ಬೆಂಗಳೂರು: ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣದಲ್ಲಿ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದ ಜಿ.ಕುಮಾರ್ ನಾಯಕ್ ಹಾಗೂ ಇ.ತುಕಾರಾಂ ಅವರು ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ (Lahar Singh Siroya) ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಮುಡಾ ಹಗರಣದಲ್ಲಿ ರಾಯಚೂರು ಕಾಂಗ್ರೆಸ್ ಸಂಸದ ಜಿ.ಕುಮಾರ್ ನಾಯಕ್ ಅವರ ಪಾತ್ರದ ಬಗ್ಗೆ ಎಲ್ಲರೂ ಯಾಕೆ ಮೌನವಾಗಿದ್ದಾರೆ? ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಅವರು ಸಲ್ಲಿಸಿದ್ದ ಸುಳ್ಳು ವರದಿ ಬಗ್ಗೆ ಹೈಕೋರ್ಟ್ ತೀವ್ರ ಟೀಕೆ ಮಾಡಿದೆ. ಇನ್ನು ವಾಲ್ಮೀಕಿ ನಿಗಮದ ಹಣವನ್ನು ಬಳ್ಳಾರಿ ಮತದಾರರಿಗೆ ಲಂಚ ನೀಡಲು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಇಡಿ ಚಾರ್ಜ್‌ಶೀಟ್ ಬಹಿರಂಗಪಡಿಸಿದೆ. ಹೀಗಾಗಿ ಕಾಂಗ್ರೆಸ್ ಸಂಸದರಾದ ಜಿ.ಕುಮಾರ್ ನಾಯಕ್ ಮತ್ತು ಇ. ತುಕಾರಾಂ ಈ ಕೂಡಲೇ ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದ್ದಾರೆ.
Why is everyone silent on the Raichur Congress MP, Shri G Kumar Nayak's role in the #MUDA scam? The Karnataka HC made strong remarks about the “false and fraudulent report” he submitted as DC of Mysore and "beginning the scam". My statement. 1/2@PMOIndia @JPNadda @RahulGandhi pic.twitter.com/8qgDef9xai
— Lahar Singh Siroya (@LaharSingh_MP) October 18, 2024
ಒಂದೆರಡು ದಿನಗಳ ಹಿಂದೆ ಮುಡಾ ಅಧ್ಯಕ್ಷ ಮರಿಗೌಡ ರಾಜೀನಾಮೆ ನೀಡಿದ್ದರು. ಮರಿಗೌಡರು ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದಾರೆ. ಅವರ ರಾಜೀನಾಮೆಯಿಂದ ಮುಡಾ ವಿವಾದ ಮುಗಿಯುವುದಿಲ್ಲ. ಇದು ಮತ್ತಷ್ಟು ಸಂಕೀರ್ಣವಾಗುತ್ತದೆ.
ಮುಡಾ ಪ್ರಕರಣದಲ್ಲಿ ತಪ್ಪನ್ನು ಪರೋಕ್ಷವಾಗಿ ಒಪ್ಪಿಕೊಂಡಿರುವುದು ಕಂಡುಬಂದಿದೆ. ಅಧಿಕಾರ ದುರ್ಬಳಕೆ ಆಗಿರುವುದರಿಂದ ತನಿಖೆಗೆ ನ್ಯಾಯಾಲಯ ಅನುಮತಿ ನೀಡಿತ್ತು. ಆದರೆ, ಈ ತೀರ್ಪಿನ ವಿರುದ್ಧ ಸಿಎಂ ಇದುವರೆಗೆ ಮೇಲ್ಮನವಿ ಸಲ್ಲಿಸಿಲ್ಲ ಎಂಬುದು ಕುತೂಹಲ ಮೂಡಿಸಿದೆ. ಹಗರಣವನ್ನು ಮುಚ್ಚಿಹಾಕುವ ದೃಷ್ಟಿಯಿಂದ ವಿವಾದಿತ ಸೈಟ್‌ಗಳನ್ನು ಸಿಎಂ ಹಿಂತಿರುಗಿಸಿದ್ದಾರೆ.
ಮುಡಾ ಪ್ರಕರಣದಲ್ಲಿ ಸಂಸದ ಜಿ ಕುಮಾರ್ ನಾಯಕ್ ಅವರ ವಿರುದ್ಧ ಆರೋಪಗಳು ಕೇಳಿಬಂದಿವೆ. ಅಂದಿನ ಮೈಸೂರು ಡಿಸಿ ಜಿ.ಕುಮಾರ್ ನಾಯಕ್ 2005ರ ಜೂ.17ರಂದು ನಿವೇಶನ ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಸುಳ್ಳು ವರದಿ ಸಲ್ಲಿಸಿದ್ದಾರೆ. ಇಲ್ಲದೇ ಇರೋ ಜಾಗವನ್ನು ಭೂ ಪರಿವರ್ತನೆ ಮಾಡಲಾಗಿದೆ. ಹೀಗಾಗಿ ಜಿ ಕುಮಾರ್ ನಾಯಕ್ ಮತ್ತು ಇತರ ಅಧಿಕಾರಿಗಳ ವಿರುದ್ಧ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಯಬೇಕಿದೆ ಎಂದು ಹೈಕೋರ್ಟ್ ಹೇಳಿದೆ. ಅಲ್ಲದೆ, ವಾಲ್ಮೀಕಿ ನಿಗಮಕ್ಕೆ ಸಂಬಂಧಿಸಿದ ಮತ್ತೊಂದು ಹಗರಣದಲ್ಲಿ ಇಡಿ ತನ್ನ ಆರೋಪಪಟ್ಟಿಯಲ್ಲಿ ಹೇಳಿದೆ.
ಇನ್ನು ಬಳ್ಳಾರಿ ಮತದಾರರಿಗೆ ಲಂಚ ನೀಡಲು ವಾಲ್ಮೀಕಿ ನಿಗಮದ ಹಣ ದುರುಪಯೋಗವಾಗಿದೆ ಎಂದು ಇಡಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ. ಹೀಗಾಗಿ ಕಾಂಗ್ರೆಸ್‌ನ ಸಂಸದ ಬಳ್ಳಾರಿ ಸಂಸದ ಇ ತುಕಾರಾಂ ಹಾಗೂ ಜಿ ಕುಮಾರ್ ನಾಯಕ್ ಅವರು ರಾಜೀನಾಮೆ ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ ಆಗ್ರಹಿಸಿದ್ದಾರೆ.