ವಿಶ್ವವಾಣಿ ವರದಿ
ಕಲಬುರಗಿ: ಅಡುಗೆ ಸಹಾಯಕರ ಹಾಜರಾತಿ ನೀಡಲು ಲಂಚಕ್ಕೆ (Bribe) ಬೇಡಿಕೆ ಇಟ್ಟು, 15 ಸಾವಿರ ಪಡೆಯುತ್ತಿದ್ದ ವೇಳೆ ವಸತಿ ನಿಲಯದ ವಾರ್ಡನ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಲಬುರಗಿಯಲ್ಲಿ (Kalaburagi news) ಘಟನೆ ನಡೆದಿದೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷ ಬಿ.ಕೆ ಉಮೇಶ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಗುಲಬರ್ಗಾ ವಿವಿಯ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಸ್ನಾತಕೋತ್ತರ ಬಾಲಕರ ವಸತಿ ನಿಲಯದ ವಾರ್ಡನ್ ಶಿವಶರಣಪ್ಪ ಅವರನ್ನು ಬಂಧಿಸಲಾಗಿದೆ.
ಗ್ರೂಪ್ ಡಿ ನೌಕರ ಅಡುಗೆ ಸಹಾಯಕ ಶ್ರೀಮಂತ ಎನ್ನುವವರ ದೂರಿನನ್ವಯ ದಾಳಿ ನಡೆದಿದ್ದು, ಹಾಸ್ಟೆಲ್ ವಾರ್ಡನ್ ಶಿವಶರಣಪ್ಪ ಅಡುಗೆ ಸಹಾಯಕರಿಗೆ ಹಾಜರಾತಿ ನೀಡಲು ಪ್ರತಿ ತಿಂಗಳು ಗ್ರೂಪ್ ಡಿಯ ಎಲ್ಲಾ ಅಡುಗೆ ಸಹಾಯಕರು 20,000 ರುಪಾಯಿ ಹಣ ನೀಡಬೇಕು ಎಂದು ತಾಕೀತು ಮಾಡಿದ್ದರು. ಹಣ ನೀಡದಿದ್ದರೆ ಹಾಜರಾತಿ ಕೊಡುವುದಿಲ್ಲ. ಸಂಬಳ ಮಾಡಿಸುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದರು.
ಇದರಿಂದ ಬೇಸತ್ತ ಶ್ರೀಮಂತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರು. ಗುರುವಾರ ವಾರ್ಡನ್ 15,000 ರುಪಾಯಿ ಹಣ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತರಿಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾರೆ. ಡಿವೈಎಸ್ಪಿ ಗೀತಾ ಬೆನಾಳ ತಂಡದಿಂದ ತನಿಖೆ ನಡೆಯುತ್ತಿದ್ದು, ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳಾದ ಡಿವೈಎಸ್ಪಿ ಗೀತಾ ಬೆನಾಳ . ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಬಸವರಾಜ್, ಪ್ರದೀಪ್, ಪೈ ಮುದ್ದಿನ್, ರೇಣುಕಮ್ಮ, ಪೌಡಪ್ಪ, ಸಂತೋಷಮ್ಮ, ಗುಂಡಪ್ಪ ಸೇರಿ ಸಿಬ್ಬಂದಿ ಇದ್ದರು.
ಈ ಸುದ್ದಿ ಓದಿ: Lokayukta Action: ತ್ಯಾಜ್ಯ ವಿಲೇವಾರಿ ಮಾಡದ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲು : ಲೋಕಾಯುಕ್ತ ನ್ಯಾಯಮೂರ್ತಿ