Thursday, 21st November 2024

Liver Donation: 3 ಗಂಟೆಯೊಳಗೆ ಬೆಳಗಾವಿಯಿಂದ ಬೆಂಗಳೂರು ತಲುಪಿದ ಯಕೃತ್‌!; ಸಾವಿನಲ್ಲೂ 16 ವರ್ಷದ ಬಾಲಕನ ಸಾರ್ಥಕತೆ

Liver Donation

ಬೆಂಗಳೂರು: ಅಂಗಾಂಗ ಕಸಿಯಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ಸ್ಪರ್ಷ್‌ ಆಸ್ಪತ್ರೆ ಸಮೂಹ ಮತ್ತೊಂದು ಸಾಧನೆ ಬರೆದಿದೆ. 63 ವರ್ಷದ ರೋಗಿಯೊಬ್ಬರಿಗೆ ಸಾವಿನಲ್ಲೂ ಸಾರ್ಥಕತೆ ಮೆರೆದ 16 ವರ್ಷದ ಬಾಲಕನ ಯಕೃತ್‌ ಕಸಿ ಮಾಡಿ ಜೀವದಾನ ನೀಡಿದೆ. ಬೆಳಗಾವಿಯಿಂದ ಬುಧವಾರ ತಡೆ ರಹಿತ ಸಂಚಾರದ ಮೂಲಕ ಕೇವಲ 3 ಗಂಟೆಯಲ್ಲಿ ಬೆಂಗಳೂರಿನ ಯಶವಂತಪುರದ ಸ್ಪರ್ಶ್‌ ಆಸ್ಪತ್ರೆ ತಲುಪಿದ ಬಾಲಕನ ಯಕೃತ್‌ (Liver Donation) ಸನ್ನದ್ಧವಾಗಿ ನಿಂತಿದ್ದ ಪರಿಣಿತ ಕಸಿ ತಜ್ಞ ವೈದ್ಯರ ತಂಡದಿಂದ ಯಕೃತ್‌ಗಾಗಿ ಕಳೆದೊಂದು ವರ್ಷದಿಂದ ಕಾಯುತ್ತಿದ್ದ ರೋಗಿಯ ದೇಹಕ್ಕೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ.

ಬೆಂಗಳೂರು ಸ್ಪರ್ಶ್‌ ಆಸ್ಪತ್ರೆಯ ವೈದ್ಯಕೀಯ ತಂಡ, ಕರ್ನಾಟಕ ರಾಜ್ಯ ಅಂಗಾಂಗ ಮತ್ತು ಜೀವಕೋಶ ಕಸಿ ಪ್ರಾಧಿಕಾರ ʼಜೀವನ ಸಾರ್ಥಕತೆʼ ಮತ್ತು ಇಂಡಿಗೋ ಏರ್‌ಲೈನ್ಸ್‌ನ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಪೊಲೀಸರು, ಸಂಚಾರ ಪೊಲೀಸರ ನೆರವಿನೊಂದಿಗೆ ಗ್ರೀನ್‌ ಕಾರಿಡಾರ್‌ (ಝೀರೋ ಟ್ರಾಫಿಕ್‌) ಮೂಲಕ ಯಕೃತ್‌ ಅನ್ನು ಯಾವುದೇ ಅಡೆತಡೆಯಿಲ್ಲದೇ ಶರವೇಗದಂತೆ ಬೆಂಗಳೂರಿಗೆ ತಂದು ತಕ್ಷಣವೇ ಕಸಿ ಮಾಡಲಾಗಿದೆ.

ಮಂಗಳವಾರ ರಾತ್ರಿ ನಿಧನ ಹೊಂದಿದ್ದ 16 ವರ್ಷದ ಬೆಳಗಾವಿಯ ಬಾಲಕನ ಕುಟುಂಬ ಯಕೃತ್‌ ದಾನ ಮಾಡುವ ಅತ್ಯಂತ ಶ್ರೇಷ್ಠ ನಿರ್ಧಾರವನ್ನು ಕೈಗೊಂಡಿತ್ತು. ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದ ಬಾಲಕನ ದೇಹದಿಂದ ಯಕೃತ್‌ನ್ನು ಬೇರ್ಪಡಿಸಿ ತಕ್ಷಣ ಝೀರೋ ಟ್ರಾಫಿಕ್‌ ಮೂಲಕ ಒಂದು ಗಂಟೆಯೊಳಗೆ ಹುಬ್ಬಳ್ಳಿಗೆ ತಲುಪಿಸಲಾಯಿತು. ಅಲ್ಲಿ ಸಿದ್ಧವಾಗಿ ನಿಂತಿದ್ದ ಇಂಡಿಗೋ ಏರ್‌ಲೈನ್ಸ್‌ ವಿಮಾನ ಮೂಲಕ ಪ್ರಯಾಣಿಕರ ಆಸನದಲ್ಲೇ ಬಾಲಕನ ಯಕೃತ್‌ನ ಶೀತಲೀಕೃತ ಬಾಕ್ಸ್‌ ಇರಿಸಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಬೆಳಗ್ಗೆ 9.35ಕ್ಕೆ ವಿಮಾನ ಭೂ ಸ್ಪರ್ಶ ಮಾಡುತ್ತಿದ್ದಂತೆ ಧಾವಿಸಿ ಬಂದ ಆಂಬುಲೆನ್ಸ್‌ ಮತ್ತು ವೈದ್ಯಕೀಯ ತಂಡ ಯಕೃತ್‌ನ್ನು ಯಶವಂತಪುರದ ಸ್ಪರ್ಶ್‌ ಆಸ್ಪತ್ರೆಗೆ ಝೀರೋ ಟ್ರಾಫಿಕ್‌ ಮೂಲಕ ತಲುಪಿಸಿತು.

ಈ ಸುದ್ದಿಯನ್ನೂ ಓದಿ | Exercise Tips: ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದೇ?

ಇಂತಹ ಸಂಕೀರ್ಣ ಪರಿಸ್ಥಿತಿಗಳಲ್ಲಿ ತಂಡದ ವ್ಯವಸ್ಥಿತ ಸಹಕಾರದ ಮಹತ್ವದ ಕುರಿತು ಶ್ಲಾಘನೆ ವ್ಯಕ್ತಪಡಿಸಿದ ಸ್ಪರ್ಶ್‌ ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ.ಶರಣ್‌ ಶಿವರಾಜ್‌ ಪಾಟೀಲ್‌, “ಈ ಸಾಧನೆಯು ಪರಿಣಾಮಾತ್ಮಕವಾದ ಪ್ರಯತ್ನದ ಫಲಶೃತಿಯನ್ನು ಎತ್ತಿ ತೋರಿಸುತ್ತದೆ. ನಿಧನ ಹೊಂದಿದ ಬಾಲಕನ ಕುಟುಂಬದ ಸರ್ವೋತ್ಕೃಷ್ಟ ನಿರ್ಧಾರದಿಂದ ಅಂಗಾಂಗ ಕಸಿ ಪ್ರಾಧಿಕಾರ, ಪೊಲೀಸ್‌ ಇಲಾಖೆ, ಇಂಡಿಗೋ ಏರ್‌ಲೈನ್ಸ್‌ ಸೇರಿದಂತೆ ಪ್ರತಿಯೊಬ್ಬರ ಸಮನ್ವಯ ಸಹಕಾರ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಯಕೃತ್‌ ಕಸಿಯಲ್ಲಿ ಸ್ಪರ್ಷ್‌ ಆಸ್ಪತ್ರೆ ಸಮೂಹ ಮಂಚೂಣಿಯಲ್ಲಿರುವುದಕ್ಕೆ, ತಮ್ಮ ಮರುಜೀವ ಮತ್ತು ಮರುಜೀವನದ ನಿರೀಕ್ಷೆಯಲ್ಲಿರುವ ರೋಗಿಗಳಿಗೆ ಆಶಾಕಿರಣವಾಗಿರುವುದಕ್ಕೆ ನಮಗೆ ಹೆಮ್ಮೆಯೆನಿಸುತ್ತದೆ” ಎಂದು ತಿಳಿಸಿದ್ದಾರೆ.