Friday, 22nd November 2024

KPSC Exam: ಗ್ರೂಪ್‌-ಬಿ ಹುದ್ದೆಗಳ ನೇಮಕಾತಿ; ಸೆ.14ರ ಕಡ್ಡಾಯ ಕನ್ನಡ ಪರೀಕ್ಷೆಯಿಂದ ಈ ಅಭ್ಯರ್ಥಿಗಳಿಗೆ ವಿನಾಯಿತಿ

KPSC Exam

ಬೆಂಗಳೂರು: ಸೆ.14 ಮತ್ತು 15ರಂದು ನಡೆಯಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಲ ಸಂಪನ್ಮೂಲ ಇಲಾಖೆ, ಬಿಬಿಎಂಪಿ ಸೇರಿ ವಿವಿಧ ಇಲಾಖೆಗಳಲ್ಲಿನ ಗ್ರೂಪ್‌-ಬಿ ಹುದ್ದೆಗಳ ನೇಮಕಾತಿ ಪರೀಕ್ಷೆಗೆ (KPSC Group B Exam) ಕೆಪಿಎಸ್‌ಸಿಯಿಂದ ಈಗಾಗಲೇ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ. ಆದರೆ, ಸೆ.14ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಇರುವುದರಿಂದ, ಯಾರೆಲ್ಲಾ ಪರೀಕ್ಷೆ ಬರೆಯಬೇಕು ಎಂದು ಅಭ್ಯರ್ಥಿಗಳಲ್ಲಿ ಗೊಂದಲ ಉಂಟಾಗಿದೆ. ಹೀಗಾಗಿ 2024ರ ಜ.20ರಂದು ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗಳಿಗೆ ನಡೆದಿದ್ದ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ (KPSC Exam) ವಿನಾಯಿತಿ ನೀಡಿದೆ.

ಈ ಬಗ್ಗೆ ಕೆಪಿಎಸ್‌ಸಿ ಪ್ರಕಟಣೆ ಹೊರಡಿಸಿದೆ. 2024ರ ಮಾ.13ರಂದು ಅಧಿಸೂಚಿಸಿರುವ ಉಳಿಕೆ ಮೂಲ ವೃಂದದಲ್ಲಿನ ವಿವಿಧ ಗ್ರೂಪ್ ಬಿ ಹುದ್ದೆಗಳಿಗೆ ಸೆ.14 ಮತ್ತು 15ರಂದು ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯ್ದ 15 ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ.

ಕನ್ನಡ ಭಾಷಾ ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರಡಿ ಈಗಾಗಲೇ ವಾಣಿಜ್ಯ ತೆರಿಗೆ ಇಲಾಖೆಯಲ್ಲಿನ ವಾಣಿಜ್ಯ ತೆರಿಗೆ ಪರಿವೀಕ್ಷಕರು (Commercial Tax Inspector) ಹುದ್ದೆಗಳಿಗೆ 2024ರ ಜ.20ರಂದು ನಡೆಸಲಾದ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಲ್ಲಿ, ಪ್ರಸ್ತುತ ಸೆ.14ರಂದು ನಡೆಸುವ ಕನ್ನಡ ಭಾಷಾ ಪರೀಕ್ಷೆಗೆ ಹಾಜರಾಗುವುದರಿಂದ ವಿನಾಯಿತಿ ಸಿಗಲಿದೆ. ಆದಾಗ್ಯೂ ಒಂದು ವೇಳೆ ಸೆ.14 ನಡೆಸುವ ಕನ್ನಡ ಭಾಷಾ ಪರೀಕ್ಷೆಗೆ ಹಾಜರಾದಲ್ಲಿ, ಈ ಬಾರಿಯ ಪರೀಕ್ಷೆಯ ಫಲಿತಾಂಶವನ್ನೇ ಅಂತಿಮವೆಂದು ಪರಿಗಣಿಸಲಾಗುವುದು ಎಂದು ಕರ್ನಾಟಕ ಲೋಕಸೇವಾ ಆಯೋಗ ತಿಳಿಸಿದೆ.

ಅಭ್ಯರ್ಥಿಗಳು ಈಗಾಗಲೇ ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಲಾಗಿರುವ ವಾಣಿಜ್ಯ ತೆರಿಗೆ ಪರಿವೀಕ್ಷಕರು (Commercial Tax Inspector) ಹುದ್ದೆಗಳ ಕನ್ನಡ ಭಾಷಾ ಪರೀಕ್ಷಾ ಫಲಿತಾಂಶವನ್ನು ಸ್ವತಃ
ಖಚಿತಪಡಿಸಿಕೊಂಡು, ಪ್ರಸ್ತುತ ಕನ್ನಡ ಬಾಷಾ ಪರೀಕ್ಷೆಗೆ ಹಾಜರಾಗುವುದು ಅಥವಾ ಗೈರು ಹಾಜರಾಗುವುದು
ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ ಎಂದು ಕೆಪಿಎಸ್‌ಸಿ ತಿಳಿಸಿದೆ.

ಯಾರೆಲ್ಲಾ ಕನ್ನಡ ಭಾಷಾ ಪರೀಕ್ಷೆ ಬರೆಯಬೇಕು?

ಕನ್ನಡ ಭಾಷಾ ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು 29-11-2022ರ ಕನ್ನಡ ಭಾಷಾ ಪರೀಕ್ಷೆಯ ಫಲಿತಾಂಶವನ್ನು ಈ ಅಧಿಸೂಚನೆಯಲ್ಲಿನ ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆಗೂ ಪರಿಗಣಿಸಲಾಗುತ್ತದೆ. ಇದಕ್ಕಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಆನ್ ಲೈನ್ ಅರ್ಜಿಯ ನಿಗದಿತ ಅಂಕಣದಲ್ಲಿ ಕನ್ನಡ ಭಾಷಾ ಪರೀಕ್ಷೆ ಅರ್ಹರಾಗಿರುವ ಬಗ್ಗೆ ಮಾಹಿತಿ ನಮೂದಿಸಿರಬೇಕು. ಅಂತಹವರಿಗೆ ಮಾತ್ರ ಪರೀಕ್ಷೆಯಿಂದ ವಿನಾಯಿತಿ ಸಿಗಲಿದ್ದು, ಉಳಿದವರೆಲ್ಲಾ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ.

ಕನ್ನಡ ಭಾಷಾ ಪರೀಕ್ಷೆ ಹೇಗಿರುತ್ತದೆ?

ಗ್ರೂಪ್‌-ಬಿ ಹುದ್ದೆಗಳಿಗೆ ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರ ನಿಯಮ ಉಪ ನಿಯಮ-7 ರಲ್ಲಿ ನಿರ್ದಿಷ್ಟ ಪಡಿಸಲಾದಂತೆ, ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲಿ ಅರ್ಹತೆಯನ್ನು ಪಡೆಯದ ಹೊರತು ಆಯ್ಕೆಗೆ ಅರ್ಹರಾಗುವುದಿಲ್ಲ. ಈ ಪರೀಕ್ಷೆಯು ಗರಿಷ್ಠ 150 ಅಂಕಗಳ ಒಂದು ಪ್ರಶ್ನೆ ಪತ್ರಿಕೆಯನ್ನು ಒಳಗೊಂಡಿದ್ದು, ಅಭ್ಯರ್ಥಿಯು ಈ ಪತ್ರಿಕೆಯಲ್ಲಿ ಅರ್ಹತೆ ಹೊಂದಲು ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಈ ಪ್ರಶ್ನೆ, ಪತ್ರಿಕೆಯನ್ನು ಎಸ್.ಎಸ್.ಎಲ್.ಸಿ. ಹಂತದಲ್ಲಿನ ಪ್ರಥಮ ಭಾಷೆ ಕನ್ನಡವನ್ನು ಮಾನದಂಡವನ್ನಾಗಿಟ್ಟುಕೊಂಡು ಸಿದ್ಧಪಡಿಸಲಾಗುತ್ತದೆ.

ಸೆ.15ರಂದು ಸ್ಪರ್ಧಾತ್ಮಕ ಪರೀಕ್ಷೆ

ಇನ್ನು ಸೆ.15ರಂದು ಸಾಮಾನ್ಯ ಪತ್ರಿಕೆ-1‌, ನಿರ್ದಿಷ್ಟ ಪತ್ರಿಕೆ -2 ಒಳಗೊಂಡ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪರೀಕ್ಷೆಯು ತಲಾ 300 ಅಂಕಗಳ ಎರಡು ಪ್ರಶ್ನೆ ಪತ್ರಿಕೆ (ಸಾಮಾನ್ಯ ಪತ್ರಿಕೆ-1‌, ನಿರ್ದಿಷ್ಟ ಪತ್ರಿಕೆ -2) ಒಳಗೊಂಡಿರುತ್ತದೆ. ಪತ್ರಿಕೆ-1ರಲ್ಲಿ ಪ್ರಚಲಿತ ವಿದ್ಯಮಾನ, ಸಾಮಾನ್ಯ ವಿಜ್ಞಾನ, ಭಾರತ ಹಾಗೂ ಕರ್ನಾಟಕದ ಇತಿಹಾಸ, ಭೂಗೋಳ ಶಾಸ್ತ್ರ, ಸಮಾಜ ವಿಜ್ಞಾನ, ಬೌದ್ಧಿಕ ಸಾಮರ್ಥ್ಯ, ದೈನಂದಿನ ಗ್ರಹಿಕೆ ವಿಷಯಗಳು ಇರಲಿವೆ. ಇನ್ನು ಪತ್ರಿಕೆ-2 ನಿರ್ದಿಷ್ಟ ಪತ್ರಿಕೆಯಾಗಿದ್ದು, ಆಯಾ ಇಲಾಖೆಯ ಹುದ್ದೆಗಳಿಗೆ ಸಂಬಂಧಿಸಿದಂತೆ ಪಠ್ಯಕ್ರಮ ನೀಡಲಾಗಿದ್ದು, ಕೆಪಿಎಸ್‌ಸಿ ಅಧಿಸೂಚನೆಯಲ್ಲಿ ಪಠ್ಯಕ್ರಮ ನೀಡಲಾಗಿದೆ.

ಈ ಸುದ್ದಿಯನ್ನೂ ಓದಿ | KPSC Group B Exam: ಕೆಪಿಎಸ್‌ಸಿ ಗ್ರೂಪ್‌-ಬಿ ಹುದ್ದೆಗಳ ಪರೀಕ್ಷೆ ಹಾಲ್‌ ಟಿಕೆಟ್‌ ಬಿಡುಗಡೆ; ಡೌನ್‌ಲೋಡ್‌ ವಿಧಾನ ಇಲ್ಲಿದೆ

ಹಾಲ್‌ ಟಿಕೆಟ್‌ ಬಿಡುಗಡೆ

ಸೆ.14 ಮತ್ತು 15ರಂದು ನಡೆಯಲಿರುವ ಬಿಬಿಎಂಪಿ, ಜಲ ಸಂಪನ್ಮೂಲ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿನ ಗ್ರೂಪ್‌-ಬಿ ಹುದ್ದೆಗಳ ನೇಮಕಾತಿ ಪರೀಕ್ಷೆಗೆ (KPSC Group B Exam) ಕೆಪಿಎಸ್‌ಸಿಯಿಂದ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ. ಸೆ.5ರಂದೇ ಪ್ರವೇಶ ಪತ್ರ ಬಿಡುಗಡೆಯಾದರೂ ತಾಂತ್ರಿಕ ಕಾರಣಗಳಿಂದ ತಾತ್ಕಾಲಿಕವಾಗಿ ಹಾಲ್‌ ಟಿಕೆಟ್ ಡೌನ್ ಲೋಡ್ ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಇದೀಗ ಸಮಸ್ಯೆ ಬಗೆಹರಿದ ಹಿನ್ನೆಲೆಯಲ್ಲಿ ಹೊಸದಾಗಿ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಕೆಪಿಎಸ್‌ಸಿ ಸೂಚಿಸಿದೆ.