Sunday, 15th December 2024

ರಾಷ್ಟ್ರಧ್ವಜಕ್ಕೆ ಅಪಮಾನ: ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ

ಹರಪನಹಳ್ಳಿ: ಧ್ವಜಕ್ಕೆ ಅಪಮಾನ ಮಾಡಿರುವ ಸಚಿವ ಕೆ.ಎಸ್.ಈಶ್ವರಪ್ಪನವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ರಾಜ್ಯಪಾಲ ರನ್ನು ಆಗ್ರಹಿಸಿ ಇಲ್ಲಿಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಹಳೆ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರು ಹೊಸಪೇಟೆ ರಸ್ತೆ ಮೂಲಕ ತಾಲೂಕು ವಿಧಾನ ಸೌಧಕ್ಕೆ ಆಗಮಿಸಿ ಬಹಿರಂಗ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭರತ್ ಪಿ.ಟಿ. ಅವರು ಈಶ್ವರಪ್ಪನವರ ಹೇಳಿಕೆ ದೇಶ ದ್ರೋಹದ ಹೇಳಿಕೆಯಾಗಿದೆ. ತ್ರಿವರ್ಣ ಧ್ವಜ ನಮ್ಮ ದೇಶದ ಅಖಂಡತೆ, ಸಾರ್ವಭೌಮತೆ, ಅಸ್ಮಿತೆ ಮತ್ತು ಸಂವಿಧಾನದ ಸಂಕೇತವಾಗಿದೆ ಎಂದು ಹೇಳಿದರು.

ರಾಷ್ಟ್ರಕ್ಕೆ ಗೌರವ ಸಿಗಬೇಕಾದರೆ ಈಶ್ವರಪ್ಪನವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ದರು. ದೇಶ ಒಡೆಯುವ ಕೆಲಸ ಬಿಜೆಪಿ ಮಾಡುತ್ತದೆ ಎಂದು ದೂರಿದರು.

ಮುಖಂಡ ಶಶಿಧರ ಪೂಜಾರ ಮಾತನಾಡಿ, ಈಶ್ವರಪ್ಪನವರ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಜಿ.ಪಂ ಮಾಜಿ ಸದಸ್ಯ ಎಚ್ .ಬಿ.ಪರಶುರಾಮಪ್ಪ, ಪುರಸಭಾ ಮಾಜಿ ಅಧ್ಯಕ್ಷ ಎಚ್ .ಕೆ.ಹಾಲೇಶ, ಚಿಗಟೇರಿ ಬ್ಲಾಕ್ ಅಧ್ಯಕ್ಷ ಪಿ.ಪ್ರೇಮಕುಮಾರ, ಅರಸಿಕೇರಿ ಬ್ಲಾಕ್ ಅದ್ಯಕ್ಷ ಎಸ್ .ಮಂಜುನಾಥ,ಮುಖಂಡರಾದ ಯಶವಂತಗೌಡ, ಎಂ.ಅಜ್ಜಣ್ಣ,ಆಲದಹಳ್ಳಿ ಷಣ್ಮೂಖಪ್ಪ, ಪಿ.ಬಿ.ಗೌಡ, ಜಂಬಣ್ಣ, ಜಿಷಾನ್ , ಎಲ್ .ಬಿ.ಹಾಲೇಶನಾಯ್ಕ, ಪುರಸಭಾ ಸದಸ್ಯ ಜಾಕೀರ್ , ಯುವಕಾಂಗ್ರೆಸ್ ಉಪಾಧ್ಯಕ್ಷ ಪ್ರವೀಣ್ ಕುಮಾರ್, ತಿಮ್ಮ ನಾಯ್ಕ, ಅರುಣ್ ಪೂಜಾರ, ಮಾಹತೇಂಶ್ ನಾಯ್ಕ, ಮಜಿದ್, ನಾಗರಾಜ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.