ನವದೆಹಲಿ: ಬ್ರಿಟಿಷರ ವಿರುದ್ಧದ ಸಮರದಲ್ಲಿ ಐತಿಹಾಸಿಕ ವಿಜಯ ಸಾಧಿಸಿದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ (Kittur Rani Chennamma) ಗೌರವಾರ್ಥ ಅಂಚೆ ಚೀಟಿ ಬಿಡುಗಡೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಸಮರ ಸಾರಿ ಮೊದಲ ಗೆಲುವು ಸಾಧಿಸಿದ ದಿನ ಅಕ್ಟೋಬರ್ 23. ಈ ಐತಿಹಾಸಿಕ ವಿಜಯಕ್ಕೀಗ 200 ವರ್ಷ ಸಂದಲಿದ್ದು, ಇದರ ಜ್ಞಾಪಕಾರ್ಥವಾಗಿ ಕೇಂದ್ರ ಸರ್ಕಾರ ಚೆನ್ನಮ್ಮಳ ಅಂಚೆ ಚೀಟಿ ಬಿಡುಗಡೆ ಮಾಡುತ್ತಿದೆ. ಕೇಂದ್ರ ಸರ್ಕಾರ (Central Government) ಇದೇ ಅ.23ರಂದು ಕಿತ್ತೂರು ರಾಣಿ ಚೆನ್ನಮ್ಮ ಅಂಚೆ ಚೀಟಿ ಬಿಡುಗಡೆ ಮಾಡಲಿದ್ದು, ಈ ಮೂಲಕ ರಾಣಿ ಚೆನ್ನಮ್ಮ ಮತ್ತು ಕನ್ನಡ ನಾಡಿಗೆ ಅಭೂತಪೂರ್ವ ಗೌರವ ಸಲ್ಲಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದ್ದಾರೆ.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಅರವಿಂದ ಬೆಲ್ಲದ, ಅಭಯ್ ಪಾಟೀಲ್, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ಕಿತ್ತೂರು ಕರ್ನಾಟಕ ಭಾಗದ ಪ್ರಮುಖರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
ಈ ಸುದ್ದಿಯನ್ನೂ ಓದಿ | R Ashok: ಚನ್ನಪಟ್ಟಣ ಉಪಚುನಾವಣೆ; ಎನ್‌ಡಿಎ ಅಭ್ಯರ್ಥಿಗೆ ಟಿಕೆಟ್ ಎಂದ ಆರ್. ಅಶೋಕ್
ಮನವಿಗೆ ತ್ವರಿತ ಸ್ಪಂದನೆ
ಮನವಿ ಪುರಸ್ಕರಿಸಿದ ಕೇಂದ್ರ ಸರ್ಕಾರ ಕಿತ್ತೂರು ರಾಣಿ ಚೆನ್ನಮ್ಮ ಅಂಚೆ ಚೀಟಿ ಬಿಡುಗಡೆಗೆ ತ್ವರಿತ ನಿರ್ಣಯ ಕೈಗೊಂಡಿದ್ದು, ಬ್ರಿಟಿಷ್ ವಿರುದ್ಧ ಮೊದಲ ಗೆಲುವು ಸಾಧಿಸಿದ ಐತಿಹಾಸಿಕ ದಿನದಂದೇ ಬಿಡುಗಡೆಗೊಳಿಸಲು ಕ್ರಮ ಕೈಗೊಂಡಿದೆ ಎಂದು ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಅ.23ರಂದು ವಿದ್ಯುತ್ ವ್ಯತ್ಯಯ
ಕೇಂದ್ರ ಸರ್ಕಾರ ತ್ವರಿತ ನಿರ್ಣಯ ಕೈಗೊಂಡು ರಾಣಿ ಚೆನ್ನಮ್ಮ ಅಂಚೆ ಚೀಟಿ ಬಿಡುಗಡೆ ಮೂಲಕ ವೀರ ವನಿತೆಗೆ ಗೌರವ ಸಲ್ಲಿಸುತ್ತಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದ್ಯಾ ಹಾಗೂ ಕೇಂದ್ರ ಸಂವಹನಾ ಸಚಿವಾಲಯಕ್ಕೆ ಹೃತ್ಪೂರ್ವಕ ಧನ್ಯವಾದಗಳು ಎಂದು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.