Monday, 28th October 2024

Lalbagh Bandstand : ಕುಸಿಯುವ ಭೀತಿಯಲ್ಲಿ ಐತಿಹಾಸಿಕ ಲಾಲ್‌ಬಾಗ್‌ ಉದ್ಯಾನದ ಬ್ಯಾಂಡ್ ಸ್ಟ್ಯಾಂಡ್‌

Lalbagh Bandstand:

ಬೆಂಗಳೂರು: ಬೆಂಗಳೂರಿನ ಕಳೆ ತಂದಿರುವ ಹಾಗೂ ಐತಿಹ್ಯ ಹೊಂದಿರುವ ಲಾಲ್‌ಬಾಗ್ ಉದ್ಯಾನದಲ್ಲಿರುವ ಬ್ಯಾಂಡ್‌ ಸ್ಟ್ಯಾಂಡ್‌ (ರಂಗಮಂಟಪ) ಬಿರುಕು ಬಿಟ್ಟಿದೆ. (Lalbagh Bandstand) ಆಕರ್ಷಣಿಯ ನಿರ್ಮಾಣ ಕುಸಿಯುವ ಆತಂಕ ಎದುರಿಸುತ್ತಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಿದ್ದ ಬಿದ್ದ ಭಾರೀ ಮಳೆ ಮತ್ತು ಗಾಳಿಯಿಂದಾಗಿ ಇದಕ್ಕೆ ಮತ್ತಷ್ಟು ತೊಂದರೆ ಎದುರಾಗಿದ್ದು ಇಂದೊ ನಾಳೆ ಎಂಬ ಸ್ಥಿತಿ ಸೃಷ್ಟಿಯಾಗಿದೆ.

ಬ್ರಿಟಿಷರ ಕಾಲದಲ್ಲಿ ಲಾಲ್‌ಬಾಗ್‌ನಲ್ಲಿ ಬ್ಯಾಂಡ್ ಸ್ಟ್ಯಾಂಡ್ ನಿರ್ಮಾಣವಾಗಿತ್ತು. ಇಲ್ಲಿ ವಾರಕ್ಕೊಂದು ಬಾರಿ ಇಂಗ್ಲಿಷ್ ವಾದ್ಯ ಸಂಗೀತ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಇಷ್ಟೊಂದ ಪ್ರಸಿದ್ಧಿ ಹೊಂದಿರುವ ಜಾಗದಲ್ಲಿ 2000ರಲ್ಲಿ ತೇಗದ ಮರದಿಂದ ಜೀರ್ಣೋದ್ಧಾರ ಮಾಡಲಾಗಿತ್ತು. ಇದರ ಚಾವಣಿಯನ್ನು ಮರದ ಹಲಗೆಗಳಿಂದ ನಿರ್ಮಿಸಲಾಗಿತ್ತು. ಹೀಗಾಗಿ ಜೋರು ಮಳೆ, ಗಾಳಿ ಬಂದರೆ ಸೋರಲು ಪ್ರಾರಂಭಿಸಿತ್ತು. ಇದುವೆ ಕುಸಿಯಲು ಕಾರಣ ಎನ್ನಲಾಗಿದೆ. ಮಳೆ ನೀರು ಸಂಗ್ರಹಗೊಂಡ ಪರಿಣಾಮ ಹಾಳಾಗಿದೆ. ಬ್ಯಾಂಡ್ ಸ್ಟ್ಯಾಂಡ್ ಕುಸಿಯದಂತೆ ಹಗ್ಗದಿಂದ ಕಟ್ಟಲಾಗಿದೆ. ಕಟ್ಟಡ ಕುಸಿಯದಂತೆ ಅಲ್ಲಲ್ಲಿ ಕಬ್ಬಿಣದ ರಾಡ್‌ಗಳನ್ನು ಅಳವಡಿಸಲಾಗಿದೆ. ಆದಾಗ್ಯೂ ಆತಂಕ ಕಡಿಮೆಯಾಗಿಲ್ಲ.

“ಬ್ಯಾಂಡ್ ಸ್ಟ್ಯಾಂಡ್ ಸಂರಕ್ಷಿಸುವ ಉದ್ದೇಶದಿಂದ ಅ.ನ. ಯಲ್ಲಪ್ಪರೆಡ್ಡಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿ ಈ ಐತಿಹಾಸಿಕ ನಿರ್ಮಾಣದ ಉಳಿವಿಗೆ ಯೋಜನೆ ರೂಪಿಸುತ್ತಿದೆ. 24 ವರ್ಷಗಳ ಹಿಂದೆ ಬ್ಯಾಂಡ್ ಸ್ಟ್ಯಾಂಡ್ ಪುನರ್ ನಿರ್ಮಿಸಲಾಗಿತ್ತು. ಚಾವಣಿಗೆ ಹಲಗೆಗಳನ್ನು ಹಾಕಿದ ಕಾರಣ ಸಮಸ್ಯೆಗೆ ಕಾರಣವಾಗಿದೆ. ಇದರ ಸೌಂದರ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬೆಂಗಳೂರಿನ ಮರ ವಿಜ್ಞಾನ ಸಂಶೋಧನಾ ಸಂಸ್ಥೆ ಹಾಗೂ ಇತರ ತಜ್ಞರ ಸಲಹೆಗಳನ್ನು ಪಡೆದುಕೊಳ್ಳಲಾಗುತ್ತಿದೆ,” ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Sabarimala Temple : ಅಯ್ಯಪ್ಪ ಭಕ್ತರೇ ಗಮನಿಸಿ; ವಿಮಾನ ಪ್ರಯಾಣದಲ್ಲಿ ಕ್ಯಾಬಿನ್‌ನಲ್ಲಿಯೇ ‘ಇರುಮುಡಿ’ ಇಟ್ಟುಕೊಳ್ಳಲು ಅವಕಾಶ

ಸಂಗೀತ ಕಛೇರಿ ಮತ್ತು ನೃತ್ಯ ಆಯೋಜಿಸಲೆಂದೇ ಬ್ಯಾಂಡ್ ಸ್ಟ್ಯಾಂಡ್ ನಿರ್ಮಿಸಲಾಗಿತ್ತು. ಆರಂಭದಲ್ಲಿ ಕಛೇರಿಗಳನ್ನು ನಡೆಸಲಾಗುತ್ತಿದ್ದರೂ, ಈಗ ಅವುಗಳನ್ನು ಸಂಪೂರ್ಣ ನಿಲ್ಲಿಸಲಾಗಿತ್ತು. ಆಗಾಗ್ಗೆ ಕಛೇರಿಗಳನ್ನು ನಡೆಸುತ್ತಿದ್ದರೆ, ಇಂತಹ ವೇದಿಕೆಗಳಿಗೆ ಯಾವುದೇ ಧಕ್ಕೆ ಉಂಟಾಗುತ್ತಿರಲಿಲ್ಲ,” ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.