Thursday, 19th September 2024

ಕೆಪಿಎಸ್‌ಸಿ ನೇಮಕದಲ್ಲಿ ಪ್ಯಾಕೇಜ್‌ ಅಕ್ರಮ ಫೇಮಸ್‌

ಪರೀಕ್ಷೆಗೂ ಮುನ್ನ ಪ್ಯಾಕೇಜ್‌ನಲ್ಲಿ ಪ್ರಶ್ನೆಗಳ ಸೋರಿಕೆ

ನಂತರದಲ್ಲಿ ಉತ್ತರ ತಿದ್ದುವಿಕೆ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ

ಬೆಂಗಳೂರು : ಕೆಪಿಎಸ್‌ಸಿ ಪ್ಯಾಕೇಜ್ ಅಕ್ರಮಗಳೇ ಬಹುತೇಕ ಎಲ್ಲಾ ನೇಮಕಗಳನ್ನು ನಿಯಂತ್ರಿಸುತ್ತಿದ್ದು, ಇದು ಸದ್ದಿಲ್ಲದೆ
ಸಂಸ್ಥೆಯಲ್ಲಿ ಭ್ರಷ್ಟಚಾರ ಬೇರು ಬಿಡುವಂತೆ ಮಾಡಿದೆ. ಈ ವರೆಗೂ ಪ್ರಸಿದ್ಧ ತಾಳಿ ಭಾಗ್ಯ ಪ್ಯಾಕೇಜ್‌ಗಳೂ ಹೆಚ್ಚು ಪ್ರಚಲಿತ ವಾಗಿತ್ತು. ಅವುಗಳೀಗ ಹಳೆಯದಾಗಿದ್ದು, ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳು ಹಾಗೂ ಎಫ್‌ಡಿಸಿ ಹುದ್ದೆಗಳ ನೇಮಕಗಳಲ್ಲಿ ಈಗ ಹೊಸ ಪ್ಯಾಕೇಜ್ ಅಕ್ರಮಗಳು ಹೆಚ್ಚು ಕಾರ್ಯನಿರ್ವಹಿಸುತ್ತಿವೆ.

ಅಭ್ಯರ್ಥಿಗಳನ್ನು ನೇಮಕಕ್ಕಾಗಿ ನಡೆಸುವ ಪರೀಕ್ಷೆಗೂ ಮುನ್ನ ಮತ್ತು ಪರೀಕ್ಷೆ ನಂತರ ಹಾಗೂ ಪರೀಕ್ಷೆ ಸಮಯದಲ್ಲಿ ಅಕ್ರಮ ಜಾಲಕ್ಕೆ ಎಳೆದು ಹಣ ವಸೂಲಿ ಮಾಡುವುದೇ ಪ್ಯಾಕೇಜ್ ಅಕ್ರಮ. ಈಗಿನ ಹೊಸ ಪ್ಯಾಕೇಜ್ ಗಳಲ್ಲಿ ಮುಂಗಡ ಪಾವತಿಸುವ ಅಭ್ಯರ್ಥಿಗಳಿಗೆ, ಪರೀಕ್ಷೆಗೂ ಮುನ್ನವೇ ಪ್ರಶ್ನೆಗಳು ರವಾನೆಯಾಗುತ್ತವೆ.

ಕೆಲವು ಸಂದರ್ಭದಲ್ಲಿ ಪರೀಕ್ಷೆ ನಂತರದಲ್ಲಿ ಉತ್ತರ ಪತ್ರಿಕೆಗಳನ್ನು ತಿದ್ದುವ ಮೂಲಕವೂ ಪ್ಯಾಕೇಜ್ ಅಕ್ರಮಗಳನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಇದೊಂದು ವ್ಯವಸ್ಥಿತ ಹೈಟೆಕ್ ದಂಧೆಯಂತೆ ನಡೆಯುತ್ತಿದ್ದು, ಇದರಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳ ಆಪ್ತರು, ಸಂಬಂಧಿಕರು ಹಾಗೂ ಸಹವರ್ತಿಗಳೇ ಹೆಚ್ಚು ಕಾರ್ಯನಿರ್ವಹಿಸುತ್ತಾರೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ನೇಮಕ ವೇಳೆ ನಡೆಸುವ ಪ್ಯಾಕೇಜ್ ಅಕ್ರಮಗಳು ಈಗಾಗಲೇ ಬಯಲಾಗಿರುವ ಅಕ್ರಮಗಳ ಸಮಯದಲ್ಲಿ ಬಯಲಾಗಿದೆ. ಇದರ ಬಗ್ಗೆ ಈ ಹಿಂದೆ ತನಿಖೆ ನಡೆಸಿರುವ ಸಿಐಡಿಗೂ ಗೊತ್ತಿದೆ. ಆದರೂ ಸರಕಾರ ಇದನ್ನು ತಡೆಯುವ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಸಂಸ್ಥೆ ಉಳಿವಿಗಾಗಿ ಹೋರಾಟ ನಡೆಸುತ್ತಿರುವರು ಹಾಗೂ ಪರೀಕ್ಷೆಯಲ್ಲಿ ವಂಚನೆಗೆ ಒಳಗಾಗಿ ಕೋರ್ಟ್ ಮೆಟ್ಟಿಲೇರಿರುವ
ಅಭ್ಯರ್ಥಿಗಳು ದೂರಿದ್ದಾರೆ.

ಮೊಬೈಲ್‌ ಸಂಖ್ಯೆಯೇ ಏಕೆ ಬೇಕು ?

ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವಾಗ ಆಭ್ಯರ್ಥಿಗಳು ಕಡ್ಡಾಯವಾಗಿ ಮೊಬೈಲ್ ನಂಬರ್ ದಾಖಲಿಸಬೇಕು. ಅಂದರೆ ಪರೀಕ್ಷೆ ನಂತದಲ್ಲಿ ಅಭ್ಯರ್ಥಿಗಳನ್ನು ಪ್ಯಾಕೇಜ್ ಜಾಲಕ್ಕೆ ಬೀಳಿಸಲು ಈ ಮೊಬೈಲ್ ಸಂಖ್ಯೆಗಳು ಹೆಚ್ಚು ಅನುಕೂಲ. ಇದನ್ನು ಪತ್ತೆ ಹಚ್ಚಿದ್ದ ಸಿಐಡಿ ಅಧಿಕಾರಿಗಳು ಅಭ್ಯರ್ಥಿಗಳಿಗೆ ಮೊಬೈಲ್ ಸಂಖ್ಯೆ ಹೇಗೆ ಕೇಳುತ್ತೀರಿ ಎಂದು ಪ್ರಶ್ನಿಸಿದ್ದೂ ಉಂಟು. ಇದಲ್ಲದೆ ಈ ಹಿಂದೆ ಪರೀಕ್ಷೆಗಳ ನಂತರ ಆಭ್ಯರ್ಥಿ ಗಳಿಸಿರುವ ಅಂಕಗಳನ್ನು ಪ್ರಕಟಿಸಲಾಗುತ್ತಿತ್ತು.

ಅಂದರೆ ಕಟ್ ಆಫ್ ಅಂಕಗಳನ್ನು ಪ್ರಕಟಿಸಿ ನಂತರದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿತ್ತು. ಆದರೆ, 2011ರಲ್ಲಿ ಇದನ್ನು ಸ್ಥಗಿತಗೊಳಿಸಲಾಗಿದೆ. ಈಗ ಪರೀಕ್ಷೆ ನಂತರ ಅಭ್ಯರ್ಥಿಯನ್ನು ನಂತರದ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ ಎಂದಷ್ಟೇ ಪ್ರಕಟಿಸ ಲಾಗುತ್ತಿದೆ. ಇದರಿಂದ ಯಾರಿಗೆ ಎಷ್ಟು ಅಂಕ, ಹೇಗೆ ಸಾಧ್ಯ ಎನ್ನುವುದು ತಿಳಿಯುತ್ತಿಲ್ಲ. ಆಯ್ಕೆ ಪರೀಕ್ಷೆ ಮುಗಿಯು ವವರೆಗೂ ಯಾರಿಗೆ ಎಷ್ಟಾದರೂ ಅಂಕಗಳನ್ನು ನೀಡಿ ಅವರು ಆಯ್ಕೆಯಾಗುವಂತೆ ಮಾಡುವ ಸಾಧ್ಯತೆ ಇದೆ ಎಂದು ಸರಕಾರದ ಮೂಲಗಳು ಹೇಳಿವೆ.

ಏನಿದು ಪ್ಯಾಕೇಜ್‌ ಅಕ್ರಮ, ಹೇಗೆ ನಡೆಯುತ್ತೆ ?

ಕೆಪಿಎಸ್‌ಸಿ ನಡೆಸುವ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕ ವೇಳೆ ಪ್ರಾಥಮಿಕ ಪರೀಕ್ಷೆಯನ್ನು 400 ಅಂಕಗಳಿಗೆ ಹಾಗೂ ಮುಖ್ಯ ಪರೀಕ್ಷೆಯನ್ನು 1,250 ಅಂಕಗಳಿಗೆ ಮತ್ತು ವ್ಯಕ್ತಿತ್ವ ಪರೀಕ್ಷೆಯನ್ನು 50 ಅಂಕಗಳಿಗೆ ನಡೆಸಲಾಗುತ್ತದೆ. ಇದೇರೀತಿ ಎಫ್‌ಡಿಎ ಹುದ್ದೆಗಳ ನೇಮಕ ವೇಳೆ 200 ಅಂಕಗಳಿಗೆ ಸಾಮಾನ್ಯ ಜ್ಞಾನದ ಪರೀಕ್ಷೆ ಹಾಗೂ 200 ಅಂಕಗಳಿಗೆ ಭಾಷಾ ಆಯ್ಕೆ ವಿಷಯಗಳ ಪರೀಕ್ಷೆ ನಡೆಸಲಾಗುತ್ತದೆ.

ಇಂಥ ಪರೀಕ್ಷೆಗಳಲ್ಲಿ ಪ್ಯಾಕೇಜ್ ಆಫರ್ ಮಾಡಲಾಗುತ್ತದೆ. ಇಂಥ ಹುದ್ದೆಗಳಿಗೆ ಇಂತಿಷ್ಟು ಮೊತ್ತ ಎಂದು ನಿಗದಿ ಮಾಡಿ ಎರಡು
ಹಂತದಲ್ಲಿ ನೀಡಿದರೆ ಹುದ್ದೆ ಖಚಿತ ಎನ್ನುವ ಮಾಹಿತಿ ರವಾನಿಸಲಾಗುತ್ತದೆ. ಪರೀಕ್ಷೆಗೆ ಅಧಿಸೂಚನೆ ಹೊರ ಬೀಳುತ್ತಿದ್ದಂತೆ ಪ್ಯಾಕೇಜ್ ಮಾಹಿತಿ ಸಿಕ್ಕಿ ಅನೇಕ ಅಭ್ಯರ್ಥಿಗಳ ಬುಕ್ಕಿಂಗ್ ನಡೆಯುತ್ತದೆ.

ಉಳಿದಂತೆ ಪರೀಕ್ಷೆಗೂ ಮುನ್ನ ಮತ್ತು ಪರೀಕ್ಷೆ ನಂತರ ಎಂಬ ಎರಡು ಹಂತಗಳಲ್ಲೂ ಪ್ಯಾಕೇಜ್ ಅಕ್ರಮಗಳು ನಡೆಯುವು ದುಂಟು. ಅಂದರೆ ಪರೀಕ್ಷೆಗೂ ಮುನ್ನ ಪ್ಯಾಕೇಜ್ ಪಡೆದವರಿಗೆ ಪರೀಕ್ಷೆಗೆ ಕೇಳುವ ಪ್ರಶ್ನೆಗಳ ಪೈಕಿ ಶೇ.80ರಷ್ಟು ಪ್ರಶ್ನೆಗಳನ್ನು
ಅಭ್ಯರ್ಥಿಗಳಿಗೆ ಮುಂಗಡವಾಗಿ ನೀಡಲಾಗುತ್ತದೆ. ಪರೀಕ್ಷೆ ನಂತರದಲ್ಲಿ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಭರ್ತಿ ಮಾಡುವ ಮತ್ತು ತಿದ್ದುವ ಹೊಣೆಯನ್ನು ಪ್ಯಾಕೇಜ್ ನಿರ್ವಾಹಕರು ನಿಭಾಯಿಸುತ್ತಾರೆ.

ಅಂದರೆ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದರೂ ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರಿಸದೆ ಖಾಲಿ ಬಿಡಬೇಕು. ಅದನ್ನು ಪ್ಯಾಕೇಜ್
ನಿರ್ವಹಿಸುವವರು ಆಯೋಗದ ಆಪ್ತ ಮೂಲಗಳಿಂದ ಭರ್ತಿ ಮಾಡಿಸುತ್ತಾರೆ. ಈ ಮೂಲಕ ಅಭ್ಯರ್ಥಿಗಳು ಆಯ್ಕೆಯಾಗುವಂತೆ ಮಾಡುತ್ತಾರೆ ಎನ್ನಲಾಗಿದೆ.

ರೀ ಟೋಟಲಿಂಗ್ ಎಂಬ ಅಕ್ರಮ ದಾರಿ: ಪ್ಯಾಕೇಜ್ ಜಾಲಕ್ಕೆ ಸಿಕ್ಕದ ಅಭ್ಯರ್ಥಿಗಳು ತಡವಾಗಿ ಬಂದು ಅಕ್ರಮ ನೇಮಕಕ್ಕೆ ದುಂಬಾಲು ಬಿದ್ದರೆ ಅಂಥವರಿಗೆ ರೀ ಟೋಟಲಿಂಗ್ ದಾರಿ ತೂರಿಸುವ ವ್ಯವಸ್ಥೆಯೂ ಇದೆ. ಅಂದರೆ ಶೇ.80ರಷ್ಟು ಮೊತ್ತ ನೀಡಲು
ಇಚ್ಛಿಸುವವರನ್ನು ರೀ ಟೋಟಲಿಂಗ್ ಹಾಕಿಸಲಾಗುತ್ತದೆ. ಆ ಸಂದರ್ಭದಲ್ಲಿ ಹೆಚ್ಚಿನ ಅಂಕಗಳನ್ನು ನೀಡಿ ವ್ಯಕ್ತಿತ್ವ ಪರೀಕ್ಷೆಗೆ ಅರ್ಹರಾಗುವಂತೆ ಮಾಡಿ ಅಲ್ಲಿ ಆಯ್ಕೆ ದಾರಿ ತೋರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಕೋಟ್‌

ಕೆಪಿಎಸ್‌ಸಿ ಅಕ್ರಮಗಳು ಹಿಂದಿನಿಂದಲೂ ನಡೆಯುತ್ತಿವೆ. ಈ ಬಗ್ಗೆ ಸಿಐಡಿ ತನಿಖೆ ಸಾಲುವುದಿಲ್ಲ. ಸಿಬಿಐ ತನಿಖೆಯೇ ಆಗಬೇಕು. ಅದೂ ಕಾಲ ಮಿತಿಯಲ್ಲಿ ತನಿಖೆಯಾಗಬೇಕು. ಏಕೆಂದರೆ, ಇದರಲ್ಲಿ ಎಲ್ಲಾ ಪಕ್ಷಗಳ ನಾಯಕರೂ ಭಾಗಿಯಾಗಿರುತ್ತಾರೆ. ಇದೆಲ್ಲವೂ ಹೊರಗೆ ಬರಬೇಕಿದೆ.

– ಟಿ.ನರಸಿಂಹಮೂರ್ತಿ, ಮಾನವ ಹಕ್ಕುಗಳ ಹೋರಾಟಗಾರರು

Leave a Reply

Your email address will not be published. Required fields are marked *