ಬೆಂಗಳೂರು: ಭಾಷಾ ವಿಜ್ಞಾನಿ,ಚಿಂತಕ ಮತ್ತು ಕನ್ನಡದ ಮಹತ್ವದ ಲೇಖಕ ಪ್ರೊ.ಕೆವಿ ನಾರಾಯಣ(KV Narayana) ಅವರು 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ(Kendra Sahithya Academy) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರ ‘ನುಡಿಗಳ ಅಳಿವು-ಬೇರೆ ದಿಕ್ಕಿನ ನೋಟʼ(Nudigala Alivu) ವಿಮರ್ಶಾ ಕೃತಿಗೆ ಈ ಪ್ರಶಸ್ತಿ ಲಭಿಸಿದೆ.
“ನುಡಿಗಳ ಅಳಿವು” ಎಂಬ ವಿಮರ್ಶಾ ಕೃತಿಗೆ 2024 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡದ ಖ್ಯಾತ ವಿಮರ್ಶಕರು ಹಾಗೂ ವಿದ್ವಾಂಸರೂ ಆದ ಪ್ರೋ ಶ್ರೀ ಕೆ.ವಿ ನಾರಾಯಣ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
— Dr.C.N.Manjunath (@DrCNManjunath) December 18, 2024
ನಿಮ್ಮ ಈ ಸಾಧನೆ ಎಲ್ಲ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. pic.twitter.com/ymmpSpanOG
ಕೆವಿಎನ್ ಬದುಕು ಮತ್ತು ಬರಹ
ಕಂಪಲಾಪುರ ವೀರಣ್ಣ ನಾರಾಯಣ ಅವರು 1948ರಲ್ಲಿ ಜನಿಸಿದರು. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ಗ್ರಾಮ ಇವರ ಜನ್ಮಸ್ಥಳ. ತಾಯಿ ಕೆಂಚಮ್ಮ ತಂದೆ ವೀರಣ್ಣ. ಪುತ್ತೂರು ಮತ್ತು ತಾಲ್ಲೂಕು ಕೇಂದ್ರ ಪಿರಿಯಾಪಟ್ಟಣದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿಯುಸಿ ಓದಿದರು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಎಂಜಿನಿಯರ್ ಆಗಕೂಡದೆಂದು ತೀರ್ಮಾನಿಸಿ ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನದ ವಿಷಯದಲ್ಲಿ ಪದವಿ ವ್ಯಾಸಂಗ ಮಾಡಿದರು. ಆನಂತರದಲ್ಲಿ ಬಿ.ಎಡ್. ಮುಗಿಸಿ ಹೈಸ್ಕೂಲಿನಲ್ಲಿ ಅಧ್ಯಾಪಕನಾಗಿ ವೃತ್ತಿ ಜೀವನವನ್ನು ಆರಂಭಿಸಿದರು.
ಈ ಮಧ್ಯೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದು ನೆಲೆ ನಿಂತರು. ಆ ಹೊತ್ತಿಗಾಗಲೇ ಕೆವಿಎನ್ ಸಾಹಿತ್ಯದ ಓದು ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕನ್ನಡ ಭಾಷೆಯ ಮೇಲಿನ ಅಪಾರ ಅಭಿಮಾನ ಮತ್ತು ಸಾಹಿತ್ಯದ ಗೀಳಿನಿಂದಾಗಿ ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಎಂ.ಎ.ಗೆ ಸೇರಿದರು. ಈ ಮಧ್ಯೆ ತಮ್ಮ ಜೊತೆ ಓದುಗರಾಗಿದ್ದ, ಈಗ ಕನ್ನಡದ ಮಹತ್ವದ ಸ್ತ್ರೀವಾದಿ ಚಿಂತಕಿಯಾಗಿ ಪ್ರಸಿದ್ಧಿ ಪಡೆದಿರುವ ಎಚ್ ಎಸ್ ಶ್ರೀಮತಿ ಅವರನ್ನು ಪ್ರೀತಿಸಿ ಗೆಳೆಯರ ಸಮ್ಮುಖದಲ್ಲಿ ಮದುವೆಯಾದರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪನ ವೃತ್ತಿ ಆರಂಭಿಸಿದ ಅವರು ನಂತರ ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನೇತೃತ್ವದಲ್ಲಿದ್ದ ಕನ್ನಡ ಅಧ್ಯಯನ ಕೇಂದ್ರಕ್ಕೆ ಬಂದರು. ಜಿ.ಎಸ್.ಎಸ್ ಮಾರ್ಗದರ್ಶನದಲ್ಲಿ ಆನಂದವರ್ಧನನ ‘ಧ್ವನ್ಯಾಲೋಕ’ವನ್ನು ಅಧ್ಯಯನ ಮಾಡಿ ಪಿಎಚ್. ಡಿ. ಪದವಿ ಪಡೆದರು.
ವಿಜ್ಞಾನ ವಿದ್ಯಾರ್ಥಿಯಾಗಿದ್ದ ಕೆವಿಎನ್ ಬೋಧಿಸಿದ್ದು ಸಾಹಿತ್ಯ, ಸಾಹಿತ್ಯ ಮೀಮಾಂಸೆ ಮತ್ತು ಭಾಷಾವಿಜ್ಞಾನ. ಸಾಹಿತ್ಯ ವಿಮರ್ಶಕರಾಗಿ, ಭಾಷಾ ವಿಜ್ಞಾನಿಯಾಗಿ ಮತ್ತು ಕನ್ನಡ-ಸಂಸ್ಕೃತಿ ಚಿಂತಕರಾಗಿ ನಾಡಿನಲ್ಲಿ ತಮ್ಮದೇ ಛಾಪನ್ನು ಬೀರಿದರು. ಕೆ.ವಿ.ಎನ್ ಹಂಪಿ ಕನ್ನಡ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದ ಆರಂಭದ ವರ್ಷಗಳಲ್ಲೇ ರಿಜಿಸ್ಟಾರ್ ಆಗಿ ಅಲ್ಲಿನ ಆಡಳಿತ ನಿರ್ವಹಣೆಗಳನ್ನು ನೋಡಿಕೊಂಡರು. ತಾವು ನಿವೃತ್ತಿಯಾಗುವವರೆಗೂ ಹಲವು ಕುಲಪತಿಗಳ ಅವಧಿಯಲ್ಲಿ ಆಡಳಿತ ಮತ್ತು ಅಧ್ಯಯನಗಳ ಮೂಲಕ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಭಾಷೆ, ಭಾಷಾ ವಿಜ್ಞಾನ ಮತ್ತು ಸಾಹಿತ್ಯದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದರು. ವಿಶ್ವವಿದ್ಯಾಲಯದಿಂದ ಹತ್ತಾರು ಪುಸ್ತಕಗಳನ್ನು ಪ್ರಕಟಿಸಿದರು. ತಮ್ಮ ಪ್ರಯೋಗಶೀಲ ಅಧ್ಯಾಪನ ಮತ್ತು ಪಾಂಡಿತ್ಯದಿಂದಾಗಿ ಕೆವಿಎನ್ ಅಪಾರವಾದ ಶಿಷ್ಯ ವರ್ಗವನ್ನು ಸಂಪಾದಿಸಿದ್ದಾರೆ. ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದ ಜೀವನೋತ್ಸಾಹ ಮತ್ತು ಜೀವನ ಪ್ರೀತಿಯ ಕೆವಿ ನಾರಾಯಣ ಅವರು ಇಳಿ ವಯಸ್ಸಿನಲ್ಲೂ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಕೆವಿಎನ್ ಪ್ರಮುಖ ಕೃತಿಗಳು
- ಬೇರು, ಕಂಡ, ಚಿಗುರು
- ಭಾಷೆಯ ಸುತ್ತಮುತ್ತ
- ಮತ್ತೇ ಭಾಷೆಯ ಸುತ್ತಮುತ್ತ
- ಅಂಕೆ ತಪ್ಪಿದ ಅರ್ಥರೋ ಉಯಿ
- ಕನ್ನಡ ಜಗತ್ತು ಅರ್ಧಶತಮಾನ
- ನಮ್ಮೊಡನೆ ನಮ್ಮ ನುಡಿ
- ಸಾಹಿತ್ಯ ತತ್ವ – ಬೇಂದ್ರೆ ದೃಷ್ಟಿ
- ಕನ್ನಡದ ಉಳಿಕಂಟೆಗಳು : ಕನ್ನಡದ ಆಡುನುಡಿಯ ಸೊಲ್ಲರಿಮೆ
- ಸ್ಥಳನಾಮಗಳು – ಪರಿವಾತನೆ ಮತ್ತು ಪ್ರಭಾವ
- ಶೈಲಿಶಾಸ್ತ್ರ – ಸಾಹಿತ್ಯ ಪರಿಭಾಷಿಕ ಪುರುಷ
- ಭಾಷೆ (ಕನ್ನಡ ವಿಶ್ವಕೋಶ)
- ಧ್ವನ್ಯಾಲೋಕದ ಓದು
- ತೊಂಡುಮೇವು
- ಧ್ವನ್ಯಾಲೋಕ: ಒಂದು ಅಧ್ಯಯನ -ಪಿಎಚ್ಡಿ ಮಹಾ ಪ್ರಬಂಧ
- ವ್ಯಕ್ತಿಮಗಳು: ಸ್ವರೂಪ ಮಟ್ಟು ವಿಶ್ಲೇಷಣೆ
ಕೆವಿಎನ್ ಸಾಹಿತ್ಯ ಸಾಧನೆಗೆ ದೊರೆತ ಪ್ರಶಸ್ತಿಗಳು
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಸಾಹಿತ್ಯ ವಿಮರ್ಶೆಗಾಗಿ ಜಿಎಸ್‌ಎಸ್ ಪ್ರಶಸ್ತಿ
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
- ಎಲ್ ಬಸವರಾಜು ಪ್ರಶಸ್ತಿ
ವಿದ್ವತ್ಪೂರ್ಣ ಸಾಹಿತ್ಯ ರಚನೆಗೆ ಹೆಸರುವಾಸಿಯಾಗಿರುವ ಕೆವಿ ನಾರಾಯಣ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸದ ಸಂಗತಿ. ಇದು ಕನ್ನಡದ ನಿಜ ಸಾಧಕನಿಗೆ ಸಲ್ಲಬೇಕಾದ ಗೌರವ.
ಈ ಸುದ್ದಿಯನ್ನೂ ಓದಿ:Saahithya Sammelana : ಜಾತಿ-ಪಕ್ಷ ಬಿಟ್ಟು ಎಲ್ಲರು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೈ ಜೋಡಿಸಿ ; ಸಚಿವ ಎನ್.ಚಲುವರಾಯಸ್ವಾಮಿ