ಅಲಕಾ ಕೆ.
ಕಾಡಿನ ರಾಜ ಸಿಂಹನಿಗೆ ಚಿಂತೆ ಶುರುವಾಗಿತ್ತು. ಆದರೆ ಯಾರಲ್ಲೂ ತನ್ನ ಚಿಂತೆಯನ್ನು ಹೇಳಿಕೊಳ್ಳಲಾಗದೆ ಒದ್ದಾಡುತ್ತಿತ್ತು. ಸಿಂಹರಾಜ ಚಿಂತೆಯಲ್ಲಿರುವುದನ್ನು ಸಿಂಹಿಣಿಯೂ ಗಮನಿಸಿತ್ತು. ಮೊದಲಿನಂತೆ ನೆಮ್ಮದಿಯಿಂದ ನಿದ್ದೆ ಮಾಡುತ್ತಿಲ್ಲ, ಮಕ್ಕಳೊಂದಿಗೆ ಆಟವಾಡುತ್ತಿಲ್ಲ, ಊಟವನ್ನೂ ಹೊಟ್ಟೆ ತುಂಬಾ ಮಾಡುತ್ತಿಲ್ಲ. ಹಾಗಂತ ಕಾಡಿನ ಎಲ್ಲಾ ರಾಜಕಾರ್ಯಗಳಲ್ಲಿ ಆತ ವ್ಯಸ್ತ. ಕಾಡಿನಲ್ಲಿ ಎಲ್ಲರಿಗೂ ಆತನ ಮೇಲೆ ಗೌರವವಿದೆ. ಆದರೂ ಮನಸ್ಸಿಗೇನೋ ವ್ಯಥೆಯಿದೆ ಆತನಿಗೆ ಎಂಬುದು ರಾಣಿ ಸಿಂಹಿಣಿಗೆ ಗೊತ್ತಾಗಿತ್ತು. ಅಂದು ರಾತ್ರಿ ಊಟವೆಲ್ಲ ಮುಗಿದು, ಮರಿಸಿಂಹಗಳೆಲ್ಲಾ ಮಲಗಿದ ಮೇಲೆ, ʻಸಣ್ಣದೊಂದು ವಾಕಿಂಗ್ ಹೋಗೋಣವಾ?ʼ ಕೇಳಿತು ಸಿಂಹರಾಜ. ಇಬ್ಬರೂ ಹೊರಟರು. ಅವರಿಷ್ಟದ ಹಸಿರುಗುಡ್ಡದ ಮೇಲಿನವರೆಗೆ ನಡೆಯುತ್ತಾ ಹೋಗಿ, ತಿಂಗಳು ಬೆಳಕಿನಲ್ಲಿ ಗುಡ್ಡದ ಮೇಲಿನ ಬಂಡೆಗೆ ಆತು ಕುಳಿತುಕೊಂಡರು. ʻಆರೋಗ್ಯ ಸರಿಯಿಲ್ಲವೇ? ಯಾಕೊ ಮಂಕಾಗಿದ್ದೀಯಲ್ಲ!ʼ ಕೇಳಿತು ಸಿಂಹಿಣಿ. ʻಹಾಗೇನಿಲ್ಲ, ಚೆನ್ನಾಗೇ ಇದ್ದೀನಲ್ಲʼ ಅಂತು ಸಿಂಹ. ʻಏನೋಪ್ಪ, ಮೊದಲಿನ ಥರಾ ಕಾಣ್ತಿಲ್ಲ ನಿನ್ನ ಕೆಲಸಗಳು. ಊಟ, ನಿದ್ದೆ ಎಲ್ಲಾ ಹಾಳಾದಂಗಿದೆʼ ಬೇಸರಿಸಿತು ಸಿಂಹಿಣಿ.
ʻಇತ್ತೀಚೆಗೆ ನನ್ನ ನೋಡಿದ್ದೀಯ ಸರಿಯಾಗಿ?ʼ ಕೇಳಿತು ರಾಜ. ʻಹಂಗಂದ್ರೇನು! ದಿನಾ ನೋಡ್ತೀನಲ್ಲ. ಈಗಲೂ ನೋಡ್ತಾನೇ ಇದ್ದೀನಿʼ ಹೇಳಿತು ರಾಣಿ. ತನ್ನ ಹಣೆಯ ಮುಂಭಾಗವನ್ನು ತೋರಿಸಿದ ಸಿಂಹ, ʻನೋಡು, ಹೇಗಾಗಿದೆ ಅಂತʼ ಎಂದಿತು. ಕಣ್ಣು ಸಣ್ಣ ಮಾಡಿ ನೋಡಿದ ಸಿಂಹಿಣಿ, ʻನಿನ್ನ ಹಣೆಬರಹ ಏನೂ ಬದಲಾಗಿಲ್ಲ ಬಿಡುʼ ಎಂದು ಕೀಟಲೆ ಮಾಡಿತು. ʻನಿನ್ ತಲೆ! ನೋಡು, ನನ್ನ ಕೂದಲೆಲ್ಲ ಉದುರಿ ತಲೆ ಬೋಳಾಗ್ತಿದೆ! ಕೇಸರಗಳೇ ಉದುರಿದರೆ ಕೇಸರಿ ಎನಿಸಿಕೊಳ್ಳೋದು ಹೇಗೆ? ಕೂದಲಿಲ್ಲದ ಸಿಂಹವನ್ನು ಯಾರು ತಾನೇ ರಾಜ ಅಂತ ಒಪ್ತಾರೆ?ʼ ಎಂದು ಸಿಕ್ಕಾಪಟ್ಟೆ ಬೇಜಾರು ಮಾಡಿಕೊಂಡಿತು ಸಿಂಹ. ಓಹೊ! ವಿಷಯ ಇದು! ಸಿಂಹಕ್ಕೆ ಕೂದಲಿಲ್ಲದಿದ್ದರೆ ಹೇಗೆ ಎನ್ನುವ ಚಿಂತೆ ರಾಜನದ್ದು ಎಂಬುದು ಸಿಂಹಿಣಿಗೆ ಅರ್ಥವಾಯಿತು. ಆದರೆ ಈ ಸಮಸ್ಯೆಗೆ ಸಮಾಧಾನ ಏನು ಎಂಬುದು ಆಕೆಗೆ ತಿಳಿಯಲಿಲ್ಲ.
ʻಸಿಂಹಿಣಿಯರಿಗೆ ನಿಮ್ ಥರ ಕೂದಲು ಇರಲ್ವಲ್ಲ. ಹಾಗಾಗಿ ಕೂದಲು ಉದುರಿ ತಲೆ ಬೋಳಾಗುವ ಸಮಸ್ಯೆ ಬಗ್ಗೆ ನಂಗೆ ಗೊತ್ತಿಲ್ಲ. ನಿನ್ನ ಸ್ನೇಹಿತರು ಯಾರನ್ನಾದ್ರೂ ಕೇಳಬಹುದಲ್ವಾ?ʼ ಸೂಚಿಸಿತು ರಾಣಿ. ʻಯಾರನ್ನ ಕೇಳೋದು ಅನ್ನೋದೇ ತಿಳೀತಿಲ್ಲʼ ಹೇಳಿತು ಸಿಂಹ. ಕೆಲಕಾಲ ಯೋಚಿಸಿದ ರಾಣಿ, ʻಕರಡಿಯನ್ನು ಕೇಳು. ಅದಕ್ಕೆ ಮೈತುಂಬಾ ಕೂದಲಿರತ್ತಲ್ಲ. ಹಂಗಾಗಿ ಕೂದಲ ಸಮಸ್ಯೆ ಬಗ್ಗೆ ಚೆನ್ನಾಗಿ ಗೊತ್ತಿರಬಹುದು ಅದಕ್ಕೆʼ ಅಂತ ತರ್ಕಿಸಿತು. ರಾಜನಿಗೂ ಇದು ಹೌದೆನಿಸಿತು. ಸಿಂಹಿಣಿಗೆ ಮನೆಯತ್ತ ಹೋಗುವುದಕ್ಕೆ ಹೇಳಿದ ರಾಜ, ತಾನು ಕರಡಿಯ ಗುಹೆಯತ್ತ ದಾಪುಗಾಲಿಟ್ಟಿತು.
ನಡುರಾತ್ರಿಯ ಹೊತ್ತದು. ಕರಡಿಯ ಗುಹೆಯಿಂದ ಜೋರಾಗಿ ಗೊರಕೆಯ ಶಬ್ದ ಕೇಳುತಿತ್ತು. ಕೊಂಚ ಕೆಮ್ಮಿ, ಕ್ಯಾಕರಿಸಿ ಗಂಟಲು ಸರಿಮಾಡಿಕೊಂಡು, ಕರಡಿಯನ್ನು ಜೋರಾಗಿ ಕರೆಯಿತು ಸಿಂಹ. ಥಟ್ಟನೆ ಗೊರಕೆ ಶಬ್ದ ನಿಂತಿತು. ಬೆನ್ನಿಗೇ ಧಪ ಧಪ ಎಂಬ ಭಾರವಾದ ಹೆಜ್ಜೆಯ ಸದ್ದು ಕೇಳಿತು. ಕಣ್ಣು ಮುಚ್ಚಿಕೊಂಡು ಜೋರಾಗಿ ಆಕಳಿಸುತ್ತಲೇ ಗುಹೆಯ ಬಾಗಿಲಿಗೆ ಬಂದ ಕರಡಿಯಣ್ಣ, ʻಯಾರಲೇ ನನ್ನ ನಿದ್ದೆ ಹಾಳು ಮಾಡಿದ್ದುʼ ಎಂದು ಜಬರಿಸಿತು. ʻನಾನು!ʼ ಅಂತು ಸಿಂಹ ಗಂಭೀರವಾಗಿ. ನಿದ್ದೆ ಹಾರಿ ಥಟ್ಟನೆ ಕಣ್ಣು ತೆರೆದ ಕರಡಿ, ʻಅರೆ! ಸಿಂಹರಾಜರು… ಈ ಸರಿ ಹೊತ್ತಿನಲ್ಲಿ! ಏನಾಯ್ತು ಸ್ವಾಮಿ?ʼ ಕೇಳಿತು. ತನ್ನ ಘನವಾದ ಸಮಸ್ಯೆಯನ್ನು ಕರಡಿಯಣ್ಣನ ಎದುರು ಹೇಳಿಕೊಂಡಿತು ಸಿಂಹ.
ಕರಡಿಗೂ ಇದಕ್ಕೆ ಪರಿಹಾರ ತಿಳಿಯಲಿಲ್ಲ. ಆದರೆ ಏನಾದರೊಂದು ಹೇಳಬೇಕಲ್ಲ. ʻಮಹಾಸ್ವಾಮಿ. ನಾವುಗಳು ಸದಾ ಜೇನು ತಿನ್ತೀವಲ್ಲ, ಅದಕ್ಕೆ ನಮಗೆ ಕೂದಲು ಉದುರಲ್ಲ ಅನ್ಸತ್ತೆ. ನೀವೂ ಸ್ವಲ್ಪ ನೋಡಿದ್ರೆ… ಹಿಹ್ಹಿಹ್ಹಿ ಒಳ್ಳೇದಿತ್ತುʼ ಎಂದಿತು. ʻಅಂದ್ರೆ ತಿನ್ನಬೇಕಾ?ʼ ಕೇಳಿತು ಸಿಂಹ. ʻಅಲ್ಲಲ್ಲ, ಅದ್ನ ಮುಖಕ್ಕೆ ಬಳ್ಕೋತೀವಿ ನಾವು. ತಾವೂ ಹಂಗೆ ಮುಖ-ಮೂತಿ, ಕೂದಲಿಗೆಲ್ಲಾ ಬಳ್ಕೊಂಡು ನೋಡಿದ್ರೆ…ʼ ಅಂತು ಕರಡಿ. ಜೇನಿನ ಪರಿಮಳವೇ ಸಿಂಹಕ್ಕೆ ಔಷಧಿಯ ನೆನಪು ತರಿಸುತ್ತಿತ್ತು. ಅಂಥದ್ದರಲ್ಲಿ ಅದನ್ನು ಕೂದಲಿಗೆಲ್ಲಾ ಬಳಿದುಕೊಳ್ಳಬೇಕೇ? ಸಾಧ್ಯವಿಲ್ಲ ಎಂದುಕೊಂಡು, ಪೆಚ್ಚಾಯ್ತು ಸಿಂಹ. ʻಅದಿಲ್ಲದಿದ್ದರೆ, ಹಲ್ಲಿ ಕೇಳಿ. ಅದು ತನ್ನ ಕಡಿದೋದ ಬಾಲವನೇ ಮತ್ತೆ ಬೆಳಸಿಕೊಳ್ಳತ್ತಲ್ಲ; ಕೂದಲೂ ಬೆಳಯೋದಕ್ಕೆ ಮದ್ದು ಹೇಳಬಹುದು ಅಂತು ಕರಡಿ. ಅದರ ಮಾತುಗಳು ಸರಿಯೆನಿಸಿದ್ದರಿಂದ, ಖುಷಿಯಿದ ಕರಡಿಯಿಂದ ಬೀಳ್ಕೊಂಡ ಸಿಂಹ. ಹಲ್ಲಿಗಳ ಮನೆಯತ್ತ ಹೆಜ್ಜೆ ಹಾಕಿತು.
ತಮ್ಮ ಮನೆಯ ಸಮೀಪ ಸಿಂಹವನ್ನು ಕಂಡು ಹಲ್ಲಿಗಳಿಗೂ ಅಚ್ಚರಿ. ಆದ್ರೆ ವಿಷಯ ತಿಳಿದ ಮೇಲೆ ಅವುಗಳಿಗೂ ಚಿಂತೆಯಾಗಿ, ಲೊಚ್‌ಗುಟ್ಟಿದವು. ಅಷ್ಟರಲ್ಲಿ ರಾಜನ ಬಳಿಗೆ ಬಂದ ಅಜ್ಜ ಹಲ್ಲಿಯೊಂದು ತಮ್ಮ ಬಾಲ ಬೆಳೆಯುವ ಗುಟ್ಟು ಬಿಚ್ಚಿಟ್ಟಿತು. ʻಮಹಾರಾಜ, ಕತ್ತರಿಸಿದ ಬಾಲ ಮತ್ತೆ ಬೆಳೀಬೇಕಂದ್ರೆ ಶಿಸ್ತಿನ ಜೀವನ ನಡೆಸಬೇಕು. ಜೊತೆಗೆ ಆಹಾರವೂ ಕಟ್ಟುನಿಟ್ಟಾಗಿರಬೇಕುʼ ಅಂತು ಹಲ್ಲಿಯಜ್ಜ. ʻಅಯ್ಯೋ! ನಾನೂ ತುಂಬ ಶಿಸ್ತಿನ ಪ್ರಾಣಿ. ಆಹಾರದಲ್ಲೂ ಪಥ್ಯ ಮಾಡಬಲ್ಲೆʼ ಎಂದಿತು ಸಿಂಹ. ʻಸರಿ ಹಾಗಿದ್ರೆ ಕೇಳಿ, ಸರಿಯಾದ ಸಮಯಕ್ಕೆ ಮಲಗಿ, ಎದ್ದು ಮಾಡಬೇಕು. ಆಹಾರವೂ ಅಷ್ಟೆ- ಹುಳ, ಹುಪ್ಪಡಿ, ನೊಣ, ಮಿಡತೆ, ಸಣ್ಣ ಜಿರಲೆಗಳ ಹೊರತಾಗಿ ಸಿಕ್ಕಿದ್ದೆಲ್ಲಾ ತಿನ್ನಂಗಿಲ್ಲʼ ಅಂತ ತಾಕೀತು ಮಾಡಿತು. ಛೀ! ಬರೀ ಹುಳ ತಿಂದು ಹೊಟ್ಟೆ ತುಂಬಿಸಿಕೊಳ್ಳಲು ತಾನೇನು ಹಲ್ಲಿಯೇ? ಅಷ್ಟು ಕಡಿಮೆ ಆಹಾರ ತನ್ನ ಹೊಟ್ಟೆಗೆಲ್ಲಿ ಸಾಕು ಎಂದು ಬೇಸರಿಸಿದ ಸಿಂಹ, ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಮರಳಿ ಹೊರಟಿತು. ಅಷ್ಟರಲ್ಲಿ ಚಿಂಕು ಮಂಗ ಎದುರಾಯ್ತು.
ನಡುರಾತ್ರಿಯಲ್ಲಿ ಸಿಂಹರಾಜ ಕಾಡಿನ ಸಂಚಾರ ಮಾಡುವುದನ್ನು ಕಂಡ ಚಿಂಕು ಮಂಗ, ಸುಮ್ಮನೆ ಸಿಂಹದ ಪಕ್ಕ ನಡೆಯತೊಡಗಿತು. ಇವರಿಬ್ಬರಲ್ಲೂ ಏನೋ ಸಲುಗೆ. ಹಾಗಾಗಿ ಮಾತಾಡುತ್ತಾ ತನ್ನ ಕಷ್ಟವನ್ನು ಚಿಂಕುವಿನಲ್ಲಿ ಹೇಳಿಕೊಂಡಿತು ಸಿಂಹರಾಜ. ʻಮಂಗಗಳಿಗೂ ಕೆಲವೊಮ್ಮೆ ಕೂದಲು ಉದುರುತ್ತದೆ. ಆದರೆ ಅದಕ್ಕೆ ನಾವು ಏನನ್ನೂ ಮಾಡೋದಿಲ್ಲʼ ಎಂದಿತು ಚಿಂಕು. ಆದರೆ ಸಿಂಹಕ್ಕೆ ಈ ಉತ್ತರದಿಂದ ಸಮಾಧಾನ ಆಗಲಿಲ್ಲ. ʻಒಂದು ಕೆಲಸ ಮಾಡಿ ದೊರೆ. ನಮ್ಮ ಕಾಡಂಚಲ್ಲಿ ಒಂದು ತೊರೆ ಹರಿಯುತ್ತದಲ್ಲ, ಅಲ್ಲಿ ಮನುಷ್ಯನೊಬ್ಬ ವಾಸಿಸುತ್ತಿದ್ದಾನೆ. ಆ ನಿರುಪದ್ರವಿ ನಮ್ಮ ಭಾಷೆಯನ್ನು ಮಾತಾಡುತ್ತಾನೆ. ಒಂಥರಾ ನಿಮ್ಮ ಕೂದಲಿನ ಬಣ್ಣದ ಬಟ್ಟೆ ಧರಿಸಿಕೊಂಡು ಅಲ್ಲೇ ಧ್ಯಾನದಲ್ಲಿ ಇರ್ತಾನೆ. ಕೆಲವೊಮ್ಮೆ ಬೇರೆ ಮನುಷ್ಯರೂ ಬಂದು ಅವನತ್ರ ತಮ್ಮ ಕಷ್ಟ ಹೇಳಿಕೊಳ್ಳುವುದನ್ನು ಕಂಡಿದ್ದೇನೆ. ನಿಮ್ಮ ಕಷ್ಟಕ್ಕೂ ಪರಿಹಾರ ಇರಬಹುದು ಅವನತ್ರʼ ಎಂದಿತು ಚಿಂಕು ಮಂಗ. ಇದನ್ನೂ ಏಕೆ ಪ್ರಯತ್ನಿಸಬಾರದು ಎನಿಸಿತು ಸಿಂಹಕ್ಕೆ.
ಇದನ್ನೂ ಓದಿ: Kids Story with Audio : ಕರಡಿಯಮ್ಮನ ಮಗಳ ಬರ್ತ್‌ಡೇಗೆ ಹೋದ ಚಿಂಟು ಜಿರಾಫೆ ಮತ್ತು ಗೆಳೆಯರು
ಬೆಳಗಾಗುವರೆಗೆ ಕಾಯುವ ವ್ಯವಧಾನವಿಲ್ಲದೇ ಆ ಕಾವಿ ಬಟ್ಟೆಯ ಮನುಷ್ಯನ ಮನೆಯ ಬಾಗಿಲು ತಟ್ಟಿತು ಸಿಂಹ. ಬಾಗಿಲು ತೆರೆದ ಆ ವ್ಯಕ್ತಿ ಅಚ್ಚರಿಕೊಂಡರೂ, ಸಿಂಹವನ್ನು ಸ್ವಾಗತಿಸಿದ. ʻರಾತ್ರಿ ಇಷ್ಟೊತ್ತಿಗೆ ನಮ್ಮನೆಯ ಬಾಗಿಲಿಗೆ ಮಹಾರಾಜರು ಬಂದಿದ್ದೇಕೆ?ʼ ಎಂದೆಲ್ಲಾ ಸಿಂಹವನ್ನು ಆತ ಉಪಚರಿಸಿದ. ʻನಿಮ್ಮನ್ನು ನಾನು ನೋಡುತ್ತಿರುವುದು ಇದೇ ಮೊದಲು. ಆದರೂ ನನ್ನ ಪರಿಚಯ ಇದ್ದವರಂತೆ ಮಾತಾಡ್ತೀರಿ. ನಿಮ್ಮ ಹೆಸರೇನು?ʼ ಕೇಳಿತು ಸಿಂಹ. ʻಜನ ನನ್ನನ್ನು ಗುರೂಜಿ ಅಂತ ಕರೀತಾರೆʼ ಹೇಳಿದರು ಆ ವ್ಯಕ್ತಿ. ಅಷ್ಟರಲ್ಲಿ ಸಿಂಹಕ್ಕೆ ಅಳುವಷ್ಟು ದುಃಖವಾಗುವ ದೃಶ್ಯವೊಂದು ಕಣ್ಣಿಗೆ ಬಿತ್ತು. ಆ ಗುರೂಜಿಯ ತಲೆ ಸಂಪೂರ್ಣ ಬೋಳಾಗಿತ್ತು! ಇವರಿನ್ನೇನು ಪರಿಹಾರ ಕೊಡುತ್ತಾರೆ ಎಂದು ಸಿಂಹ ಅಳುಮುಖ ಮಾಡಿ ಕೂತುಬಿಟ್ಟಿತು. ಗುರೂಜಿ ಬಂದ ಕಾರಣವೇನೆಂದು ಮತ್ತೆ ಕೇಳಿದರು.
ʻಬೇರೆಯವರ ಸಮಸ್ಯೆಗೆ ನೀವು ಪರಿಹಾರ ಕೊಡುತ್ತೀರಂತೆ. ಆದರೆ ನನ್ನಂಥದ್ದೇ ಸಮಸ್ಯೆಯಲ್ಲಿ ನೀವೂ ಇರುವಾಗ… ನಿಮ್ಮಲ್ಲಿ ಪರಿಹಾರ ಇಲ್ಲ ಅನಿಸುತ್ತಿದೆʼ ಶೋಕದಿಂದ ಹೇಳಿತು ಸಿಂಹ. ʻಆದರೆ ನನಗೇನೂ ಸಮಸ್ಯೆ ಇಲ್ಲವಲ್ಲ! ಇನ್ನು ಮಹಾರಾಜರ ಸಮಸ್ಯೆ… ಪರಿಹಾರಕ್ಕೆ ಪ್ರಯತ್ನಿಸುತ್ತೇನೆʼ ಎಂದರು ಗುರೂಜಿ. ʻನನಗೆ ಕೂದಲು ಉದುರುತ್ತಿದೆ ಎಂದು ಆತಂಕದಿಂದ ಇಲ್ಲಿಗೆ ಬಂದೆ. ಆದರೆ ನಿಮ್ಮ ತಲೆ ಈಗಾಗಲೇ ಬೋಳಾಗಿದೆ. ಇದರರ್ಥ ನಿಮ್ಮಲ್ಲಿ ಈ ಸಮಸ್ಯೆಗೆ ಪರಿಹಾರ ಇಲ್ಲವೆಂದಾಯ್ತುʼ ಎಂದು ಗೋಳಾಡಿತು ಸಿಂಹ. ʻಇದಾ ವಿಷಯ! ಕೂದಲು ಉದುರುವುದು ಒಂದು ಸಮಸ್ಯೆ ಅನಿಸಿಯೇ ಇಲ್ಲ ನನಗೆ. ಸಮಸ್ಯೆಯೇ ಇಲ್ಲದ ಮೇಲೆ ಪರಿಹಾರ ಯಾವುದಕ್ಕೆ ಹುಡುಕಬೇಕು?ʼ ಕೇಳಿದರು ಗುರೂಜಿ. ಸಿಂಹದ ಬಳಿ ಉತ್ತರ ಇರಲಿಲ್ಲ. ಆದರೆ ಅದಕ್ಕೆ ಸಮಾಧಾನವೂ ಆಗಲಿಲ್ಲ.
ʻಕೂದಲು ಬೆಳೆಯುವಂಥ ಔಷಧಗಳು ಇಲ್ಲವೆಂದಲ್ಲ. ಆದರೆ ಔಷಧಿ ತೆಗೆದುಕೊಳ್ಳವಂಥ ರೋಗವಲ್ಲ ಇದು. ನೋಡಿ ಮಹಾರಾಜರೆ, ಕೂದಲು ಇದ್ದರೂ ಇಲ್ಲದಿದ್ದರೂ ನೀವು ಕಾಡಿನ ದೊರೆಯೇ ತಾನೆ?ʼ ಗುರೂಜಿ ಪ್ರಶ್ನಿಸಿದರು. ʻಹೌದು. ಆದರೆ ಕೂದಲಿಲ್ಲದ ಸಿಂಹವನ್ನು ರಾಜನೆಂದು ಪ್ರಜೆಗಳು ಒಪ್ಪದಿದ್ದರೆ? ಬೋಳು ಮಂಡೆಯ ರಾಜ ಅವರಿಗೆ ಬೇಡ ಎನಿಸಿದರೆ? ರಾಜನನ್ನು ಗೌರವಿಸದಿದ್ದರೆ…?ʼ ಸಿಂಹ ಮತ್ತೆ ಪ್ರಶ್ನಿಸಿತು. ʻಇಲ್ಲದ ಸಮಸ್ಯೆಯನ್ನು ನೀವೇ ನಿಮ್ಮ ಮನಸ್ಸಿನಲ್ಲಿ ಹುಟ್ಟಿಸಿಕೊಳ್ಳುತ್ತಿದ್ದೀರಿ! ನಿಮ್ಮ ಪ್ರಜೆಗಳು ಹೀಗೆಲ್ಲಾ ಹೇಳಿಲ್ಲವಲ್ಲ. ಇಷ್ಟಕ್ಕೂ, ರಾಜನಾಗಿ ನೀವು ಮಾಡುವ ಕೆಲಸಗಳೇನು?ʼ ಗುರೂಜಿ ಕೇಳಿದರು.
ʻಪ್ರಜೆಗಳ ಕುಂದು-ಕೊರತೆ ನಿವಾರಣೆ ಮಾಡುವುದು. ಅವರನ್ನು ಚೆನ್ನಾಗಿ ನೋಡಿಕೊಳ್ಳುವುದುʼ ಸಿಂಹ ಉತ್ತರಿಸಿತು. ʻಕೂದಲು ಇದ್ದರೂ- ಇಲ್ಲದಿದ್ದರೂ, ನೀವು ಮಾಡುವುದು ಅದನ್ನೇ ಅಲ್ಲವೇ? ಇದರಲ್ಲಿ ನಿಮ್ಮ ಕೂದಲಿನ ಪಾತ್ರವೇನು? ನಿಮ್ಮ ರೂಪ ಬದಲಾದರೆ ನಿಮ್ಮ ಸ್ವಭಾವ ಬದಲಾಗುತ್ತದೆಯೇ?ʼ ಗುರೂಜಿಯ ಪ್ರಶ್ನೆಗಳು ಮುಂದುವರೆದವು.
ಸಿಂಹ ಯೋಚಿಸತೊಡಗಿತು- ʻಹೌದಲ್ಲ! ನನ್ನ ರೂಪ ಬದಲಾದ ತಕ್ಷಣ ನಾನು ಬದಲಾಗುವುದಿಲ್ಲ. ಕೂದಲಿದ್ದರೂ, ಇಲ್ಲದಿದ್ದರೂ ಪ್ರಜೆಗಳ ಬಗ್ಗೆ ಇದೇ ಪ್ರೀತಿ, ಕಾಳಜಿ ಇರುತ್ತದೆ ನನ್ನಲ್ಲಿ. ಅಂದ ಮೇಲೆ ಪ್ರಜೆಗಳೂ ನನ್ನನ್ನು ಗೌರವಿಸುತ್ತಾರೆ. ಛೇ! ನಾ ಮಾಡುವ ಕೆಲಸಕ್ಕೂ ತಲೆಯ ಕೂದಲಿಗೂ ಯಾವ ನಂಟೂ ಇಲ್ಲ. ಇಷ್ಟೂ ದಿನ ಸುಮ್ನೆ ಕೊರಗಿದೆʼ ಎನಿಸಿತು ಸಿಂಹಕ್ಕೆ.
ʻಗುರೂಜಿ. ನನ್ನ ಕಣ್ಣು ತೆರೆಸಿದಿರಿ. ಸುಮ್ಮನೆ ಕೊರಗುತ್ತಿದ್ದೆ. ನನ್ನ ರೂಪ ಬದಲಾದರೆ ನನ್ನ ಗುಣ- ಸ್ವಭಾವಗಳು ಬದಲಾಗುವುದಿಲ್ಲ. ಪ್ರಜೆಗಳು ನನ್ನನ್ನು ಗೌರವಿಸುವುದು ಕೂದಲನ್ನು ನೋಡಿ ಅಲ್ಲ, ಕೆಲಸವನ್ನು ನೋಡಿ ಎಂಬುದು ಅರ್ಥವಾಗಿದೆ. ಧನ್ಯವಾದಗಳುʼ ಎಂದ ಸಿಂಹ ಸಂತೋಷದಿಂದ ಕಾಡಿನತ್ತ ನಡೆಯಿತು.