Thursday, 19th September 2024

Leopard Spotted: ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಚಿರತೆ ಪ್ರತ್ಯಕ್ಷ; ಸ್ಥಳೀಯರಲ್ಲಿ ಆತಂಕ

Leopard Spotted

ಬೆಂಗಳೂರು: ಕಳೆದ 15 ದಿನದಿಂದ ಜಿಗಣಿ ಕೈಗಾರಿಕಾ ಪ್ರದೇಶದ ಸುತ್ತಮುತ್ತ ಕಾಣಿಸಿಕೊಂಡಿದ್ದ ಚಿರತೆ, ಈಗ ದಿಢೀರ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಸೋಮವಾರ ತಡರಾತ್ರಿ 3 ಗಂಟೆ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿ ಟೋಲ್ ಬಳಿ ಎನ್‌ಟಿಟಿಎಫ್ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ.

ಎನ್‌ಟಿಟಿಎಫ್ ಆವರಣದೊಳಗೆ ಹಾರಿದ್ದ ಚಿರತೆ ಮತ್ತೆ ಅದೇ ರಸ್ತೆಗೆ ವಾಪಸ್ ಬಂದು ಇನ್ನೊಂದು ಭಾಗಕ್ಕೆ ಜಿಗಿದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಅಧಿಕಾರಿಗಳು ಎನ್‌ಟಿಟಿಎಫ್ ಆವರಣ ಹಾಗೂ ಸುತ್ತಮುತ್ತ ಚಿರತೆಗಾಗಿ ಹುಡುಕಾಟ ನಡೆಸಿದ್ದಾರೆ.

ಕಾಲೇಜಿನ ಆವರಣದ ಒಳಗೆ ಇರುವ ಸಿಸಿಟಿವಿ ಹಾಗೂ ಕೊಠಡಿಗಳಲ್ಲಿ ಹುಡುಕಾಟ ನಡೆಸಿದ್ದು, ಚಿರತೆ ಪತ್ತೆ ಆಗಿಲ್ಲ. ಇಂದು ಮತ್ತೆ ಚಿರತೆಗಾಗಿ ಹುಡುಕಾಟ ನಡೆಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ ಎಂದು ಎನ್‌ಟಿಟಿಎಫ್ ಪ್ರಿನ್ಸಿಪಾಲ್ ಸುನಿಲ್ ಜೋಶಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Bengaluru Power Cut: ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಬೆಂಗಳೂರಿನ ಮಾಲ್‌ನಲ್ಲಿ ʼವಿಐಪಿ ಶೌಚಾಲಯʼ; 1 ಸಾವಿರ ಖರ್ಚು ಮಾಡಿದ್ರೆ ಮಾತ್ರ ಎಂಟ್ರಿ!

ಬೆಂಗಳೂರು: ಜಿ.ಟಿ.ಮಾಲ್‌ನಲ್ಲಿ ಪಂಚೆ ಧರಿಸಿ ಹೋಗಿದ್ದ ರೈತನಿಗೆ ಪ್ರವೇಶ ನಿರಾಕರಿಸಿದ್ದ ಘಟನೆ ನಡೆದ ಬೆನ್ನಲ್ಲೇ ರಾಜಧಾನಿಯ ಮತ್ತೊಂದು ಮಾಲ್‌ನಲ್ಲಿ ವಿವಾದಾತ್ಮಕ ನಿಯಮ ರೂಪಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಮಾಲ್‌ಗಳಲ್ಲಿ ಶೌಚಾಲಯ ಬಳಕೆಗೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ, ಇಲ್ಲೊಂದು ಮಾಲ್‌ನಲ್ಲಿ ಕನಿಷ್ಠ 1000 ರೂ. ಖರ್ಚು ಮಾಡಿದರೆ ಮಾತ್ರ ಶೌಚಾಲಯ ಬಳಕೆಗೆ ಅವಕಾಶ ನೀಡಲಾಗುತ್ತಿದೆ ಎಂಬ ಅರೋಪ ಕೇಳಿಬಂದಿದೆ.

ಈ ಬಗ್ಗೆ ಗ್ರಾಹಕರೊಬ್ಬರು ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾರೆ. ನನಗೆ ವಾರಾಂತ್ಯದಲ್ಲಿ ಮಾಲ್‌ ಒಂದರಲ್ಲಿ ಕೆಟ್ಟ ಅನುಭವವಾಗಿದೆ. ನಾನು ಚರ್ಚ್‌ಸ್ಟ್ರೀಟ್‌ನಿಂದ ಶಾಪಿಂಗ್ ಮಾಡಲು ದೂರದ ವೈಟ್‌ಫೀಲ್ಡ್‌ನ ಶಾಪಿಂಗ್‌ ಮಾಲ್‌ಗೆ ಹೋಗಿದ್ದೆ. ಶಾಪಿಂಗ್‌ಗೆ ಹೋಗುವ ಮೊದಲು ರೆಸ್ಟ್‌ರೂಮ್ ಎಲ್ಲಿದೆ ಸಿಬ್ಬಂದಿಯನ್ನು ಕೇಳಿ, ಬಳಸಲು ಹೋದೆನು. ಆದರೆ, ಸಿಬ್ಬಂದಿ ಮಾತ್ರ ನೀವು ಬೇರೆ ಮೇಲಿನ ಮಹಡಿಯಲ್ಲಿರುವ ಶೌಚಾಲಯ ಬಳಸುವಂತೆ ಸೂಚಿಸಿದರು. ನಾನು ಆ ಶೌಚಾಲಯಕ್ಕೆ ಹೋಗಿ ನೋಡಿದಾಗ, ಅಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿತ್ತು ಎಂದು ಹೇಳಿದ್ದಾರೆ.

ಗ್ರೌಂಡ್‌ ಫ್ಲೋರ್‌ನಲ್ಲಿದ್ದ ಶೌಚಾಲಯವನ್ನು ವಿಐಪಿ ಶೌಚಾಲಯವಾಗಿ ನಿಗದಿ ಮಾಡಲಾಗಿದೆ. ಆ ರೆಸ್ಟ್ ರೂಮ್ ಬಳಸಲು ನಾನು ಹೋದಾಗ, ಮಹಿಳಾ ಸಿಬ್ಬಂದಿ ತಡೆದು ಬಿಲ್‌ ತೋರಿಸುವಂತೆ ಹೇಳಿದರು. ಈ ವೇಳೆ ಇಂತಹುದೇ ಅನುಭವ ಎದುರಿಸಿದ ಮತ್ತೊಬ್ಬ ಗ್ರಾಹಕ ಬಂದು, ನಾವು ಇಲ್ಲಿ 1,000 ರೂ.ಗಿಂತ ಹೆಚ್ಚು ಶಾಪಿಂಗ್ ಮಾಡಿದ ಬಿಲ್ ಇದ್ದರೆ ಮಾತ್ರ ಈ ಶೌಚಾಲಯ ಬಳಸಬಹುದು ಎಂದು ಹೇಳಿದರು. ಇದನ್ನು ಕೇಳಿ ನನಗೆ ಆಘಾತವಾಯಿತು. ಶೌಚಾಲಯವನ್ನು ಬಳಸಲು ಬಿಲ್ ಯಾಕೆ ಬೇಕು? ಎಂಬ ಪ್ರಶ್ನೆ ನನ್ನಲ್ಲಿ ಉದ್ಭವಿಸಿತು ಎಂದು ತಿಳಿಸಿದ್ದಾರೆ.

ಇನ್ನು ಎಲ್ಲರನ್ನೂ ಮೇಲಿನ ಮಹಡಿಯ ಶೌಚಾಲಯಕ್ಕೆ ಕಳುಹಿಸುತ್ತಿದ್ದ ಹಿನ್ನೆಲೆಯಲ್ಲಿ ಆ ಶೌಚಾಲಯ ಅವ್ಯವಸ್ಥೆಯ ಆಗರವಾಗಿತ್ತು. ಸೂಕ್ತ ನಿರ್ವಹಣೆ ಇಲ್ಲದೆ ದುರ್ವಾಸನೆ ಬೀರುತ್ತಿತ್ತು. ಅಲ್ಲಿನ ಫ್ಲಶ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಗ್ರಾಹಕ ಅಸಮಾಧಾನ ಹೊರಹಾಕಿದ್ದು, ಮಾಲ್‌ನವರ ಇಂತಹ ನಿಯಮಗಳು ಅನಗತ್ಯ ಸಾಮಾಜಿಕ ವಿಭಜನೆಗೆ ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Viral Video: ಐಎಎಸ್ ಅಧಿಕಾರಿ ಮುಂದೆಯೇ ನಿರರ್ಗಳ ಇಂಗ್ಲಿಷ್‌ ಮಾತನಾಡಿದ ಹಳ್ಳಿಯ ಮಹಿಳೆ ; ವಿಡಿಯೊ ಇದೆ

ಇನ್ನು ಇದರ ಬಗ್ಗೆ ಹಲವು ಗ್ರಾಹಕರು ಕಾಮೆಂಟ್‌ ಮಾಡಿದ್ದು, ಇದು ತಾರತಮ್ಯದ ಸ್ಪಷ್ಟ ಉದಾಹರಣೆಯಾಗಿದೆ. ಯಾರು ಏನೇ ಖರೀದಿ ಮಾಡಿದರೂ, ಮೂಲಭೂತ ಸೌಲಭ್ಯ ವಿಚಾರದಲ್ಲಿ ಸಮಾನವಾಗಿ ಕಾಣಬೇಕು ಎಂದು ಹೇಳಿದ್ದಾರೆ.