Sunday, 15th December 2024

KPSC Group B Exam: ಸೆ.14, 15ರ ಕೆಪಿಎಸ್‌ಸಿ ಗ್ರೂಪ್‌ ಬಿ ಹುದ್ದೆಗಳ ಪರೀಕ್ಷೆ ಮುಂದೂಡಿಕೆ!

KPSC Group B Exam

ಬೆಂಗಳೂರು: ವಿವಿಧ ಇಲಾಖೆಗಳಲ್ಲಿನ ಗ್ರೂಪ್ – ಬಿ ಹುದ್ದೆಗಳಿಗೆ ಸೆ.14 ಮತ್ತು 15ರಂದು ನಿಗದಿಯಾಗಿದ್ದ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಮುಂದೂಡಿಕೆಯಾಗಿದೆ. ರಾಜ್ಯ ಸರ್ಕಾರವು ಗ್ರೂಪ್‌ ಬಿ ಮತ್ತು ಸಿ ಹುದ್ದೆಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವುದರಿಂದ ಹೊಸದಾಗಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಬೇಕಾದ ಹಿನ್ನೆಲೆಯಲ್ಲಿ ಗ್ರೂಪ್ – ಬಿ ಹುದ್ದೆಗಳ ನೇಮಕಾತಿ ಪರೀಕ್ಷೆ ಮುಂದೂಡಲಾಗಿದೆ.

ಈ ಬಗ್ಗೆ ಕೆಪಿಎಸ್‌ಸಿ ಪ್ರಕಟಣೆ ಹೊರಡಿಸಿದ್ದು, 2024ರ ಮಾರ್ಚ್‌ 13ರಂದು ಅಧಿಸೂಚಿಸಿರುವ ಉಳಿಕೆ ಮೂಲ ವೃಂದದಲ್ಲಿನ ವಿವಿಧ ಗ್ರೂಪ್ – ಬಿ ಹುದ್ದೆಗಳಿಗೆ ಸೆ. 14 ಮತ್ತು 15 ರಂದು ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿ ಅಭ್ಯರ್ಥಿಗಳನ್ನು ಪರೀಕ್ಷಾ ಉಪ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿತ್ತು.

ಈ ಮಧ್ಯೆ ಸೆ.10ರಂದು ಕರ್ನಾಟಕ ಸರ್ಕಾರವು ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಹೊರಡಿಸಲಾಗಿರುವ ಅಧಿಸೂಚನೆಗಳಿಗೆ ಹಾಗೂ ಮುಂದಿನ ಒಂದು ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ, ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಿ ಆದೇಶಿಸಿದೆ. ಹೀಗಾಗಿ ಗ್ರೂಪ್‌ ಬಿ ಹುದ್ದೆಗಳ ನೇಮಕಾತಿಗೂ ವಯೋಮಿತಿ ಸಡಿಲಿಕೆ ಅನ್ವಯಿಸಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕಾಗಿರುತ್ತದೆ. ಆದ್ದರಿಂದ ಸೆ.14ರ ಕನ್ನಡ ಭಾಷಾ ಪರೀಕ್ಷೆ ಮತ್ತು 15ರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಈ ಅಧಿಸೂಚನೆಯಲ್ಲಿನ ಹುದ್ದೆಗಳಿಗೆ ಇತರೆ ದಿನಾಂಕಗಳಲ್ಲಿ ನಿಗದಿಪಡಿಲಾಗಿದ್ದ, ನಿರ್ದಿಷ್ಟ ಪತ್ರಿಕೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ. ಸರ್ಕಾರದ ಆದೇಶದಂತೆ ವಯೋಮಿತಿ ಸಡಿಲಿಕೆ ನೀಡಿ, ಅಭ್ಯರ್ಥಿಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಕಾಲಾವಾಕಾಶ ಮುಕ್ತಾಯವಾದ ನಂತರ ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ತಿಳಿಸಲಾಗುವುದು ಎಂದು ಕರ್ನಾಟಕ ಲೋಕ ಸೇವಾ ಆಯೋಗ ಮಾಹಿತಿ ನೀಡಿದೆ.

ಈ ಸುದ್ದಿಯನ್ನೂ ಓದಿ | Government Job News: ವಯೋಮಿತಿ ಮೀರಿದ ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಗುಡ್‌ ನ್ಯೂಸ್;‌ ಎಲ್ಲ ವರ್ಗಕ್ಕೂ 3 ವರ್ಷ ಸಡಿಲಿಕೆ

ಯಾರೆಲ್ಲಾ ಕನ್ನಡ ಭಾಷಾ ಪರೀಕ್ಷೆ ಬರೆಯಬೇಕು?

ಕನ್ನಡ ಭಾಷಾ ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು 29-11-2022ರ ಕನ್ನಡ ಭಾಷಾ ಪರೀಕ್ಷೆಯ ಫಲಿತಾಂಶವನ್ನು ಈ ಅಧಿಸೂಚನೆಯಲ್ಲಿನ ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆಗೂ ಪರಿಗಣಿಸಲಾಗುತ್ತದೆ. ಇದಕ್ಕಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಆನ್ ಲೈನ್ ಅರ್ಜಿಯ ನಿಗದಿತ ಅಂಕಣದಲ್ಲಿ ಕನ್ನಡ ಭಾಷಾ ಪರೀಕ್ಷೆ ಅರ್ಹರಾಗಿರುವ ಬಗ್ಗೆ ಮಾಹಿತಿ ನಮೂದಿಸಿರಬೇಕು. ಅಂತಹವರಿಗೆ ಮಾತ್ರ ಪರೀಕ್ಷೆಯಿಂದ ವಿನಾಯಿತಿ ಸಿಗಲಿದ್ದು, ಉಳಿದವರೆಲ್ಲಾ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ.

ಕನ್ನಡ ಭಾಷಾ ಪರೀಕ್ಷೆ ಹೇಗಿರುತ್ತದೆ?

ಗ್ರೂಪ್‌-ಬಿ ಹುದ್ದೆಗಳಿಗೆ ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರ ನಿಯಮ ಉಪ ನಿಯಮ-7 ರಲ್ಲಿ ನಿರ್ದಿಷ್ಟ ಪಡಿಸಲಾದಂತೆ, ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲಿ ಅರ್ಹತೆಯನ್ನು ಪಡೆಯದ ಹೊರತು ಆಯ್ಕೆಗೆ ಅರ್ಹರಾಗುವುದಿಲ್ಲ. ಈ ಪರೀಕ್ಷೆಯು ಗರಿಷ್ಠ 150 ಅಂಕಗಳ ಒಂದು ಪ್ರಶ್ನೆ ಪತ್ರಿಕೆಯನ್ನು ಒಳಗೊಂಡಿದ್ದು, ಅಭ್ಯರ್ಥಿಯು ಈ ಪತ್ರಿಕೆಯಲ್ಲಿ ಅರ್ಹತೆ ಹೊಂದಲು ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಈ ಪ್ರಶ್ನೆ, ಪತ್ರಿಕೆಯನ್ನು ಎಸ್.ಎಸ್.ಎಲ್.ಸಿ. ಹಂತದಲ್ಲಿನ ಪ್ರಥಮ ಭಾಷೆ ಕನ್ನಡವನ್ನು ಮಾನದಂಡವನ್ನಾಗಿಟ್ಟುಕೊಂಡು ಸಿದ್ಧಪಡಿಸಲಾಗುತ್ತದೆ.

ಈ ಸುದ್ದಿಯನ್ನೂ ಓದಿ | kpsc: ಕೆಪಿಎಸ್‌ಸಿ ಅವಾಂತರದ ತನಿಖೆಯಾಗಲಿ

ಸ್ಪರ್ಧಾತ್ಮಕ ಪರೀಕ್ಷೆ

ಸಾಮಾನ್ಯ ಪತ್ರಿಕೆ-1‌, ನಿರ್ದಿಷ್ಟ ಪತ್ರಿಕೆ -2 ಒಳಗೊಂಡ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪರೀಕ್ಷೆಯು ತಲಾ 300 ಅಂಕಗಳ ಎರಡು ಪ್ರಶ್ನೆ ಪತ್ರಿಕೆ (ಸಾಮಾನ್ಯ ಪತ್ರಿಕೆ-1‌, ನಿರ್ದಿಷ್ಟ ಪತ್ರಿಕೆ -2) ಒಳಗೊಂಡಿರುತ್ತದೆ. ಪತ್ರಿಕೆ-1ರಲ್ಲಿ ಪ್ರಚಲಿತ ವಿದ್ಯಮಾನ, ಸಾಮಾನ್ಯ ವಿಜ್ಞಾನ, ಭಾರತ ಹಾಗೂ ಕರ್ನಾಟಕದ ಇತಿಹಾಸ, ಭೂಗೋಳ ಶಾಸ್ತ್ರ, ಸಮಾಜ ವಿಜ್ಞಾನ, ಬೌದ್ಧಿಕ ಸಾಮರ್ಥ್ಯ, ದೈನಂದಿನ ಗ್ರಹಿಕೆ ವಿಷಯಗಳು ಇರಲಿವೆ. ಇನ್ನು ಪತ್ರಿಕೆ-2 ನಿರ್ದಿಷ್ಟ ಪತ್ರಿಕೆಯಾಗಿದ್ದು, ಆಯಾ ಇಲಾಖೆಯ ಹುದ್ದೆಗಳಿಗೆ ಸಂಬಂಧಿಸಿದಂತೆ ಪಠ್ಯಕ್ರಮ ನೀಡಲಾಗಿದ್ದು, ಕೆಪಿಎಸ್‌ಸಿ ಅಧಿಸೂಚನೆಯಲ್ಲಿ ಪಠ್ಯಕ್ರಮ ನೀಡಲಾಗಿದೆ.