Tuesday, 22nd October 2024

ಪರ್ಯಾಯ ನಾಯಕತ್ವದ ಸಮೀಕ್ಷೆ

ರಾಜ್ಯದಲ್ಲಿ ಮೂರು ಸರ್ವೇ ಸಂಸ್ಥೆಗಳು ಸಕ್ರಿಯ 

ಮುಂದಿನ ವಿಧಾನಸಭಾ ಚುನಾವಣೆ ಸಾಧಕ-ಬಾಧಕ ಲೆಕ್ಕಾಚಾರ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ರಾಜ್ಯದಲ್ಲಿ ಬೀದಿ ರಂಪಾಟವಾಗಿದ್ದ ಬಿಜೆಪಿ ನಾಯಕತ್ವ ವಿಚಾರ ಸದ್ಯ ಮಳೆ ಬಂದು ನಿಂತಂತೆ ಆಗಿದ್ದು, ಮುಖ್ಯಮಂತ್ರಿ ಪರ-ವಿರೋಧ ಶಾಸಕರು ಕದನ ವಿರಾಮ ಘೋಷಿಸಿದಂತೆ ಕಾಣುತ್ತಿದೆ. ಆದರೆ, ಇತ್ತ ಬಿಜೆಪಿ ಹೈಕಮಾಂಡ್ ಸದ್ದಿಲ್ಲದೆ ರಾಜ್ಯ ರಾಜಕಾರಣದ ಸಾಧಕ-ಬಾಧಕದ ಸರ್ವೇ ಕಾರ್ಯ ಆರಂಭಿಸಿದೆ.

ದೆಹಲಿಯ ಬಿಜೆಪಿ ಕಚೇರಿ ಮೂಲಗಳ ಪ್ರಕಾರ ರಾಜ್ಯ ನಾಯಕತ್ವ ಬದಲಾವಣೆ ಸಾಧ್ಯಾಸಾಧ್ಯತೆಗಳು ಹಾಗೂ ಮುಂದಿನ ಚುನಾವಣೆಯಲ್ಲಿ ಅದರ ಪರಿಣಾಮ ಕುರಿತ ಸರ್ವೇ ಕಾರ್ಯ ರಾಜ್ಯದಲ್ಲಿಸುಪ್ತವಾಗಿ ನಡೆಯುತ್ತಿದೆ. ಈ ಸರ್ವೇ ಮುಂದಿನ ೧೦ ದಿನಗಳಲ್ಲಿ ಪೂರ್ಣ ಗೊಳ್ಳಲಿದ್ದು, ನಂತರ ಹೈಕಮಾಂಡ್‌ನಲ್ಲಿ ರಾಜ್ಯ
ಮೂಲದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೊಬ್ಬರ ಕೈ ಸೇರುವ ಸಾಧ್ಯತೆ ಇದೆ. ಆನಂತರ ಪಕ್ಷದ ವರಿಷ್ಠ ನಾಯಕರಾದ ಪ್ರಧಾನಿ ನರೇಂದ್ರ
ಮೋದಿ ಹಾಗೂ ಅಮಿತ್ ಶಾ ಅವರು ಪರ್ಯಾಯ ನಾಯಕತ್ವದ ತೀರ್ಮಾನ ಮಾಡುತ್ತಾರೆ ಎನ್ನಲಾಗಿದೆ.

ಈ ವಿಚಾರ ಮುಖ್ಯಮಂತ್ರಿ ಯಡಿಯೂರಪ್ಪ ಬಣಕ್ಕೂ ಹಾಗೂ ನಾಯಕತ್ವ ಬದಲಾವಣೆಗೆ ದನಿ ಎತ್ತಿರುವ ಸಚಿವ ಯೋಗೇಶ್ವರ, ಅರವಿಂದ್ ಬೆಲ್ಲದ್ ಹಾಗೂ ಯತ್ನಾಳ್ ನೇತೃತ್ವದ ಬಣಕ್ಕೂ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಬಣದ ಶಾಸಕರೂ ಕದನ ವಿರಾಮ ಘೋಷಣೆ ಮಾಡಿ ಮೌನಕ್ಕೆ ಶರಣಾಗಿzರೆ
ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸರ್ವೇ ಕಾರ್ಯಸೂಚಿಗಳೇನು?
ಸದ್ಯಕ್ಕೆ ನಾಯಕತ್ವ ಬದಲಾವಣೆ ಆಗತ್ಯವಿದೆಯೇ? ನಾಯಕತ್ವ ಬದಲಿಸಿದರೆ ಏನೆ ಬದಲಾವಣೆ ಆಗಲಿದೆ? ಬಣ ರಾಜಕಾರಣವಾದರೆ ಯಾರ ಕೈ ಮೇಲಾಗು ತ್ತದೆ? ಇದರ ಪರಿಣಾಮ ಮುಂದಿನ ಚುನಾವಣೆ ಸಂದರ್ಭದಲ್ಲಿ ಹೇಗಿರುತ್ತದೆ? ಯಡಿಯೂರಪ್ಪ ಅವರನ್ನು ಮುಂದುವರಿಸಿದರೆ ಏನಾಗುತ್ತದೆ? ಬದಲಾವಣೆ ಮಾಡದೆ ಮುಂದುವರಿಸಿದರೆ ಪಕ್ಷಕ್ಕೆ ಹೇಗೆ ಲಾಭವಾಗುತ್ತದೆ? ಆಕಾಂಕ್ಷಿಗಳದೇ ತಲೆನೋವು ಸದ್ಯ ಮುಖ್ಯಮಂತ್ರಿ ಸ್ಪರ್ಧೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದಿಂದ ಜಗದೀಶ್ ಶೆಟ್ಟರ್, ಲಕ್ಷ ಣ ಸವದಿ, ಬಸವರಾಜ ಬೊಮ್ಮಾಯಿ, ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಿ.ಸಿ.ಪಾಟೀಲ್ ಇದ್ದಾರೆ.

ಇದೇ ರೀತಿ ಒಕ್ಕಲಿಗ ಸಮುದಾಯದಿಂದ ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಸಿ.ಟಿ.ರವಿ. ಆರ್.ಅಶೋಕ್ ಹಾಗೂ ಡಿ.ವಿ.ಸದಾನಂದ ಗೌಡ ಸರದಿಯಲ್ಲಿದ್ದಾರೆ.
ನಂತರ ದಲಿತ ಸಿಎಂ ವಿಚಾರಕ್ಕೆ ಬಂದರೆ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ ಮತ್ತು ಕುಡಚಿ ಶಾಸಕ ಪಿ.ರಾಜೀವ್ ಆಕಾಂಕ್ಷಿಗಳಾಗಿದ್ದಾರೆ. ಇನ್ನು
ಪರಿಶಿಷ್ಟ ಪಂಗಡಗಳಲ್ಲಿ ಬಿ.ಶ್ರೀರಾಮಲು ಮತ್ತು ರಮೇಶ್ ಜಾರಕಿಹೊಳಿ ಸ್ಪರ್ಧೆಯಲ್ಲಿದ್ದಾರೆ. ಇಂಥ ಕಠಿಣ ಸನ್ನಿವೇಶದಲ್ಲಿ ಹೈಕಮಾಂಡ್ ನಡೆಸುತ್ತಿರುವ
ಸಮೀಕ್ಷೆ ಯಾವ ದಿಕ್ಕಿನಲ್ಲಿ ನಡೆಯುತ್ತದೆ. ಈ ಸರ್ವೇ ಮೂಲಕ ಪರ್ಯಾಯ ನಾಯಕತ್ವ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ
ಪಕ್ಷದ ಪರ-ವಿರೋಧ ಬಣಗಳಲ್ಲಿ ಮನೆ ಮಾಡಿದೆ ಎಂದು ಮೂಲಗಳು ಹೇಳಿವೆ.

ಏನಿದು ಸರ್ವೇ, ಯಾರಿಂದ?
ನಾಯಕತ್ವ ಬದಲಾವಣೆ ವಿಚಾರ ವಿಪರೀತಕ್ಕೆ ಹೋಗುತ್ತಿದ್ದಂತೆ ಇತ್ತೀಚಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಹೈಕಮಾಂಡ್ ಸೂಚಿಸಿದರೆ
ರಾಜೀನಾಮೆ ಸಲ್ಲಿಸುತ್ತೇನೆ ಎಂದು ಭಿನ್ನರಿಗೆ ತಿರುಗೇಟು ನೀಡಿದ್ದರು. ಅಷ್ಟೇ ಅಲ್ಲ, ಭವಿಷ್ಯಕ್ಕೆ ಪರ್ಯಾಯ ನಾಯಕತ್ವ ಬೇಕಾಗುತ್ತದೆ ಎನ್ನುವ ವಾದವನ್ನೂ ಅವರು ಬೆಂಬಲಿಸಿದ್ದೂ ಉಂಟು. ಈ ಹಿನ್ನೆಲೆಯಲ್ಲಿ ತುರ್ತು ಸನ್ನಿವೇಶಕ್ಕೆ ಅಲ್ಲದಿದ್ದರೂ ಪಕ್ಷದ ಭವಿಷ್ಯದ ದೃಷ್ಟಿಯಿಂದ ನಾಯಕತ್ವ ಹುಡುಕಾಟ ಕೊಂಚ ಗಂಭೀರವಾಗಿಯೇ ಸಾಗಿದೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ದೆಹಲಿ ಮೂಲದ ಮೂರು ಸಂಸ್ಥೆಗಳಿಗೆ ನಾಯಕತ್ವ ಕುರಿತ ಸಮೀಕ್ಷೆ ಕಾರ್ಯದ ಹೊಣೆ ಹೊರಿಸಲಾಗಿದೆ. ಈ ಮೂರು ಸಂಸ್ಥೆಗಳಿಗೂ ಒಂದೇ ರೀತಿಯ ಕಾರ್ಯಸೂಚಿಗಳನ್ನು ನೀಡಲಾಗಿದೆ. ಏಕೆಂದರೆ, ಕೆಲವು ಸಂಸ್ಥೆಗಳು ಪೂರ್ವ ಗ್ರಹಪೀಡಿತವಾಗಿ ಅಥವಾ ಒಬ್ಬರಿಗೆ ಅನುಕೂಲವಾಗುವಂತೆ ವರದಿ ಸಲ್ಲಿಸಬಹುದು ಎನ್ನುವ ಕಾರಣಕ್ಕೆ ಮೂರು ಸಂಸ್ಥೆಗಳಿಂದ ಸಮೀಕ್ಷೆ ಮಾಡಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಸರ್ವೇ ಕಾರ್ಯದಲ್ಲಿ ತೊಡಗಿರುವ ಕಾರ್ಯಕರ್ತರು ಈಗಾಗಲೇ ಅನೇಕ ರಾಜಕೀಯ ಚಿಂತಕರು, ರಾಜಕಾರಣಿಗಳನ್ನು ಸಂಪರ್ಕಿಸಿ ಮಾಹಿತಿ ಕೇಳಿದ್ದಾರೆ. ಬೆಂಗಳೂರು ಸೇರಿದಂತೆ ಕೆಲವು ಮಹಾನಗರಗಳಲ್ಲಿ ಸಾಮಾನ್ಯ ಜನರು, ಪತ್ರಕರ್ತರು ಹಾಗೂ ಸಮುದಾಯಗಳ ನಾಯಕರನ್ನು ಸರ್ವೇ ಕಾರ್ಯಕರ್ತರು ಮಾತನಾಡಿಸಿ, ಅಭಿಪ್ರಾಯ ಕಲೆ
ಹಾಕಿzರೆ ಎಂದೂ ಹೇಳಲಾಗಿದೆ.