Wednesday, 18th December 2024

KSRTC Strike: ಡಿ.31ರಿಂದ ಕೆಎಸ್‌ಆರ್‌ಟಿಸಿ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಿದ್ಧತೆ

Transport Strike

ಬೆಂಗಳೂರು: ಸಂಬಳ ಹೆಚ್ಚಿಸಬೇಕು ಮತ್ತು 38 ತಿಂಗಳ ಬಾಕಿ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಡಿಸೆಂಬರ್‌ 31ರಿಂದ ಅನಿರ್ಧಿಷ್ಟಾವಧಿ ಮುಷ್ಕರ (KSRTC Strike) ಮಾಡಲು ನಿರ್ಧರಿಸಿದ್ದಾರೆ. ಈ ಅನಿರ್ದಿಷ್ಟಾವಧಿ ಮುಷ್ಕರದಿಂದ ಸರ್ಕಾರಿ ಬಸ್‌ಗಳ (Government Buses) ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಅನಿರ್ದಿಷ್ಟಾವಧಿ ಮುಷ್ಕರದ ಕುರಿತು ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್‌ ಫೆಡರೇಷನ್ ಪರವಾಗಿ ಹೆಚ್. ವಿ. ಅನಂತಸುಬ್ಬರಾವ್ ಮಾಹಿತಿ ನೀಡಿದ್ದಾರೆ. ಈ ಮುಷ್ಕರದಿಂದ ಬಸ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯೂ ಇದೆ.

ಈ ಜಂಟಿ ಕ್ರಿಯಾ ಸಮಿತಿಯ ಅಡಿ ಕೆ.ಎಸ್.ಆರ್.ಟಿ.ಸಿ, ಸ್ಟಾಫ್ & ವರ್ಕರ್ಸ್‌ ಫೆಡರೇಷನ್ (ಎ.ಐ.ಟಿ.ಯು.ಸಿ.), ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್ (ಸಿ.ಐ.ಟಿ.ಯು.), ಕೆ.ಎಸ್.ಆರ್.ಟಿ.ಸಿ. ಪ.ಜಾ. ಮತ್ತು ಪ.ಪಂ. ನೌಕರರ ಸಂಘ (40/ 78), ಕ.ರಾ.ರ.ಸಾ.ಸಂಸ್ಥೆ ಪ.ಜಾ. /ಪ.ಪಂ.ಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) (671/ 2001), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ (ರಿ) ಇವೆ.

ಅನಿರ್ಧಿಷ್ಟಾವಧಿ ಮುಷ್ಕರ ಬೇಡಿಕೆಗಳು

  • 01.01.2020 ರಿಂದ 38 ತಿಂಗಳ ವೇತನ ಹಿಂಬಾಕಿ ಪಾವತಿಸಲೇಬೇಕು.
  • 01.01.2024 ರಿಂದ ಹೊಸ ವೇತನ ಪರಿಷ್ಕರಣೆ ಹಾಗೂ ಇತರ ಬೇಡಿಕೆ ಇತ್ಯರ್ಥಪಡಿಸಬೇಕು.
  • ನಿವೃತ್ತರಾದ ನೌಕರರಿಗೆ 27.06.2024ರ ಸುತ್ತೋಲೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು.

ಒಂದು ಕಡೆ ಸರ್ಕಾರ ಶಕ್ತಿ ಯೋಜನೆಯ ಬಾಕಿಯನ್ನು ನಿಗಮಗಳಿಗೆ ನೀಡುತ್ತಿಲ್ಲ. ಮತ್ತೊಂದು ಕಡೆ ಬಸ್‌ ಪ್ರಯಾಣ ದರವನ್ನು ಏರಿಕೆ ಮಾಡಲೂ ಸಾಧ್ಯವಾಗುತ್ತಿಲ್ಲ. ಈ ಕಾರಣಗಳಿಂದ ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ನೌಕರರಿಗೂ ಸಂಬಳ ನೀಡಲು ಸಾರಿಗೆ ನಿಗಮಗಳು ಹೆಣಗಾಡುತ್ತಿವ ಎನ್ನಲಾಗಿದೆ.

ಜಂಟಿ ಕ್ರಿಯಾ ಸಮಿತಿಯಿಂದ ಈ ಹಿಂದೆ ತೀರ್ಮಾನಿಸಿದಂತೆ ದಿನಾಂಕ 09.12.2024ರಂದು ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ಮೊದಲ ದಿನವೇ ಬೆಳಗಾವಿ ಚಲೋ ನಡೆಸಿ ರಾಜ್ಯದ ಮಾನ್ಯ ಮುಖ್ಯಮಂತ್ರಿಯವರಿಗೆ ದಿನಾಂಕ 31.12.2024 ರಿಂದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಅನಿರ್ಧಿಷ್ಟಾವಧಿ ಮುಷ್ಕರದ ನೋಟೀಸ್ ಅನ್ನುಕೊಟ್ಟಿದ್ದೇವೆ. ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಾರಿಗೆ ಕಾರ್ಮಿಕರು ಭಾಗವಹಿಸಿ ತಮ್ಮೆಲ್ಲರ ಪರವಾಗಿ ಬೆಳಗಾವಿ ಚಲೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಸಮಿತಿ ಹೇಳಿದೆ.

ಇದಕ್ಕಾಗಿ ಜಂಟಿ ಕ್ರಿಯಾ ಸಮಿತಿಯ ಪರವಾಗಿ ಎಲ್ಲರನ್ನೂ ಅಭಿನಂದಿಸುತ್ತೇವೆ. ನಮ್ಮ ಮುಷ್ಕರದ ನೋಟೀಸನ್ನು ಸರ್ಕಾರದ ಪರವಾಗಿ ಮಾನ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಸ್ವೀಕರಿಸಿ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಮಾನ್ಯ ಮುಖ್ಯ ಮಂತ್ರಿಗಳ ಜೊತೆ ಚರ್ಚಿಸಿ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ಈಗ ನಮ್ಮ ಮುಂದಿರುವ ಗುರಿ ಮತ್ತು ದಾರಿ ಸ್ಪಷ್ಟವಾಗಿದೆ. ಸರ್ಕಾರವು ವಿಳಂಬ ಧೋರಣೆ ಮತ್ತು ನಿರ್ಲಕ್ಷ್ಯ ಮನೋಭಾವನ್ನು ಬಿಟ್ಟು ಕೂಡಲೇ ನಮ್ಮೊಡನೆ ಚರ್ಚಿಸಿ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ದಿನಾಂಕ 31.12.2024 ರಿಂದ ಮುಷ್ಕರ ನಡೆಸುವುದು ಅನಿವಾರ್ಯವಾಗಲಿದೆ. ಸಾರಿಗೆ ನೌಕರರ ಪಾಲಿಗೆ ಇದು ಅಳಿವು ಉಳಿವಿನ ಪ್ರಶ್ನೆಯಾಗಿದ್ದು ಈ ಹೋರಾಟದಲ್ಲಿ ಜಯಶೀಲರಾಗುವರೆಂಬ ನಂಬಿಕೆ ನಮಗಿದೆ ಎಂದು ಹೇಳಿದ್ದಾರೆ.

38 ತಿಂಗಳ ಬಾಕಿ ಉಳಿಯಲು ಸರ್ಕಾರ ಹಾಗೂ ಆಡಳಿತ ವರ್ಗದ ವಿಳಂಬ ಧೋರಣೆಯೇ ಕಾರಣವಾಗಿದ್ದು, ಸಾರಿಗೆ ನೌಕರರು ಯಾವುದೇ ರೀತಿಯಿಂದಲೂ ಹೊಣೆಗಾರರಲ್ಲ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ‘ಶಕ್ತಿ’ ಯೋಜನೆಯಿಂದ ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ದೊಡ್ಡ ಪ್ರಮಾಣದ ಲಾಭ ದೊರೆತಿದೆ. ಹಲವು ಹತ್ತು ಸಮಸ್ಯೆಗಳನ್ನು ಅನುಭವಿಸಿ ಸಾರಿಗೆ ಕಾರ್ಮಿಕರು ಈ ಯೋಜನೆಯನ್ನು ಯಶಸ್ವಿಗೊಳಿಸಿ ಹೈರಾಣಾಗಿದ್ದಾರೆ. ಆದ್ದರಿಂದ 38 ತಿಂಗಳ ಬಾಕಿ ಹಣ, 01.01.2024ರಿಂದ ಹೊಸ ವೇತನ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕಾಗಿರುವುದು ಸರ್ಕಾರದ ಹಾಗೂ ಆಡಳಿತ ವರ್ಗದ ಜವಾಬ್ದಾರಿಯಾಗಿದೆ. ನಾವು ಕಳೆದ ಒಂದು ವರ್ಷದಿಂದ ಹಲವಾರು ಮನವಿ ಸಲ್ಲಿಸಿ ತಾಳ್ಮೆಯಿಂದ ಶಾಂತಿಯುತ ಧರಣಿ, ಉಪವಾಸ ಸತ್ಯಾಗ್ರಹ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಲು ಸರಕಾರವನ್ನು ಒತ್ತಾಯಿಸಿದ್ದೇವೆ, ಪ್ರಯತ್ನಿಸಿದ್ದೇವೆ. ನಮ್ಮ ನ್ಯಾಯಯುತ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿರುವ ರಾಜ್ಯ ಸರ್ಕಾರವನ್ನು ಎಚ್ಚರಿಸಿ ನಮ್ಮ ಬೇಡಿಕೆಗಳನ್ನು ಪಡೆಯಲು ಅನಿರ್ಧಿಷ್ಟ ಮುಷ್ಕರ ಬಿಟ್ಟರೆ ನಮಗೆ ಅನ್ಯ ಮಾರ್ಗವಿಲ್ಲ ಆದ್ದರಿಂದ ತಾವು ಯಾವುದೇ ದಿಕ್ಕು ತಪ್ಪಿಸುವ ಶಕ್ತಿಗಳ ಅಪಪ್ರಚಾರ, ಕುತಂತ್ರಗಳಿಗೆ ಬಲಿಯಾಗದೆ, ಐಕ್ಯತೆಯಿಂದ ಮುಷ್ಕರವನ್ನು ಯಶಸ್ವಿಗೊಳಿಸಿ ಸರ್ಕಾರಕ್ಕೆ ಹಾಗೂ ಆಡಳಿತ ವರ್ಗಕ್ಕೆ ಸೂಕ್ತ ಸಂದೇಶ ರವಾನಿಸಬೇಕೆಂದು ತಮ್ಮಲ್ಲಿ ಕಳಕಳಯಿಂದ ಮನವಿ ಮಾಡುತ್ತೇವೆ ಎಂದು ಕಾರ್ಮಿಕರಿಗೆ ಕರೆ ನೀಡಲಾಗಿದೆ.

ಇದನ್ನೂ ಓದಿ: KKRTC Jobs: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಕೆಎಸ್‌ಆರ್‌ಟಿಸಿ ಉದ್ಯೋಗ, ಶೀಘ್ರವೇ ಅರ್ಜಿ ಸಲ್ಲಿಸಿ