ಕೋಲಾರ: ಕೋಲಾರ (Kolar News) ನಗರದ ಬಳಿ ರೈಲು ಹಳಿಯಲ್ಲಿ ಯುವಕನೊಬ್ಬನ ಜೊತೆ ಮಂಗಳಮುಖಿಯ ಶವ ನಿಗೂಢ ರೀತಿಯಲ್ಲಿ ಪತ್ತೆಯಾಗಿದೆ. ಇಬ್ಬರೂ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರಾ ಅಥವಾ ಆಕಸ್ಮಿಕವಾಗಿ ರೈಲಿಗೆ ಸಿಲುಕಿ ಸತ್ತಿದ್ದಾರಾ ಎಂಬುದು ಇನ್ನೂ ತಿಳಿದುಬಂದಿಲ್ಲ.
ಖಾದ್ರಿಪುರ ಮೂಲದ ವಸೀಂ ಅಲಿಯಾಸ್ ಆಲಿಯಾ ಮೃತಪಟ್ಟ ಮಂಗಳಮುಖಿ ಅಯಾಜ್ ಎನ್ನುವ ಮೆಕಾನಿಕ್ ಜೊತೆಗೆ ಸಾವು ಕಂಡಿದ್ದಾರೆ. ಇಬ್ಬರ ಶವ ಕೋಲಾರ ನಗರದ ಕೀಲುಕೋಟೆ ರೈಲ್ವೇ ಹಳಿಯಲ್ಲಿ ಪತ್ತೆಯಾಗಿವೆ. ವಸೀಂ,ಆಲಿಯಾ ಆಗಿ ಒಂದು ವರ್ಷ ತುಂಬುತ್ತಿದ್ದ ಹಿನ್ನೆಲೆಯಲ್ಲಿ ಸರ್ಜನ್ ಮಾತಾ ಪೂಜೆ ಆಯೋಜಿಸಿದ್ದಳು. ಆದರೆ ದುರಂತ ಅಂತ್ಯಕಂಡಿದ್ದಾಳೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇಬ್ಬರ ಶವಗಳು ಅಕ್ಕಪಕ್ಕದಲ್ಲೇ ಬಿದ್ದಿದ್ದು, ಸ್ಥಳದಲ್ಲೇ ಬಿಯರ್ ಬಾಟಲಿ, ಮದ್ಯದ ಪ್ಯಾಕೇಟ್, ಕಬಾಬ್, ವಿಮಲ್ ಗುಟ್ಕಾ ಪ್ಯಾಕೇಟ್ ಸೇರಿದಂತೆ ಆಲಿಯಾಳ ಕಲೆಕ್ಷನ್ ಆಗಿದ್ದ ಹಣ ಸಹ ರೈಲ್ವೇ ಹಳಿಯಲ್ಲಿ ಬಿದ್ದಿದೆ. ಹೀಗಾಗಿ ಇಬ್ಬರು ಕುಡಿದ ಮತ್ತಿನಲ್ಲಿದ್ದಾಗ ರೈಲು ಗುದ್ದಿಕೊಂಡು ಹೋಗಿರಬಹುದು ಎಂದು ಕೂಡ ಶಂಕಿಸಲಾಗಿದೆ. ಆತ್ಮಹತ್ಯೆ ಸಾಧ್ಯತೆಯನ್ನೂ ತಳ್ಳಿಹಾಕಲಾಗಿಲ್ಲ.
15 ವರ್ಷಗಳಿಂದ ಮಂಗಳಮುಖಿಯರ ಸಮರ ಸಂಗಮ ಗ್ರೂಪ್ ನಲ್ಲಿದ್ದ ವಸೀಂ, ಆಲಿಯಾ ಆಗಿ ಬದಲಾಗಿ ಡಿಸೆಂಬರ್ 17ಕ್ಕೆ 1 ವರ್ಷ ಪೂರೈಸಲಿದೆ. ಹಾಗಾಗಿ ಮಂಗಳವಾರ ಸರ್ಜರಿ ಮಾತಾ ಪೂಜೆ ಮಾಡುಲು ಎಲ್ಲಾ ಏರ್ಪಾಟುಗಳನ್ನು ಮಾಡಿಕೊಳ್ಳಲಾಗಿತ್ತಂತೆ. ಅದಕ್ಕೆ ಆಲಿಯಾ ಹತ್ತಿರದ ಸ್ನೇಹಿತರಿಗೆ ಆಹ್ವಾನ ಮಾಡಿದ್ದಳು. ಸಮರ ಸಂಗಮ ಮುಖ್ಯಸ್ಥೆ ಸಮೀರಾ ಜೊತೆಗೆ ಎರಡು ದಿನಗಳ ಹಿಂದೆ ಬೆಂಗಳೂರಿಗೆ ತೆರಳಿ ಚಿಕಿತ್ಸೆ ಪಡೆದು ಸರ್ಜರಿ ಮಾತಾ ಪೂಜೆಗೂ ಬೇಕಾದ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿತ್ತು.ಆದ್ರೆ ನಿನ್ನೆ (ಡಿಸೆಂಬರ್ 12) ಬೆಳಗ್ಗೆ ಎಂದಿನಂತೆ ಕೋಲಾರ ಬಸ್ ನಿಲ್ದಾಣಕ್ಕೆ ಭಿಕ್ಷಾಟನೆಗೆ ಹೋದ ಆಲಿಯಾ ವಾಪಸ್ ಮನೆಗೆ ಬಂದಿಲ್ಲ.
ಆಲಿಯಾಗೆ ಕುಟುಂಬ ಪೋಷಣೆ ಜವಬ್ದಾರಿ ಇತ್ತು. ಹಾಗಾಗಿ ಆಲಿಯಾ ತಮ್ಮ ಸ್ನೇಹಿತರೊಂದಿಗೆ ಇರದೆ ಖಾದ್ರಿಪುರದ ತಂದೆ-ತಾಯಿ ಹಾಗೂ ಅಕ್ಕನೊಂದಿಗೆ ಹೆಚ್ಚಾಗಿ ಇರುತ್ತಿದ್ದಳು. ಸಂಜೆ ಮನೆಗೆ ಬರುವುದಾಗಿ ಹೇಳಿ ಹೋಗಿದ್ದ ಆಲಿಯಾ ಮನೆಗೆ ಬಂದಿಲ್ಲ .ಬೆಳಗ್ಗೆ ನೋಡಿದ್ರೆ ಹೆಣವಾಗಿದ್ದಾಳೆ ಎನ್ನುವುದು ಅಕ್ಕ ಹಾಗೂ ಸ್ನೇಹಿತೆ ವಾಸಖಿ ಮಾತು. ಇನ್ನು ಬಂಗಾರಪೇಟೆ ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.