ಪಿತೃಪಕ್ಷದ ಕೊನೆಯ ದಿನವಾದ ಮಹಾಲಯ ಅಮವಾಸ್ಯೆಯನ್ನು (Mahalaya Amavasya 2024) ಸರ್ವಪಿತೃ ಅಮವಾಸ್ಯೆ ಎಂದೂ ಕರೆಯಲಾಗುತ್ತದೆ. ಈ ದಿನ ಹಿಂದೂಗಳು (hindu) ತಮ್ಮ ಪೂರ್ವಜರಿಗೆ ಗೌರವ ಸಲ್ಲಿಸಿ ತರ್ಪಣ ಬಿಡುತ್ತಾರೆ. ಇದು 15 ದಿನಗಳ ಸುದೀರ್ಘ ಪಿತೃ ಪಕ್ಷದ ಶ್ರಾದ್ಧ ಆಚರಣೆಗಳ ಕೊನೆಯ ದಿನವಾಗಿದೆ. ಅಪಾರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ಮಹಾಲಯ ಅಮವಾಸ್ಯೆಯನ್ನು ಪೂರ್ವಜರ ಶಾಂತಿ ಮತ್ತು ಮೋಕ್ಷಕ್ಕಾಗಿ ಅಂತಿಮ ಆಚರಣೆಗಳನ್ನು ಮಾಡಲು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ.
ಈ ಬಾರಿ ಅಕ್ಟೋಬರ್ 2ರಂದು ಮಹಾಲಯ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಅಮವಾಸ್ಯೆ ತಿಥಿ ಅಕ್ಟೋಬರ್ 1ರಂದು ರಾತ್ರಿ 9.39ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 3ರಂದು ರಾತ್ರಿ 12.18ಕ್ಕೆ ಕೊನೆಗೊಳ್ಳುತ್ತದೆ.
ಮಹಾಲಯ ಅಮಾವಾಸ್ಯೆಯ ಮಹತ್ವ
ಅಮವಾಸ್ಯೆಯು ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಪಿತೃ ಪಕ್ಷ ಮಾಸದಲ್ಲಿ ಬರುವ ಅಮಾವಾಸ್ಯೆಯನ್ನು ಮಹಾಲಯ ಅಮವಾಸ್ಯೆ ಎಂದು ಕರೆಯಲಾಗುತ್ತದೆ. ಮೃತ ಕುಟುಂಬ ಸದಸ್ಯರಿಗೆ ವಿದಾಯ ಹೇಳುವ ಮೊದಲು ಕೊನೆಯ ಆಚರಣೆಗಳನ್ನು ಮಾಡುವ ಪ್ರಮುಖ ದಿನವೆಂದು ಈ ದಿನವನ್ನು ಪರಿಗಣಿಸಲಾಗಿದೆ.
ಇದನ್ನು ಸರ್ವ ಪಿತೃ ಅಮಾವಾಸ್ಯೆ, ಪಿತೃ ಮೋಕ್ಷ ಅಮಾವಾಸ್ಯೆ ಅಥವಾ ಪಿತೃ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ದಿನಗಳು ನವರಾತ್ರಿ ಅವಧಿಯ ಆರಂಭವನ್ನು ಗುರುತಿಸಲ್ಪಡುತ್ತವೆ.
ಈ ಅಮವಾಸ್ಯೆಯು ಜನರು ತಮ್ಮ ಪೂರ್ವಜರ ಆಶೀರ್ವಾದವನ್ನು ಪಡೆಯಲು ವಿವಿಧ ಪೂಜಾ ವಿಧಿಗಳನ್ನು ನಡೆಸುವ ಅತ್ಯಂತ ಮಹತ್ವದ ದಿನವಾಗಿರುತ್ತದೆ. ಕೆಲವರು ಪಿಂಡ ದಾನ ಮತ್ತು ಪಿತೃ ತರ್ಪಣವನ್ನು ಮಾಡುತ್ತಾರೆ. ಊಟ, ಉಪಾಹಾರಕ್ಕಾಗಿ ಬ್ರಾಹ್ಮಣರನ್ನು ಆಹ್ವಾನಿಸುತ್ತಾರೆ. ಅವರಿಗೆ ದಕ್ಷಿಣೆಯೊಂದಿಗೆ ಬಟ್ಟೆ ಮತ್ತು ಇತರ ಕಾಣಿಕೆಗಳನ್ನು ನೀಡುತ್ತಾರೆ. ಪಿತೃಗಳನ್ನು ಸಂತೋಷ ಪಡಿಸಲು ಇದನ್ನು ಮಾಡಲಾಗುತ್ತದೆ.
ಈ ದಿನದ ಆಚರಣೆಗಳು ಏನೇನು?
ಬೆಳಗ್ಗೆ ಬೇಗ ಎದ್ದು ಪೂಜಾ ವಿಧಿವಿಧಾನಗಳನ್ನು ಪ್ರಾರಂಭಿಸುವ ಮೊದಲು ಪವಿತ್ರ ಸ್ನಾನ ಮಾಡಬೇಕು. ಬಳಿಕ ಮನೆಯನ್ನು ಸ್ವಚ್ಛಗೊಳಿಸಿ ಮತ್ತು ಮೊದಲು ಸೂರ್ಯನಿಗೆ ಅರ್ಘ್ಯವನ್ನು ಸಮರ್ಪಿಸಬೇಕು. ಬ್ರಾಹ್ಮಣರಿಗಾಗಿ ಸಾತ್ವಿಕ ಆಹಾರವನ್ನು ತಯಾರಿಸಬೇಕು.
ಕುಟುಂಬದ ಹಿರಿಯ ಸದಸ್ಯ ತರ್ಪಣವನ್ನು ನೀಡಿ, ಹಸು ಮತ್ತು ಕಾಗೆಗಳಿಗೆ ಆಹಾರವನ್ನು ನೀಡುವುದು ಈ ಮಂಗಳಕರ ದಿನದಂದು ಪುಣ್ಯವೆಂದು ಪರಿಗಣಿಸಲಾಗಿದೆ.
Vastu Tips: ಬುದ್ಧನ ಪ್ರತಿಮೆ ಮನೆಯಲ್ಲಿ ಇಡುವುದರಿಂದ ಏನೆಲ್ಲ ಪ್ರಯೋಜನ?
ಎಲ್ಲಾ ಪೂಜಾ ವಿಧಿಗಳನ್ನು ಪೂರ್ಣಗೊಳಿಸಿದ ಅನಂತರ ಕುಟುಂಬದ ಹಿರಿಯ ವ್ಯಕ್ತಿ ಬ್ರಾಹ್ಮಣರಿಗೆ ಆಹಾರ, ಬಟ್ಟೆ ಮತ್ತು ದಕ್ಷಿಣೆಯನ್ನು ನೀಡಬೇಕು. ಬಳಿಕ ಕುಟುಂಬದ ಸದಸ್ಯರು ಆಹಾರವನ್ನು ಸೇವಿಸಬಹುದು.