ಸಂಬಂಧಿತ ಕಾಯಿಲೆಗಳು ಎಲ್ಲಾ ವಯಸ್ಸಿನವರ ಮೇಲೂ ಪರಿಣಾಮ ಬೀರಬಹುದು. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ (1996-2017) ನಡೆಸಿದ ಅಧ್ಯಯನದ ಪ್ರಕಾರ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯುಳ್ಳವರ ಪ್ರಮಾಣ (ಸಿಕೆಡಿ) 83.5% ರಷ್ಟು ಹೆಚ್ಚಳವಾಗಿದೆ. ಇದಲ್ಲದೆ, ಭಾರತದಲ್ಲಿ ಒಟ್ಟಾರೆ 38%ರಷ್ಟು ಸಾವಿನ ಪ್ರಕರಣಗಳಲ್ಲಿ ಮೂತ್ರಪಿಂಡದ ವೈಫಲ್ಯ ಹೊಂದಿರುವವರೇ ಹೆಚ್ಚು. ಮೂತ್ರಪಿಂಡದ ಸಮಸ್ಯೆಗಳಿಗೆ ಆರಂಭ ಹಂತದಲ್ಲೇ ಚಿಕಿತ್ಸೆ ನೀಡಿದರೆ ಉತ್ತಮ ಫಲಿತಾಂಶ ಸಿಗಲಿದೆ.

ಈ ಸುದ್ದಿಯನ್ನೂ ಓದಿ | Job Guide: ನ್ಯೂ ಅಶ್ಯೂರೆನ್ಸ್‌ ಕಂಪೆನಿ ಲಿಮಿಡೆಟ್‌ನಲ್ಲಿದೆ 500 ಹುದ್ದೆ; ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಿ

ತಪ್ಪುಕಲ್ಪನೆ 2: ಮೂತ್ರಪಿಂಡ ವೈಫಲ್ಯಕ್ಕೆ ಮೂತ್ರಪಿಂಡ ಕಸಿ ಮಾತ್ರ ಉತ್ತಮ ಪರಿಹಾರ!

ನಿಜಾಂಶ: ಕಿಡ್ನಿ ವೈಫಲ್ಯಕ್ಕೆ ಮೂತ್ರಪಿಂಡ ಕಸಿ ಅತ್ಯಂತ ಕೊನೆಯ ಆಯ್ಕೆಯಾಗಿದೆ. ಆದ್ರೆ ಡಯಾಲಿಸಿಸ್ ಕೂಡ ಕಿಡ್ನಿ ವೈಫಲ್ಯಕ್ಕೆ ಪರಿಣಾಮಕಾರಿ ಮತ್ತು ಉತ್ತಮ ಚಿಕಿತ್ಸಾ ವಿಧಾನವಾಗಿದೆ. ಕಿಡ್ನಿ ವೈಫಲ್ಯವನ್ನು ನಿರ್ವಹಿಸಲು ಡಯಾಲಿಸಿಸ್ ಸಹಾಯ ಮಾಡುತ್ತದೆ ಮತ್ತು ರಕ್ತದಿಂದ ತ್ಯಾಜ್ಯ ಹಾಗೂ ಹೆಚ್ಚುವರಿ ದ್ರವವನ್ನು ತೆಗೆದುಹಾಕುವ ಮೂಲಕ ರೋಗಿಗಳು ನೆಮ್ಮದಿಯಿಂದ ಜೀವನ ನಡೆಸುವದಕ್ಕೆ ನೆರವಾಗುತ್ತದೆ.

ತಪ್ಪುಕಲ್ಪನೆ 3: ಡಯಾಲಿಸಿಸ್‌ನಿಂದ ಯಾವುದೇ ಪ್ರಯೋಜನವಿಲ್ಲ

ನಿಜಾಂಶ: ಡಯಾಲಿಸಿಸ್ ಚಿಕಿತ್ಸೆ ರೋಗಿಗಳ ಸ್ಥಿತಿಯ ಸುಧಾರಣೆಗೆ ಸಹಾಯ ಮಾಡುತ್ತದೆ. ನಿಯಮಿತ ಡಯಾಲಿಸಿಸ್ ದೇಹದ ಪ್ರಕ್ರಿಯೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯು ಜೀವಸೆಲೆಯಾಗಿ ಕಾರ್ಯನಿರ್ವಹಿಸುವುದರಿಂದ ಡಯಾಲಿಸಿಸ್‌ಗೆ ಒಳಗಾಗುವವರು ತಮ್ಮ ಜೀವನಶೈಲಿಯಲ್ಲಿ ಸುಧಾರಣೆಯನ್ನು ಕಾಣುತ್ತಾರೆ.

ತಪ್ಪುಕಲ್ಪನೆ 4: ಡಯಾಲಿಸಿಸ್ ಚಿಕಿತ್ಸೆಯು ರೋಗಿಗಳನ್ನು ದುರ್ಬಲ, ಅವಲಂಬಿತ ಮತ್ತು ಆರ್ಥಿಕವಾಗಿ ಹೊರೆಯಾಗಿಸುತ್ತದೆ

ನಿಜಾಂಶ: ಡಯಾಲಿಸಿಸ್‌ನಿಂದ ಕೆಲವು ದೈಹಿಕ, ಮಾನಸಿಕ ಮತ್ತು ಆರ್ಥಿಕ ಅಡೆತಡೆಗಳನ್ನು ಎದುರಿಸಿದರೂ ಸಹ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳ ಆರೋಗ್ಯ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಸಹಜವಾಗಿ ತೊಡಗಿಕೊಳ್ಳಲು ಈ ಚಿಕಿತ್ಸೆಯು ನೆರವಾಗುತ್ತದೆ. ಡಯಾಲಿಸಿಸ್‌ಗೆ ಒಳಗಾದ ರೋಗಿಗಳು ತಮ್ಮ ವೃತ್ತಿ ಜೀವನವನ್ನು ಮುಂದುವರೆಸಬಹುದು ಮತ್ತು ಇತರ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಅನೇಕ ಸಮಸ್ಯೆಗಳನ್ನು ತಡೆಗಟ್ಟಲು ಡಯಾಲಿಸಿಸ್ ನೆರವಾಗಲಿದೆ.

ತಪ್ಪುಕಲ್ಪನೆ 5: ಡಯಾಲಿಸಿಸ್ ಅತೀ ನೋವಿನಿಂದ ಕೂಡಿದ ಚಿಕಿತ್ಸಾ ವಿಧಾನ

ನಿಜಾಂಶ: ಹಿಮೋಡಯಾಲಿಸಿಸ್ ಚಿಕಿತ್ಸೆ ವೇಳೆ ರೋಗಿಯು ಅಸ್ವಸ್ಥತೆಯನ್ನು ಅನುಭವಿಸಬಹುದು. ಒಟ್ಟಾರೆಯಾಗಿ ಡಯಾಲಿಸಿಸ್ ನೋವಿನ ಚಿಕಿತ್ಸಾ ವಿಧಾನವಾಗಿರುವುದಿಲ್ಲ. ಸರಿಯಾದ ಕಾಳಜಿಯೊಂದಿಗೆ ಯಾವುದೇ ನೋವು ಅಥವಾ ಅಸ್ವಸ್ಥತೆಯಿಲ್ಲದೆ ಈ ಚಿಕಿತ್ಸೆಯನ್ನು ಪಡೆಯಬಹುದು. ಪೆರಿಟೋನಿಯಲ್ ಡಯಾಲಿಸಿಸ್ ಹೆಚ್ಚಿನ ತೊಂದರೆ ನೀಡದು ಮತ್ತು ನೋವು ರಹಿತ ಚಿಕಿತ್ಸಾ ವಿಧಾನವಾಗಿದೆ.

ಈ ಸುದ್ದಿಯನ್ನೂ ಓದಿ | Self employment Loan: ಸ್ವಯಂ ಉದ್ಯೋಗಕ್ಕೆ ಸಾಲ ಲಭ್ಯ, ಡಿ.29 ಕೊನೆಯ ದಿನ; ಇಂದೇ ಅರ್ಜಿ ಸಲ್ಲಿಸಿ

ತಪ್ಪುಕಲ್ಪನೆ 6: ಡಯಾಲಿಸಿಸ್ ಒಂದು ಶಾಶ್ವತ, ಬದಲಾಯಿಸಲಾಗದ ಚಿಕಿತ್ಸಾ ವಿಧಾನ!

ನಿಜಾಂಶ: ಸೋಂಕು, ಔಷಧಗಳು ಅಥವಾ ಆಘಾತದಿಂದ ಉಂಟಾಗುವ ತೀವ್ರವಾದ ಮೂತ್ರಪಿಂಡ ಸಂಬಂಧಿತ ಗಾಯಗಳಿಗೆ (AKI) ಡಯಾಲಿಸಿಸ್ ತಾತ್ಕಾಲಿಕ ಚಿಕಿತ್ಸಾ ವಿಧಾನವಾಗಿರಬಹುದು. ಆದರೆ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಹೊಂದಿರುವ ಜನರಿಗೆ ಡಯಾಲಿಸಿಸ್ ದೀರ್ಘಾವಧಿಯಾಗಿ ನೆರವಾಗುವ ಚಿಕಿತ್ಸಾ ವಿಧಾನ. ಕೆಲವು ಸಂದರ್ಭಗಳಲ್ಲಿ ಮೂತ್ರಪಿಂಡ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ಕಂಡುಬಂದರೆ ಡಯಾಲಿಸಿಸ್ ಅಗತ್ಯವಿರುವುದಿಲ್ಲ. ಒಟ್ಟಾರೆಯಾಗಿ ಡಯಾಲಿಸಿಸ್ ಚಿಕಿತ್ಸೆಯನ್ನು ರೋಗಿಯ ಸ್ಥಿತಿ ಮತ್ತು ವಿವಿಧ ಅಂಶಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.