Friday, 20th September 2024

Laxmi hebbalkar: ಗಣೇಶ ಹಬ್ಬದೊಳಗೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಬಾಕಿ ವೇತನ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Laxmi Hebbalkar

ತುಮಕೂರು: ಗಣೇಶ ಹಬ್ಬದ ಒಳಗೆ ಕೋಲಾರ, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಯ  ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಬಾಕಿ ವೇತನ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ( Laxmi hebbalkar) ಹೇಳಿದರು. ‌

ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಆಗದ ವಿಚಾರಕ್ಕೆ ನಗರದ ಬಾಲಭವನ ಆವರಣದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದ ಬಳಿಕ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಸಂಬಳ ಕೊಡಲಾಗುತ್ತದೆ. ಈ ರೀತಿಯ ಸಮಸ್ಯೆ ಆಗುತ್ತಿರುವುದು ಇದೇ ಮೊದಲಲ್ಲ. ಕೇಂದ್ರ‌ ಸರ್ಕಾರ ಬಿಡುಗಡೆ ಮಾಡಿದಾಗ ನಾವು ರಾಜ್ಯ ಸರ್ಕಾರದ ಮೊತ್ತ ಸೇರಿಸಿ ಸಂಬಳ ನೀಡಬೇಕಾಗುತ್ತದೆ. ಕೇಂದ್ರದಿಂದ ಹಣ ಇನ್ನೂ ಬಂದಿಲ್ಲ. ಈಗಾಗಲೇ ನಾವು ಮೂರು ನಾಲ್ಕು ಬಾರಿ ಪತ್ರ ಬರೆದಿದ್ದೇವೆ ಎಂದು ಹೇಳಿದರು.

ನಮ್ಮ ಇಲಾಖೆ ನಿರ್ದೇಶಕರು ಮೊನ್ನೆಯಷ್ಟೇ ದೆಹಲಿಗೆ ಹೋಗಿ ಬಂದಿದ್ದಾರೆ. ಆದಷ್ಟು ಬೇಗ ನೀಡಲಾಗುವುದು. ಗಣಪತಿ ಹಬ್ಬದ ಒಳಗೆ ಸಂಬಳ ನೀಡುವ ಪ್ರಯತ್ನಿಸಲಾಗುವುದು. ನಮ್ಮ ಇಲಾಖೆಯಲ್ಲಿ ಬಹಳಷ್ಟು ಯೋಜನೆಗಳಿಗೆ ಎರಡೂ ಸರ್ಕಾರದ ಅನುದಾನ ಬಳಕೆ ಆಗುತ್ತದೆ. ವಿಳಂಬ ಮೊದಲಿನಿಂದಲೂ ಆಗಿದೆ, ಇನ್ಮುಂದೆ ಈ ರೀತಿ ಆಗದ ಹಾಗೆ ನೋಡಿಕೊಳ್ಳಲಾಗುವುದು ಎಂದರು.

ಗೃಹಲಕ್ಷ್ಮಿ ಖಾತೆಗಳು ಡಿಲೀಟ್ ಆಗಿವೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿ, ಇದುವರೆಗೂ ಒಂದೇ ಒಂದು ಗೃಹಲಕ್ಷ್ಮಿ ಯೋಜನೆ ಖಾತೆಯೂ ಡಿಲೀಟ್ ಆಗಿಲ್ಲ. ಯಾರು ಜಿ‌ಎಸ್‌ಟಿ, ಆದಾಯ ತೆರಿಗೆ ಕಟ್ಟುತ್ತಿದ್ದಾರೆ, ಅಂತಹವರದ್ದು ಅರ್ಜಿ ಅಪ್ ಲೋಡ್ ಮಾಡಿದಾಗಲೇ ಡಿಲೀಟ್ ಮಾಡಿದ್ದೇವೆ. ನೋಂದಣಿ ಆದ ಬಳಿಕ ನಾವು ಡಿಲೀಟ್ ಮಾಡಿಲ್ಲ. ಎಲ್ಲಾ ಜಿಲ್ಲೆಗಳಿಗೂ ಗೃಹಲಕ್ಷ್ಮಿ ಯೋಜನೆಯ 11ನೇ ಕಂತು ಹಣ ಬಿಡುಗಡೆ ಆಗಿದ್ದು, ಶೀಘ್ರವೇ 12ನೇ ಹಾಗೂ 13ನೇ ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | ಎತ್ತಿನಹೊಳೆ ಯೋಜನೆಗೆ ಪರಮಶಿವಯ್ಯ, ಎಸ್.ಎಂ.ಕೃಷ್ಣ ಹೆಸರಿಡಿ

ಕಾಂಗ್ರೆಸ್‌ನಲ್ಲಿ ಸಿಎಂ ಆಕಾಂಕ್ಷಿಗಳ ಪಟ್ಟಿ ಹೆಚ್ಚಳವಾಗಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ಶಿಸ್ತಿನ ಪಕ್ಷ, ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಹಿಂದುಳಿದ ವರ್ಗಗಳ ನಾಯಕರಾದ ಸಿದ್ದರಾಮಯ್ಯನವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಿಎಂ ಚೇರ್ ಖಾಲಿ ಇಲ್ಲ ಎಂದರು.

ಶೀಘ್ರವೇ ಜುಲೈ, ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಚಿತ್ರದುರ್ಗ : ಜುಲೈ ಹಾಗೂ ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ಶೀಘ್ರವೇ ಮನೆ ಯಜಮಾನಿಯರ ಖಾತೆಗೆ ಸಂದಾಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ, ಇದುವರೆಗೆ 11 ತಿಂಗಳ ಮೊತ್ತ ಸಂದಾಯವಾಗಿದ್ದು, ಶೀಘ್ರವೇ ಜುಲೈ ಹಾಗೂ ಆಗಸ್ಟ್ ತಿಂಗಳ ಹಣವೂ ಸಂದಾಯವಾಗಲಿದೆ. ಕೆಲವೊಂದು ತಾಂತ್ರಿಕ ಕಾರಣಗಳಿಂದ ಏಕಕಾಲದಲ್ಲಿ ಒಟ್ಟಿಗೆ ಹಣ ಸಂದಾಯವಾಗುತ್ತಿಲ್ಲ. ಒಂದು ವರ್ಷದಲ್ಲಿ 25 ಸಾವಿರ ಕೋಟಿ ರೂ ಮೊತ್ತವನ್ನು ಯೋಜನೆಗೆ ವ್ಯಯಿಸಲಾಗಿದೆ ಎಂದರು.

ಬಿಜೆಪಿಗರ ಕುತಂತ್ರಕ್ಕೆ ಶೀಘ್ರವೇ ಉತ್ತರ

ಕರ್ನಾಟಕದಲ್ಲಿ ಉತ್ತಮ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸ್ಥಿರವಾದ ಸರ್ಕಾರವನ್ನು ಅಸ್ಥಿರಗೊಳಿಸುವುದೇ ಬಿಜೆಪಿ ನಾಯಕರ ಉದ್ದೇಶ. ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಏನೆಲ್ಲಾ ಸರ್ಕಸ್ ನಡೆಸುತ್ತಿದೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಹೇಳಿದರು.

ಕೋವಿಡ್ ಕಾಲದ ಭ್ರಷ್ಟಾಚಾರ ಬಯಲು

ಕೋವಿಡ್ ವೇಳೆ ಬಿಜೆಪಿ ಸಚಿವರು ಮಾಡಿದ್ದ ಭ್ರಷ್ಟಾಚಾರ ಇಡೀ ರಾಜ್ಯಕ್ಕೆ ಗೊತ್ತಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ, ಮಾಸ್ಕ್, ಆಕ್ಸಿಜನ್, ಬೆಡ್ ಖರೀದಿ ಇನ್ನಿತರ ಪರಿಕರಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದರು. ಇದೀಗ ಕೋವಿಡ್ ಕಾಲದ ಭ್ರಷ್ಟಾಚಾರ ಕುರಿತು ರಚಿಸಲಾಗಿದ್ದ ತನಿಖಾ ಸಮಿತಿ ಸರ್ಕಾರಕ್ಕೆ ವರದಿ ನೀಡಿದ್ದು, ಈ ಕುರಿತು ಶೀಘ್ರವೇ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಮಾಜಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಕಿಡಿ

ಕಾಂಗ್ರೆಸ್ ನಾಯಕರು ಬೆಲೆ ನಿಗದಿ ಪಡಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವೆ, ಬಿ.ಸಿ.ಪಾಟೀಲರು ತಮ್ಮನ್ನು ತಾವೇ ಮಾರಿಕೊಂಡು ಬಿಜೆಪಿಗೆ ಹೋದವರು. ಇಂದು ಅವರಿಗೆ ತಮ್ಮ ಬೆಲೆ ಎಷ್ಟು ಎಂದು ಗೊತ್ತಾಗಿದೆ. ಇಂದು ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತಿದ್ದಾರೆ. ಬಿ.ಸಿ.ಪಾಟೀಲರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಸಚಿವರು ಹೇಳಿದರು.

ನಮ್ಮದು ಸ್ಥಿರ ಹಾಗೂ ಜನಪರ ಸರ್ಕಾರ, ಜನರ ಆಶೀರ್ವಾದದಿಂದ ಬಂದಿರುವ ಸರ್ಕಾರವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಬಿಜೆಪಿ-ಜೆಡಿಎಸ್ ಪಕ್ಷಗಳು ಇದೀಗ ಕಿಚಡಿ ಮೈತ್ರಿ ಮಾಡಿಕೊಂಡಿವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಟೀಕಿಸಿದರು.