ಬೆಂಗಳೂರು: ಮಹಾಲಯ ಅಮಾವಾಸ್ಯೆಯ ಪಿತೃಪಕ್ಷ ಹಬ್ಬದಂದು ಮಾಂಸಾಹಾರ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ಈ ಬಾರಿ ಗಾಂಧಿ ಜಯಂತಿಯಂದೇ (ಅಕ್ಟೋಬರ್ 2) ಮಹಾಲಯ ಅಮಾವಾಸ್ಯೆಯ ಪಿತೃಪಕ್ಷ ಹಬ್ಬ ಬರುತ್ತಿದೆ. ಅಂದು ಮಾಂಸ ಮಾರಾಟ ನಿಷೇಧ ಇರುವುದರಿಂದ ಪಿತೃಪಕ್ಷ ಹಬ್ಬ ಆಚರಿಸಲು ಅಡ್ಡಿಯಾಗುತ್ತಿದೆ. ಹೀಗಾಗಿ ವಿಶೇಷ ಸಂದರ್ಭವೆಂದು ಪರಿಗಣಿಸಿ ಮಾಂಸ ಮಾರಾಟ ನಿಷೇಧ ಆದೇಶವನ್ನು ಸಡಿಲಿಸುವಂತೆ ಬಿಬಿಎಂಪಿಗೆ ಕರ್ನಾಟಕ ಕೋಳಿ ವ್ಯಾಪಾರಿಗಳ ಸಂಘ ಮನವಿ ಮಾಡಿದೆ (Mahalaya Amavasya 2024).
ಈ ಸಂಬಂಧ ಮುಖ್ಯಮಂತ್ರಿಗಳ ಕಚೇರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಬೆಂಗಳೂರು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರು ಮಧ್ಯಪ್ರವೇಶಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಎನ್.ನಾಗರಾಜು ತಿಳಿಸಿದ್ದಾರೆ.
”ಈ ಬಾರಿ ಅ. 2ರಂದೇ ಪಿತೃ ಪಕ್ಷದ ಹಬ್ಬ ಬಂದಿದೆ. ಆ ದಿನ ದೈವಾಧೀನರಾಗಿರುವವರಿಗೆ ಮಾಂಸ ಖಾದ್ಯಗಳನ್ನು ಎಡೆ ಇಟ್ಟು ಪೂಜಿಸಲಾಗುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಹಾಗಾಗಿ ಗಾಂಧಿ ಜಯಂತಿ ದಿನದಂದು ಮಾಂಸ ಮಾರಾಟ ನಿಷೇಧಿಸಿ ಹೊರಡಿಸಿರುವ ಆದೇಶ ಹಿಂಪಡೆಯುವಂತೆ ಸಿಎಂ, ನಗರಾಭಿವೃದ್ಧಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ” ಎಂದು ಅವರು ತಿಳಿಸಿದ್ದಾರೆ.
ಅಹಿಂಸೆಯ ಪ್ರತಿಪಾದಕರಾಗಿದ್ದ ಮಹಾತ್ಮಾ ಗಾಂಧಿ ಅವರ ಜಯಂತಿ ಹಿನ್ನಲೆಯಲ್ಲಿ ಪ್ರತಿ ವರ್ಷ ಅ. 2ರಂದು ಮಾಂಸ ಹಾಗೂ ಮದ್ಯ ಮಾರಾಟ ನಿಷೇಧ ಮಾಡಲಾಗುತ್ತದೆ. ಆ ದಿನ ಪೂರ್ತಿ ದೇಶದಾದ್ಯಂತ ಮಾಂಸ ಮದ್ಯ ಮಾರಾಟ ಇರುವುದಿಲ್ಲ. ಆದರೆ ಈ ಬಾರಿ ಅದೇ ದಿನದಂದು ಮಹಾಲಯ ಅಮಾವಾಸ್ಯೆಯ ಪಿತೃಪಕ್ಷ ಹಬ್ಬ ಬಂದಿದ್ದು, ಮಾಂಸ ದೊರೆಯದೆ ಸಮಸ್ಯೆಯಾಗುವ ಆತಂಕ ಎದುರಾಗಿದೆ. ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ಕೂಡಲೇ ಮಾಂಸ ಮಾರಾಟಕ್ಕೆ ಅವಕಾಶ ನೀಡುವ ಆದೇಶ ಹೊರಡಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: HD Kumaraswamy: ಐಪಿಎಸ್ ಅಧಿಕಾರಿ ಚಂದ್ರಶೇಖರ್ ಒಬ್ಬ ಕ್ರಿಮಿನಲ್, ಬ್ಲ್ಯಾಕ್ ಮೇಲರ್; ಎಚ್‌ಡಿ ಕುಮಾರಸ್ವಾಮಿ ಕಿಡಿ